Muhurat Trading: ಉತ್ತಮ ಗಳಿಕೆಯೊಂದಿಗೆ ಮುಹೂರ್ತ ಟ್ರೇಡಿಂಗ್ ಮುಗಿಸಿದ ನಿಫ್ಟಿ, ಸೆನ್ಸೆಕ್ಸ್, ಇಲ್ಲಿದೆ ಗಳಿಕೆ ವಿವರ
ಮುಹೂರ್ತ ಟ್ರೇಡಿಂಗ್ ಅವಧಿಯಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್ಇ ಹಾಗೂ ರಾಷ್ಟ್ರೀಯ ಸೂಚ್ಯಂಕ ಎನ್ಎಸ್ಇ ನಿಫ್ಟಿ ಉತ್ತಮ ವಹಿವಾಟು ದಾಖಲಿಸಿದವು.
ಮುಂಬೈ: ದೀಪಾವಳಿ (Diwali) ಹಬ್ಬದ ಸಂಭ್ರಮದ ನಡುವೆ ಷೇರು ಮಾರುಕಟ್ಟೆಯಲ್ಲಿ (stock market) ಒಂದು ಗಂಟೆ ಅವಧಿಯ ಮುಹೂರ್ತ ಟ್ರೇಡಿಂಗ್ (Muhurat trading) ಸೋಮವಾರ ಸಂಜೆ 6.15ರಿಂದ 7.15ರ ವರೆಗೆ ನಡೆಯಿತು. ಈ ಅವಧಿಯಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್ಇ ಹಾಗೂ ರಾಷ್ಟ್ರೀಯ ಸೂಚ್ಯಂಕ ಎನ್ಎಸ್ಇ ನಿಫ್ಟಿ ಉತ್ತಮ ವಹಿವಾಟು ದಾಖಲಿಸಿದವು. ಬಿಎಸ್ಇ ಸೆನ್ಸೆಕ್ಸ್ 60 ಸಾವಿರದ ಸನಿಹ ತಲುಪಿ ವಹಿವಾಟು ಕೊನೆಗೊಳಿಸಿದರೆ ನಿಫ್ಟಿ 17,700ಕ್ಕಿಂತ ಹೆಚ್ಚಿನ ಅಂಕ ಗಳಿಸುವ ಮೂಲಕ ವಹಿವಾಟು ಮುಗಿಸಿತು.
ಬಿಎಸ್ಇ ಸೆನ್ಸೆಕ್ಸ್ 524.51 ಅಂಶ ಏರಿಕೆ ಕಂಡು 89,831.66ರಲ್ಲಿ ವಹಿವಾಟು ಕೊನೆಗೊಳಿಸಿದೆ. ಇದರೊಂದಿಗೆ ಮುಹೂರ್ತ ವಹಿವಾಟಿನಲ್ಲಿ ಶೇಕಡಾ 0.88ರ ಗಳಿಕೆ ದಾಖಲಿಸಿದೆ. ಶುಕ್ರವಾರದ ವಹಿವಾಟಿನ ಕೊನೆಯಲ್ಲಿ ಸೆನ್ಸೆಕ್ಸ್ 59,307.15ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.
2008ರ ನಂತರ ಮುಹೂರ್ತ ಟ್ರೇಡಿಂಗ್ ಅವಧಿಯಲ್ಲಿ ಸೆನ್ಸೆಕ್ಸ್ ಇಷ್ಟೊಂದು ಗಳಿಕೆ ಕಂಡಿರುವುದು ಇದೇ ಮೊದಲು. ಹೀಗಾಗಿ 14 ವರ್ಷಗಳ ನಂತರದ ಅತ್ಯುತ್ತಮ ಮುಹೂರ್ತ ಟ್ರೇಡಿಂಗ್ ಇಂದು ನಡೆದಿದೆ ಎಂದು ‘ಬ್ಯುಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದೆ.
ಇದನ್ನೂ ಓದಿ: Dhanteras 2022: ಭಾರತ-ಪಾಕ್ ಪಂದ್ಯದ ವೇಳೆ ಬಿಕೋ ಎಂದ ಆಭರಣ ಮಾರುಕಟ್ಟೆ; ನಂತರ ಚೇತರಿಸಿದ ಮಾರಾಟ
ಮತ್ತೊಂದೆಡೆ, ಮುಹೂರ್ತ ವಹಿವಾಟಿನಲ್ಲಿ ನಿಫ್ಟಿ 154.45 ಅಂಶ ಚೇತರಿಕೆ ಕಂಡು 17,730.75ರಲ್ಲಿ ವಹಿವಾಟು ಕೊನೆಗೊಳಿಸಿದೆ. ಇದರೊಂದಿಗೆ ಶೇಕಡಾ 0.88ರಷ್ಟು ಏರಿಕೆ ಕಂಡಿದೆ. ಶುಕ್ರವಾರದ ವಹಿವಾಟಿನ ಕೊನೆಯಲ್ಲಿ ನಿಫ್ಟಿ ಶೇಕಡಾ 0.07ರಷ್ಟು ಅಥವಾ 12.35 ಅಂಶ ಚೇತರಿಕೆ ಕಂಡು 17,576.30ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು.
ಡಾ. ರೆಡ್ಡೀಸ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಎನ್ಟಿಪಿಸಿ ಹಾಗೂ ಎಲ್ ಆ್ಯಂಡ್ ಟಿ ಷೇರುಗಳು ಶೇಕಡಾ 2.92ರ ವರೆಗೆ ಗಳಿಕೆ ದಾಖಲಿಸಿವೆ. ಹಿಂದೂಸ್ತಾನ್ ಯುನಿಲೀವರ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಶೇಕಡಾ 3.05ರ ವೃದ್ಧಿ ಕಂಡುಬಂದಿದೆ.
ಇದನ್ನೂ ಓದಿ: Stock Market Updates: ಸತತವಾಗಿ ಹೊರಹೋಗುತ್ತಿದೆ ವಿದೇಶಿ ಬಂಡವಾಳ, ಕಾರಣವೇನು?
ದೀಪಾವಳಿ ಹಾಗೂ ಧನ್ತೇರಸ್ ಅಥವಾ ಧನತ್ರಯೋದಶಿ ಪ್ರಯುಕ್ತ ಚಿನ್ನ, ಬೆಳ್ಳಿ ಹಾಗೂ ಆಭರಣ ಮಾರಾಟದಲ್ಲಿಯೂ ದೇಶದಾದ್ಯಂತ ಶನಿವಾರ ಹಾಗೂ ಭಾನುವಾರಗಳಂದು ಹುರುಪು ಕಂಡುಬಂದಿತ್ತು. ಕಳೆದ ವರ್ಷದ ದೀಪಾವಳಿ ಸಂದರ್ಭದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ ಶೇಕಡಾ 35ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಮಾರುಕಟ್ಟೆ ಮೂಲಗಳು ಸೋಮವಾರ ಬೆಳಿಗ್ಗೆ ತಿಳಿಸಿದ್ದವು. ಇದೀಗ ಷೇರುಪೇಟೆಯಲ್ಲಿಯೂ ಉತ್ತಮ ಗಳಿಕೆಯೊಂದಿಗೆ ಮುಹೂರ್ತ ವಹಿವಾಟು ಕೊನೆಗೊಂಡಿರುವುದು ಹೂಡಿಕೆದಾರರಲ್ಲಿ ಆಶಾವಾದ ಮೂಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ