ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಜುಟೆಕ್ ಕಂಪನಿ ಬೈಜೂಸ್ (BYJU’s) ತನ್ನ ಅಂಗಸಂಸ್ಥೆ ಆಕಾಶ್ ಎಜುಕೇಶನಲ್ ಸರ್ವೀಸಸ್ನಿಂದಲೇ (Aakash Educational Services) 300 ಕೋಟಿ ರೂ. ಸಾಲ ಪಡೆದಿದೆ ಎಂದು ವರದಿಯಾಗಿದೆ. ಪ್ರಧಾನ ವ್ಯಾಪಾರ ಚಟುವಟಿಕೆಗಳಿಗೆ ಅಗತ್ಯವಿರುವ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ ಎಂದು ಕಂಪನಿಯ ನಿಯಂತ್ರಕರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕಂಪನಿಯು ಕೇರಳದಲ್ಲಿ ಕಚೇರಿಗಳನ್ನು ಮುಚ್ಚಿದೆ, ಉದ್ಯೋಗಿಗಳಿಂದ ಬಲವಂತವಾಗಿ ರಾಜೀನಾಮೆ ಪಡೆಯುತ್ತಿದೆ ಎಂಬ ದೂರುಗಳೂ ಕೇಳಿಬಂದಿವೆ.
ಬೈಜೂಸ್ ತಿರುವನಂತಪುರದ ಟೆಕ್ನೊಪಾರ್ಕ್ನಲ್ಲಿರುವ ಕಚೇರಿಯನ್ನು ಮುಚ್ಚಿದೆ. ರಾಜೀನಾಮೆ ನೀಡುವಂತೆ ಉದ್ಯೋಗಿಗಳನ್ನು ಒತ್ತಾಯಿಸುತ್ತಿದೆ ಎಂದು ಕೇರಳದ ಸಚಿವ ವಿ. ಶಿವನ್ಕುಟ್ಟಿ ಆರೋಪಿಸಿದ್ದಾರೆ. ಬೈಜೂಸ್ ಉದ್ಯೋಗಿಗಳು ಐಟಿ ಉದ್ಯೋಗಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳ ಜತೆ ಬಂದು ತಮ್ಮನ್ನು ಭೇಟಿಯಾಗಿ ಕಷ್ಟಗಳನ್ನು ಹೇಳಿಕೊಂಡಿದ್ದಾಗಿಯೂ ಸಚಿವರು ತಿಳಿಸಿದ್ದಾರೆ. ಈ ಕುರಿತು ಕಾರ್ಮಿಕ ಇಲಾಖೆ ಗಂಭೀರವಾಗಿ ತಪಾಸಣೆ ನಡೆಸಲಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ನೀವು ಬೆಳವಣಿಗೆಯನ್ನು ಕಾಣುತ್ತಿಲ್ಲ ಎಂದಾದರೆ ಉಳಿದುಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ: ಬೈಜೂಸ್ ಬಗ್ಗೆ ಸುನೀಲ್ ಶೆಟ್ಟಿ
ಕೇರಳದಲ್ಲಿ ಕೊಚ್ಚಿ ಹೊರತುಪಡಿಸಿ ಮತ್ತೆಲ್ಲ ಕಡೆಗಳಲ್ಲಿಯೂ ಬೈಜೂಸ್ ಕಚೇರಿಗಳನ್ನು ಮುಚ್ಚಲಾಗಿದೆ. ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ವಜಾ ನಡೆಯುತ್ತಿದೆ ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಬೈಜೂಸ್ ಬಿಕ್ಕಟ್ಟು; ಇತ್ತೀಚಿನ ಬೆಳವಣಿಗೆಗಳು
ಸೇಲ್ಸ್ ತಂಡದ ಟಾರ್ಗೆಟ್ ಅವಧಿಯನ್ನು 12 ವಾರಗಳಿಂದ 8 ವಾರಗಳಿಗೆ ಇಳಿಕೆ ಮಾಡಲಾಗಿದೆ. ವಾರದ ಕೆಲಸದ ದಿನಗಳನ್ನು 5ರಿಂದ 6ಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಿಂಬಿಸಿ ಉದ್ಯೋಗದಿಂದ ವಜಾಗೊಳಿಸಲು ಕಂಪನಿ ಈ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಇಂಡಿಯಾ ಡಾಟ್ ಕಾಂ’ ವರದಿ ಮಾಡಿದೆ.
ಉದ್ಯೋಗಿಗಳು ಅಕ್ಟೋಬರ್ ತಿಂಗಳ ವೇತನದ ಒಂದು ಬಾರಿಯ ಸೆಟಲ್ಮೆಂಟ್ಗೆ ಬೇಡಿಕೆ ಇಟ್ಟಿದ್ದಾರೆ. ನವೆಂಬರ್ನಿಂದ 2023ರ ಜನವರಿ ವರೆಗಿನ ವೇತನದ ಒಂದು ಬಾರಿಯ ಪಾವತಿಗೂ ಬೇಡಿಕೆ ಇಟ್ಟಿದ್ದಾರೆ. ಜತೆಗೆ ಗಳಿಕೆ ರಜೆಯ ನಗದೀಕರಣ ಹಾಗೂ ವೇರಿಯೇಬಲ್ ಪೇ ಪಾವತಿಗೂ ಪಟ್ಟು ಹಿಡಿದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಷ್ಟದ ಸುಳಿಯಲ್ಲಿ ಬೈಜೂಸ್
21ನೇ ಹಣಕಾಸು ವರ್ಷದಲ್ಲಿ ಬೈಜೂಸ್ 4,588 ಕೋಟಿ ನಷ್ಟ ದಾಖಲಿಸಿತ್ತು. 18 ತಿಂಗಳು ವಿಳಂಬವಾಗಿ ಈ ವರದಿ ಪ್ರಕಟಿಸಿತ್ತು. ಬಹು ನಿರೀಕ್ಷಿತ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಅನ್ನೂ ಬೈಜೂಸ್ ವಿಳಂಬ ಮಾಡುತ್ತಿದೆ. ಜನರಿಂದ ಉತ್ತಮ ಸ್ಪಂದನೆ ದೊರೆಯದಿರಬಹುದೆಂಬ ಆತಂಕದಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ