Banking Frauds: ದೂರವಾಣಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಹಾಕಬಹುದು ಕನ್ನ; ತಪ್ಪಿಸಲು ಏನು ಮಾಡಬೇಕು?
ದೂರವಾಣಿ ಕರೆಯ ಮೂಲಕ ವಂಚಕರು ಹೇಗೆ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು, ಅದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಬ್ಯಾಂಕಿಂಗ್ ಮತ್ತು ಹಣಕಾಸು ಅಕ್ರಮಗಳಿಗೆ (Banking Frauds) ಸಂಬಂಧಿಸಿ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಿತ್ರಕಥೆ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪುಸ್ತಕವೊಂದನ್ನು ಕೆಲ ಸಮಯ ಹಿಂದೆ ಹೊರತಂದಿದೆ. ವಂಚನೆಯ ನಲವತ್ತು ಮುಖಗಳನ್ನು ಅದರಲ್ಲಿ ಪರಿಚಯಿಸಿ ‘ರಾಜು ಮತ್ತು ನಲ್ವತ್ತು ಕಳ್ಳರು (Raju and the forty thieves)’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸುವ ಯತ್ನವನ್ನು ಅದರಲ್ಲಿ ಮಾಡಲಾಗಿದೆ.
ದೂರವಾಣಿ ಕರೆಯ ಮೂಲಕ ವಂಚಕರು ಹೇಗೆ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು, ಅದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ಆರ್ಬಿಐ ಎರಡನೇ ಚಿತ್ರಕಥೆಯಲ್ಲಿ ವಿವರಿಸಿದೆ.
ರಾಜು ಮತ್ತು ನಲ್ವತ್ತು ಕಳ್ಳರು ಭಾಗ – 2
ಒಂದು ದಿನ ರಾಜು ಎಂಬ ವ್ಯಕ್ತಿಯ ಮೊಬೈಲ್ಗೆ ಅಪರಿಚಿತ ಸಂಖ್ಯೆಯೊಂದರಿಂದ ಕರೆ ಬರುತ್ತದೆ. ಇಬ್ಬರ ನಡುವೆ ಏನು ಸಂಭಾಷಣೆ ನಡೆಯುತ್ತದೆ? ಆಮೇಲೇನಾಯ್ತು? ಇಲ್ಲಿದೆ;
ಅಪರಿಚಿತ: ಹಲೋ ಸರ್, ನಾನು XYZ ಬ್ಯಾಂಕ್ನಿಂದ ಕರೆ ಮಾಡುತ್ತಿದ್ದೇನೆ.
ರಾಜು: ಹಾಯ್, ಏನು ವಿಷಯ?
ಅಪರಿಚಿತ: ಇದು ನಿಮ್ಮ ವಿಮಾ ಪಾಲಿಸಿಗೆ ಸಂಬಂಧಿಸಿದ ಕರೆಯಾಗಿದೆ. ನಿಮ್ಮ ವಿಮೆಯನ್ನು ಆ್ಯಕ್ಟಿವೇಟ್ ಮಾಡಲಾಗಿದೆ. ನೀವು ಇದಕ್ಕಾಗಿ 18,000 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ರಾಜು: XYZ ಬ್ಯಾಂಕ್ನಲ್ಲಿ ನಾನು ಯಾವುದೇ ವಿಮೆ ಹೊಂದಿಲ್ಲ.
ಅಪರಿಚಿತ: ಪ್ರೊಮೊಷನಲ್ ಆಫರ್ ಆಗಿ ಅತಿ ಕಡಿಮೆ ಬೆಲೆಗೆ ನಾನು ಈ ಆಫರ್ ನೀಡಿದ್ದೇನೆ. ನಿಮಗೆ ಬೇಡವೆಂದಿದ್ದಲ್ಲಿ ಡಿಆ್ಯಕ್ಟಿವೇಟ್ ಮಾಡಬಹುದು.
ರಾಜು: ನನ್ನ ಒಪ್ಪಿಗೆ ಇಲ್ಲದೆ ನೀವು ಹೇಗೆ ಪಾಲಿಸಿ ಆ್ಯಕ್ಟಿವೇಟ್ ಮಾಡಿದಿರಿ ಎಂಬುದು ತಿಳಿಯುತ್ತಿಲ್ಲ. ನಾನು ಹೇಗೆ ನಿಮ್ಮನ್ನು ನಂಬಲಿ?
ಅಪರಿಚಿತ: ಸರ್ ನಾನು ನೇರವಾಗಿ XYZ ಬ್ಯಾಂಕ್ನಿಂದ ಕರೆ ಮಾಡುತ್ತಿದ್ದೇನೆ. ನನ್ನ ಬಳಿ ನಿಮ್ಮ ಜನ್ಮ ದಿನಾಂಕ, ವಿಳಾಸ, ಕಂಪನಿ ಹೆಸರು, ಹುದ್ದೆ ಎಲ್ಲವೂ ಇದೆ.
ರಾಜು: ಸರಿ ಹಾಗಿದ್ದರೆ. ನನ್ನ ಪಾಲಿಸಿಯನ್ನು ಹೇಗೆ ಡಿಆ್ಯಕ್ಟಿವೇಟ್ ಮಾಡುವುದೆಂದು ತಿಳಿಸಿ.
ಅಪರಿಚಿತ: ನಾನೇ ಆನ್ಲೈನ್ ಮೂಲಕ ಮಾಡುತ್ತೇನೆ. ನಿಮ್ಮ ಮೊಬೈಲ್ಗೆ ಬಂದ ಒಟಿಪಿ ಸಂದೇಶವನ್ನು ನನ್ನ ಜತೆ ಹಂಚಿಕೊಳ್ಳಿ.
ರಾಜು: ಸರಿ. ನನಗೆ ಒಟಿಪಿ ಸಂದೇಶ ಬಂದಿದೆ. ಅದು 859623 ಆಗಿದೆ.
ಅಪರಿಚಿತ: ನಿಮ್ಮ ವಿಮೆ ಪಾಲಿಸಿಯನ್ನು ಡಿಆ್ಯಕ್ಟಿವೇಟ್ ಮಾಡಿದ್ದೇನೆ.
ರಾಜು: ಧನ್ಯವಾದಗಳು.
ಇದಾದ ಕೆಲವೇ ನಿಮಿಷಗಳಲ್ಲಿ ರಾಜು ಅವರ ಬ್ಯಾಂಕ್ ಖಾತೆಯಂದ 15,000 ರೂ. ಕಡಿತಗೊಳ್ಳುತ್ತದೆ. ಅವರು ಬ್ಯಾಂಕ್ ಶಾಖೆಗೆ ಹೋಗಿ ವಿಚಾರಿಸಿದಾಗ ಮೋಸಹೋದದ್ದು ತಿಳಿಯುತ್ತದೆ. ಮೊಬೈಲ್ಗೆ ಕರೆ ಬಂದುದು ವಂಚಕನಿಂದ, ತಾನು ಆತನನ್ನು ನಂಬಬಾರದಿತ್ತು ಎಂಬ ಅರಿವಾಗುತ್ತದೆ.
ಅಪರಿಚಿತರ ಕರೆಗಳಿಗೆ ಸ್ಪಂದಿಸಬೇಡಿ
ಬ್ಯಾಂಕ್ ಹೆಸರಿನಲ್ಲಿ ಬರುವ ಅಪರಿಚಿತ ದೂರವಾಣಿ ಕರೆಗೆ ಸ್ಪಂದಿಸಬೇಡಿ. ಅಂಥವರ ಜತೆ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ. ಬ್ಯಾಂಕ್ ಸಿಬ್ಬಂದಿ ಅಂಥ ವಿವರಗಳನ್ನು ಎಂದಿಗೂ ದೂರವಾಣಿ ಮೂಲಕ ಕೇಳುವುದಿಲ್ಲ. ಈ ಡಿಜಿಟಲ್ ಜಗತ್ತಿನಲ್ಲಿ ಅಪರಿಚಿತರನ್ನು ನಂಬಬೇಡಿ ಹಾಗೂ ಅಂಥ ಕರೆಗಳಿಗೆ ಉತ್ತರಿಸಬೇಡಿ.
ಇದನ್ನೂ ಓದಿ: Banking Frauds: ಬ್ಯಾಂಕಿಂಗ್ ಅಕ್ರಮ; ನಿಮ್ಮ ಖಾತೆಗೆ ಹೀಗೂ ಬೀಳಬಹುದು ಕನ್ನ, ಇರಲಿ ಎಚ್ಚರ
(ಮಾಹಿತಿ ಮತ್ತು ಕೃಪೆ – ಆರ್ಬಿಐ)
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ