Byju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್
Byju's Sues Lender Redwood: ಸಾಲಗಾರರು ಅನಗತ್ಯವಾಗಿ ಹಿಂಸೆ ಕೊಟ್ಟು ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೈಜುಸ್, ತನಗೆ ಸಾಲ ಕೊಟ್ಟಿರುವ ರೆಡ್ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧವೇ ಕೋರ್ಟ್ನಲ್ಲಿ ದಾವೆ ಹಾಕಿದೆ.
ನ್ಯೂಯಾರ್ಕ್: ಭಾರತದ ನಂಬರ್ ಒನ್ ಆನ್ಲೈನ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಇದೀಗ ತನ್ನ ಸಾಲಗಾರರ (Lenders) ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ನಿನ್ನೆ ಜೂನ್ 5ರಂದು ಸಾಲದ ಕಂತೊಂದನ್ನು ಕಟ್ಟಲು ಡೆಡ್ಲೈನ್ ಇತ್ತು. ಆದರೆ, 40 ಮಿಲಿಯನ್ ಡಾಲರ್ (ಸುಮಾರು 330 ಕೋಟಿ ರೂ) ಮೊತ್ತದ ಅ ಸಾಲದ ಹಣವನ್ನು ಕಟ್ಟುವ ಬದಲು ಬೈಜುಸ್ ಅಮೆರಿಕದ ನ್ಯೂಯಾರ್ಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ. 330 ಕೋಟಿ ರೂ ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಸಾಲಗಾರರು ಅನಗತ್ಯವಾಗಿ ಹಿಂಸೆ ಕೊಟ್ಟು ಮಾನ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೈಜುಸ್, ತನಗೆ ಸಾಲ ಕೊಟ್ಟಿರುವ ರೆಡ್ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ವಿರುದ್ಧವೇ ಕೋರ್ಟ್ನಲ್ಲಿ ದಾವೆ ಹಾಕಿದೆ.
ರೆಡ್ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆ ದುರಾಸೆಯಿಂದ ತನ್ನ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದೆ. ಈ ಸಂಸ್ಥೆಯನ್ನು ಅನರ್ಹಗೊಳಸಬೇಕು ಎಂದು ನ್ಯೂಯಾರ್ಕ್ ಸುಪ್ರೀಂಕೋರ್ಟ್ನಲ್ಲಿ ಬೈಜುಸ್ ಸಂಸ್ಥೆ ಮನವಿ ಮಾಡಿದೆ.
ಇದರೊಂದಿಗೆ ಬೈಜೂಸ್ ಹಾಗೂ ಅವರ ಸಾಲಗಾರರ ಮಧ್ಯೆ ಅಮೆರಿಕದಲ್ಲಿ ಎರಡು ಕಡೆ ಕೋರ್ಟ್ ಕೇಸ್ ದಾಖಲಾದಂತಾಗಿದೆ. ಡೆಲಾವೇರ್ನಲ್ಲಿ ಬೈಜುಸ್ನ ಸಾಲಗಾರರು ಕೆಲ ತಿಂಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದು, ಅಮೆರಿಕದಲ್ಲಿರುವ ಬೈಜೂಸ್ನ ಅಂಗಸಂಸ್ಥೆ ಆಲ್ಫಾವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಕೇಸ್ನ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: Byju’s: ಬೈಜೂಸ್ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ
ಇದರ ಮಧ್ಯೆ ಈಗ ಬೈಜೂಸ್ ನಿಗದಿತ ಅವಧಿಯೊಳಗೆ ಸಾಲದ ಕಂತು ಕಟ್ಟದೇ ಇರುವುದರಿಂದ ಲೋನ್ ಡೀಫಾಲ್ಟ್ ಆದಂತಾಗಿದೆ. ಕಾನೂನು ಪ್ರಕಾರ ಸಾಲಗಾರರು ಬೈಜೂಸ್ ಅಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಕೋರ್ಟ್ ಮೆಟ್ಟಿಲೇರುವ ಮೂಲಕ ಸಾಲದ ವಿಚಾರವು ವಿವಾದದಲ್ಲಿ ಇರುವುದರಿಂದ ಅದು ಇತ್ಯರ್ಥ ಆಗುವವರೆಗೂ ತಾನು ಸಾಲದ ಕಂತು ಕೊಟ್ಟುವ ಅವಶ್ಯಕತೆಯೇ ಇಲ್ಲ ಎಂಬುದು ಬೈಜುಸ್ನ ವಾದ. ಅವಧಿಗೆ ಮುನ್ನವೇ ಸಾಲ ಕೊಡುವಂತೆ ರೆಡ್ವುಡ್ ಒತ್ತಡ ಹಾಕುತ್ತಿದೆ ಎಂದೂ ಅದು ಆರೋಪಿಸಿದೆ.
ಏನಿದು ಬೈಜೂಸ್ ಸಾಲದ ವಿವಾದ?
ಅಮೆರಿಕದ ರೆಡ್ವುಡ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ ಬೈಜುಸ್ 1.2 ಬಿಲಿಯನ್ ಡಾಲರ್ನಷ್ಟು ಟರ್ಮ್ ಲೋನ್ ಬಿ (ಟಿಎಲ್ಬಿ) ಸಾಲ ಪಡೆದಿತ್ತು. ಟರ್ಮ್ ಲೋನ್ ಬಿ ಪ್ರಕಾರ ಆರಂಭಿಕ ಹಂತಗಳಲ್ಲಿ ಹೆಚ್ಚಿನ ಮೊತ್ತದ ಕಂತುಗಳನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಕೊನೆಕೊನೆಯಲ್ಲಿ ಕಂತಿನ ಮೊತ್ತ ಬಹಳ ಹೆಚ್ಚು ಇರುತ್ತದೆ. ಹೊಸ ಸ್ಟಾರ್ಟಪ್ಗಳು ಸಾಮಾನ್ಯವಾಗಿ ಇಂಥ ಟಿಎಲ್ಬಿ ಸಾಲಗಳನ್ನು ಪಡೆಯುತ್ತವೆ.
ಇದನ್ನೂ ಓದಿ: Alert Alert: ದೇಶಬಿಟ್ಟು ಪರಾರಿಯಾಗುತ್ತಿದ್ದಾರೆ… ಮಾಲೀಕರ ವಿರುದ್ಧವೇ ದೂರು ದಾಖಲಿಸಿದ ಉದ್ಯೋಗಿಗಳು
ಬೈಜುಸ್ ಸುಮಾರು 1.2 ಬಿಲಿಯನ್ ಡಾಲರ್ (9900 ಕೋಟಿ ರೂ) ಸಾಲ ಪಡೆದಿತ್ತು. ಅದರಲ್ಲಿ ಇದ್ದ ಕೆಲ ಷರತ್ತುಗಳಲ್ಲಿ ಹಣಕಾಸು ಲಾಭ ನಷ್ಟದ ವರದಿ ಘೋಷಣೆ ಮಾಡುವುದೂ ಒಂದು. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬೈಜುಸ್ ತನ್ನ ಫೈನಾನ್ಷಿಯಲ್ ರಿಸಲ್ಟ್ ಪ್ರಕಟಿಸಲು ವಿಫಲವಾಗಿತ್ತು. ಅಂದರೆ ಗಡುವಿನೊಳಗೆ ಅದು ವರದಿ ಘೋಷಿಸಲಿಲ್ಲ. ಇದನ್ನೇ ನೆವವಾಗಿಸಿಕೊಂಡು ಸಾಲಗಾರರು ಬೈಜುಸ್ನಿಂದ ಸಾಲದ ಷರತ್ತು ಮುರಿದಿದೆ ಎಂದು ಹೇಳಿ ಇಡೀ ಸಾಲದ ಮೊತ್ತವನ್ನು ತತ್ಕ್ಷಣವೇ ಪಾವತಿಸುವಂತೆ ನೋಟೀಸ್ ನೀಡಿದ್ದವು.
ಈಗ ಏಕಾಏಕಿ ಎಲ್ಲಾ ಸಾಲದ ಮೊತ್ತವನ್ನು ಕೇಳುವುದು ಅಕ್ರಮ ಎನ್ನುವ ಬೈಜುಸ್, ಡೆಲಾವೇರ್ ಕೋರ್ಟ್ನಲ್ಲಿ ಇದನ್ನು ಪ್ರಶ್ನಿಸಿದೆ. ಇದರ ಬೆನ್ನಲ್ಲೇ ನ್ಯೂಯಾರ್ಕ್ ಕೋರ್ಟ್ನಲ್ಲಿ ರೆಡ್ವುಡ್ ಸಂಸ್ಥೆ ವಿರುದ್ದವೂ ಬೈಜುಸ್ ದಾವೆ ಹೂಡಿದೆ. ಈ ಪ್ರಕರಣವನ್ನು ನ್ಯಾಯಾಲಯಗಳು ಯಾವ ರೀತಿಯಲ್ಲಿ ಇತ್ಯರ್ಥ ಮಾಡುತ್ತವೆ ಎಂದು ಕಾದುನೋಡಬೇಕು. ಇದರ ಮಧ್ಯೆ ಬೈಜೂಸ್ ಸಂಸ್ಥೆ ತನ್ನ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯನ್ನು ಮುಂದಿನ ವರ್ಷ ಐಪಿಒಗೆ ತೆರೆಸಿ ಒಂದಷ್ಟು ಬಂಡವಾಳ ಸಂಗ್ರಹಿಸುವ ಇರಾದೆಯಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Tue, 6 June 23