ICICI Bank Q2 Result: ತ್ರೈಮಾಸಿಕ ಫಲಿತಾಂಶ; ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರೀ ಜಿಗಿತ
ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ನ ಕ್ರೂಡೀಕೃತ ನಿವ್ವಳ ಲಾಭದಲ್ಲಿ ಭಾರಿ ಹೆಚ್ಚಳವಾಗಿದೆ.
ಮುಂಬೈ: ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ನ (ICICI Bank) ಕ್ರೂಡೀಕೃತ ನಿವ್ವಳ ಲಾಭದಲ್ಲಿ (net profit) ಭಾರಿ ಹೆಚ್ಚಳವಾಗಿದೆ. ಕ್ರೂಡೀಕೃತ ನಿವ್ವಳ ಲಾಭ ಶೇಕಡಾ 31.43ರಷ್ಟು ಹೆಚ್ಚಳಗೊಂಡು 8,006.99 ಕೋಟಿ ರೂಪಾಯಿ ಆಗಿದೆ. ನಿವ್ವಳ ಲಾಭದಲ್ಲಿ ಶೇಕಡಾ 37.14ರಷ್ಟು ಹೆಚ್ಚಾಗಿದ್ದು, 7,557.84 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಇದು 5,510.95 ಕೋಟಿ ರೂಪಾಯಿ ಆಗಿತ್ತು.
ಬ್ಯಾಂಕ್ನ ಒಟ್ಟು ಆದಾಯ 31,088 ಕೋಟಿ ರೂ.ಗೆ ಏರಿಕೆಯಾಗಿದೆ. ವೆಚ್ಚ ಕೂಡ ಹೆಚ್ಚಾಗಿದ್ದು, 19,408 ಕೋಟಿ ಆಗಿದೆ. ಕಳೆದ ವರ್ಷ ಇದು 18,027 ಕೋಟಿ ಆಗಿತ್ತು. ಶುಕ್ರವಾರದ ಷೇರುವಹಿವಾಟಿನಲ್ಲಿ ಬ್ಯಾಂಕ್ನ ಷೇರು ಮೌಲ್ಯ ಶೇಕಡಾ 2.13ರಷ್ಟು ವೃದ್ಧಿಯಾಗಿತ್ತು.
ಠೇವಣಿ ಪ್ರಮಾಣ ಶೇಕಡಾ 12ರಷ್ಟು ಹೆಚ್ಚಳವಾಗಿ 10.90 ಟ್ರಿಲಿಯನ್ ರೂ.ಗೆ ಹೆಚ್ಚಳವಾಗಿದೆ. ಕರೆಂಟ್ ಅಕೌಂಟ್ ಮತ್ತು ಉಳಿತಾಯ ಖಾತೆಗಳ ಸರಾಸರಿ ಠೇವಣಿ ಶೇಕಡಾ 16ರಷ್ಟು ಹೆಚ್ಚಳಗೊಂಡಿದೆ.
ಆರ್ಬಿಎಲ್ ಬ್ಯಾಂಕ್ ನಿವ್ವಳ ಲಾಭದಲ್ಲಿಯೂ ಜಿಗಿತ
ಆರ್ಬಿಎಲ್ ಬ್ಯಾಂಕ್ ನಿವ್ವಳ ಲಾಭದಲ್ಲಿ ಹಲವು ಪಟ್ಟು ಹೆಚ್ಚಳವಾಗಿದ್ದು, 202 ಕೋಟಿ ರೂ. ಲಾಭ ಗಳಿಸಿದೆ. ವರ್ಷದ ಹಿಂದೆ ಬ್ಯಾಂಕ್ನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯ ಲಾಭ ಕೇವಲ 31 ಕೋಟಿ ರೂ. ಆಗಿತ್ತು. ಬ್ಯಾಂಕ್ನ ಆದಾಯ 2,758.98 ಕೋಟಿ ರೂ.ಗೆ ಏರಿಕೆಯಾಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ನಿವ್ವಳ ಲಾಭವೂ ಹೆಚ್ಚಳ
ಕೋಟಕ್ ಮಹೀಂದ್ರಾ ಬ್ಯಾಂಕ್ ತ್ರೈಮಾಸಿಕ ಫಲಿಗತಾಂಶವೂ ಪ್ರಕಟವಾಗಿದ್ದು, ನಿವ್ವಳ ಲಾಭದಲ್ಲಿ ಶೇಕಡಾ 27ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಬ್ಯಾಂಕ್ 2,581 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಲಾಭ 2,032 ಕೋಟಿ ರೂ. ಆಗಿತ್ತು.
ಯೆಸ್ ಬ್ಯಾಂಕ್ ನಿವ್ವಳ ಲಾಭದಲ್ಲಿ ಕುಸಿತ
ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಯೆಸ್ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡಾ 32ರಷ್ಟು ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 225 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದ ಬ್ಯಾಂಕ್ ಈ ಬಾರಿ ಗಳಿಸಿರುವುದು 153 ಕೋಟಿ ರೂ. ಮಾತ್ರ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sat, 22 October 22