Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ
ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚಕರು ಹೇಗೆ ನಿಮ್ಮ ಕ್ರೆಡಿಟ್ ಕಾರ್ಡ್ ಖಾತೆಯಿಂದ ಹಣ ಎಗರಿಸಬಹುದು? ಅದನ್ನ ತಡೆಯಲು ನೀವು ಏನು ಮುನ್ನಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಬ್ಯಾಂಕಿಂಗ್ (Banking) ವ್ಯವಸ್ಥೆ ಹೆಚ್ಚೆಚ್ಚು ಡಿಜಿಟಲೈಸ್ ಆದಂತೆ, ಪಾರದರ್ಶಕವಾದಂತೆ ವಂಚಕರೂ ಸಹ ಗ್ರಾಹಕರನ್ನು ಮೋಸಗೊಳಿಸಲು ಹೊಸ ಹೊಸ ತಂತ್ರಗಳನ್ನು ಹೂಡುತ್ತಾರೆ. ಅಕ್ರಮಗಳನ್ನು ತಡೆಯುವುದಕ್ಕಾಗಿ ಬ್ಯಾಂಕ್ಗಳೂ ಸಹ ಪದೇಪದೇ ಗ್ರಾಹಕರನ್ನು ಎಚ್ಚರಿಸುವ, ಅವರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತವೆ. ಆದಾಗ್ಯೂ, ವಂಚನೆ ಜಾಲಕ್ಕೆ ಸಿಲುಕುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬ್ಯಾಂಕಿಂಗ್ ಮತ್ತು ಹಣಕಾಸು ಅಕ್ರಮಗಳಿಗೆ (Banking Frauds) ಸಂಬಂಧಿಸಿ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಿತ್ರಕಥೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಕೆಲ ಸಮಯ ಹಿಂದೆ ಹೊರತಂದಿದೆ. ವಂಚನೆಯ ನಲವತ್ತು ಮುಖಗಳನ್ನು ಅದರಲ್ಲಿ ಪರಿಚಯಿಸಿ ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುವ ಯತ್ನವನ್ನು ಅದರಲ್ಲಿ ಮಾಡಲಾಗಿದೆ.
ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚಕರು ಹೇಗೆ ನಿಮ್ಮ ಕ್ರೆಡಿಟ್ ಕಾರ್ಡ್ ಖಾತೆಯಿಂದ ಹಣ ಎಗರಿಸಬಹುದು? ಅದನ್ನ ತಡೆಯಲು ನೀವು ಏನು ಮುನ್ನಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Banking Frauds: ಆನ್ಲೈನ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಹೀಗೆ ಮೋಸ ಹೋಗಬೇಡಿ
ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 4
ರಾಜು ಎಂಬವರಿಗೆ ಒಮ್ಮೆ ಅಪರಿಚಿತ ಮೊಬೈಲ್ ಸಂಖ್ಯೆಯೊಂದರಿಂದ ಕರೆ ಬರುತ್ತದೆ.
ಅಪರಿಚಿತ: ಗುಡ್ ಮಾರ್ನಿಂಗ್ ರಾಜು ಅವರೇ. ನಾನು ನಿಮ್ಮ ಬ್ಯಾಂಕ್ನಿಂದ ರೋಹಿತ್ ಕುಮಾರ್ ಮಾತನಾಡುತ್ತಿದ್ದೇನೆ. ನೀವು ನಮ್ಮ ಉತ್ತಮ ಗ್ರಾಹಕರಾಗಿದ್ದು, ನಿಮ್ಮ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಮಾಡಿರುವುದನ್ನು ನಿಮಗೆ ತಿಳಿಸಲು ಸಂತಸವಾಗುತ್ತಿದೆ.
ರಾಜು: ಒಹ್, ಒಳ್ಳೆಯ ಸುದ್ದಿ
ಅಪರಿಚಿತ: ಶುಲ್ಕ ಮನ್ನಾ ಪ್ರಕ್ರಿಯೆ ಮುಂದುವರಿಸುವ ಮುನ್ನ ಕೆಲವು ವಿವರಗಳನ್ನು ಖಚಿತಪಡಿಸಿ. ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ 42781234XXX ಅಲ್ಲವೇ? ಪೂರ್ತಿ ಹೆಸರು ರಾಜು ದೇಶಪಾಂಡೆ ಅಲ್ಲವೇ?
ಅಪರಿಚಿತ ವಂಚಕ ಅದಾಗಲೇ ರಾಜು ಅವರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕಲೆಹಾಕಿಕೊಂಡಿದ್ದ.
ರಾಜು: ಹೌದು, ನೀವು ಹೇಳಿದ್ದು ಸರಿಯಾಗಿದೆ.
ಅಪರಿಚಿತ: ರಾಜು ಅವರೇ, ನಿಮ್ಮ ಮೊಬೈಲ್ಗೆ ಬಂದಿರುವ ಒಟಿಪಿ ಸಂಖ್ಯೆಯನ್ನು ತಿಳಿಸಿ. ನಂತರ ನಾವು ನಿಮ್ಮ ಶುಲ್ಕ ಮನ್ನಾ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುತ್ತದೆ.
ತಮ್ಮ ಕ್ರೆಡಿಟ್ ಕಾರ್ಡ್ನ ಎಲ್ಲ ವಿವರ ಅಪರಿಚಿತ ವ್ಯಕ್ತಿಗೆ ತಿಳಿದಿರುವುದರಿಂದ ಆತ ಕರೆ ಮಾಡಿರುವುದು ಬ್ಯಾಂಕ್ನಿಂದಲೇ ಆಗಿರಬಹುದೆಂದು ಭಾವಿಸಿದ ರಾಜು ಒಟಿಪಿಯನ್ನು ಆತನಿಗೆ ತಿಳಿಸುತ್ತಾರೆ.
ಅಪರಿಚಿತ: ಧನ್ಯವಾದಗಳು ರಾಜು ಅವರೇ. ನಿಮ್ಮ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಆಗಿರುತ್ತದೆ. ಶುಭ ದಿನ.
ಕರೆ ಕಟ್ ಆದ ಕೂಡಲೇ ರಾಜು ಕ್ರೆಡಿಟ್ ಕಾರ್ಡ್ ಖಾತೆಯಿಂದ 12,000 ರೂ. ಕಡಿತವಾಗುತ್ತದೆ. ರಾಜು ಕೂಡಲೇ ಅಪರಿಚಿತನ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಾರೆ. ಆದರೆ ಅದು ಸ್ವಿಚ್ಡ್ ಆಫ್ ಆಗಿರುತ್ತದೆ. ರಾಜುಗೆ ತಾನು ಮೋಸ ಹೋಗಿರುವುದು ಅರಿವಾಗುತ್ತದೆ. ಒಟಿಪಿಯನ್ನು ಆತನ ಜತೆ ಹಂಚಿಕೊಳ್ಳಬಾರದಿತ್ತು ಎಂಬುದು ಮನವರಿಕೆಯಾಗುತ್ತದೆ.
ಎಚ್ಚರವಿರಲಿ:
ಯಾರ ಜತೆಗೂ ಒಟಿಪಿ ಹಂಚಿಕೊಳ್ಳಬೇಡಿ. ಅಪರಿಚಿತ ವಂಚಕರು ಹೇಗೋ ಮಾಡಿ ನಿಮ್ಮ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದಿರುತ್ತಾರೆ. ಆದರೆ, ನೀವು ಒಟಿಪಿ ಹಂಚಿಕೊಂಡರೆ ಮಾತ್ರ ಅವರಿಗೆ ವಹಿವಾಟು ನಡೆಸಲು ಮತ್ತು ನಿಮ್ಮ ಖಾತೆಯಿಂದ ಹಣ ಎಗರಿಸಲು ಸಾಧ್ಯವಾಗುತ್ತದೆ ಎಂಬುದು ನೆನಪಿರಲಿ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ