CCI Penalty on Google: ಗೂಗಲ್ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ
ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್ಗೆ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗ ಇದೀಗ ಮತ್ತೊಮ್ಮೆ 936.44 ಕೋಟಿ ರೂ. ದಂಡ ವಿಧಿಸಿದೆ.
ನವದೆಹಲಿ: ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್ಗೆ (Google) ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗ (CCI) ಇದೀಗ ಮತ್ತೊಮ್ಮೆ ಅಂಥದ್ದೇ ಕಾರಣಕ್ಕಾಗಿ ದಂಡ ಹೇರಿದೆ. ಪ್ಲೇ ಸ್ಟೋರ್ (Play Store) ನೀತಿಗಳಿಗೆ ಸಂಬಂಧಿಸಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿರುವ ಸಿಸಿಐ 936.44 ಕೋಟಿ ರೂ. ದಂಡ ವಿಧಿಸಿದೆ. ಜತೆಗೆ, ನ್ಯಾಯೋಚಿತವಲ್ಲದ ವ್ಯಾಪಾರದ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದೆ.
ನಿಗದಿತ ಕಾಲಮಿತಿಯ ಒಳಗೆ ತನ್ನ ನಡವಳಿಕೆಯನ್ನು ಮಾರ್ಪಡುವಂತೆ ಗೂಗಲ್ಗೆ ಸೂಚಿಸಲಾಗಿದೆ ಎಂದು ಸಿಸಿಐ ಪ್ರಕಟಣೆ ತಿಳಿಸಿದೆ. ಒಂದು ವಾರದ ಅವಧಿಯಲ್ಲಿ ಗೂಗಲ್ ವಿರುದ್ಧ ಸಿಸಿಐ ಕಠಿಣ ನಿಲುವು ತಳೆದ ಎರಡನೇ ಪ್ರಕರಣ ಇದಾಗಿದೆ.
ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಕ್ಟೋಬರ್ 20ರಂದು ಗೂಗಲ್ಗೆ ಸಿಸಿಐ 1,337 ಕೋಟಿ ರೂ. ದಂಡ ವಿಧಿಸಿತ್ತು. ಜತೆಗೆ, ಸ್ಪರ್ಧಾ ವಿರೋಧಿ ಅಭ್ಯಾಸಗಳನ್ನು ಮುಂದುವರಿಸದಂತೆ ಸೂಚಿಸಿತ್ತು.
ಇದನ್ನೂ ಓದಿ: ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್ಗೆ ₹ 1,337 ಕೋಟಿ ದಂಡ ವಿಧಿಸಿದ ಸಿಸಿಐ
ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್ ವಿರುದ್ಧ ಕೇಳಿಬಂದಿದ್ದ ದೂರುಗಳಿಗೆ ಸಂಬಂಧಿಸಿ 2020ರ ಕೊನೆಯಲ್ಲಿ ಸಿಸಿಐ ತನಿಖೆ ಆರಂಭಿಸಿತ್ತು. ಪ್ಲೇಸ್ಟೋರ್ನಲ್ಲಿ ಪಾವತಿ ಮಾಡಿದ ಆ್ಯಪ್ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆ ಅನುಸರಿಸುವುದು ಕಾನೂನುಸಮ್ಮತವಲ್ಲದ ನಡವಳಿಕೆ ಎಂದು ಸಿಸಿಐ ಹೇಳಿದೆ.
Case Nos. 07 of 2020, 14 of 2021 and 35 of 2021
CCI imposes a monetary penalty of ₹ 936.44 Crore on Google for anti-competitive practices in relation to its Play Store policies. Read the full order here: https://t.co/GDR820ffYg Press release: https://t.co/7HEPJeHVK3#Antitrust pic.twitter.com/TbTa6vbCXl
— CCI (@CCI_India) October 25, 2022
ದಂಡ ವಿಧಿಸಿದ ಕ್ರಮಕ್ಕೆ ಗೂಗಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 1,337 ಕೋಟಿ ರೂ. ದಂಡ ವಿಧಿಸಿರುವ ಕ್ರಮದಿಂದ ಭಾರತದ ಗ್ರಾಹಕರು ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಹೇಳಿತ್ತು. ಸ್ಪರ್ಧಾ ಆಯೋಗದ ನಿರ್ಧಾರವನ್ನು ಪರಿಶೀಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ವಕ್ತಾರರು ತಿಳಿಸಿದ್ದರು.
ದಂಡ ವಿಧಿಸಿರುವುದು ಭಾರತೀಯರಿಗೆ ಹಿನ್ನಡೆ ಉಂಟು ಮಾಡಲಿದೆ. ದಂಡದ ಪರಿಣಾಮವಾಗಿ ಆ್ಯಂಡ್ರಾಯ್ಡ್‌ನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮತ್ತು ಭಾರತದ ಉದ್ದಿಮೆಗಳಿಗೆ ಮೊಬೈಲ್ಗಳ ಮೇಲಿನ ಖರ್ಚೂ ಹೆಚ್ಚಾಗಲಿದೆ ಎಂದು ಗೂಗಲ್ ಹೇಳಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ