Energy prices: ಜಾಗತಿಕ ಇಂಧನ ದರ 2023ರಲ್ಲಿ 11% ಇಳಿಕೆ; ವಿಶ್ವಬ್ಯಾಂಕ್
ಜಾಗತಿಕ ಇಂಧನ ದರ ಇಳಿಕೆಯ ಪರಿಣಾಮವಾಗಿ ದೇಶೀಯ ಮಾರುಕಟ್ಟೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಸು ಇಳಿಕೆಯಾಗುವ ಸಾಧ್ಯತೆ ಇದೆ.
ನವದೆಹಲಿ: ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕ ಇಂಧನ ದರದಲ್ಲಿ ಇಳಿಕೆಯಾಗಲಿದೆ. 2023ರಲ್ಲಿ ಜಾಗತಿಕ ಇಂಧನ ದರ (Energy prices) ಶೇಕಡಾ 11ರಷ್ಟು ಕಡಿಮೆಯಾಗಲಿದೆ. ಆದರೆ ಐತಿಹಾಸಿಕ ಸರಾಸರಿಗಿಂತ ಮೇಲ್ಮಟ್ಟದಲ್ಲಿ ಇರಲಿದೆ ಎಂದು ವಿಶ್ವಬ್ಯಾಂಕ್ (World Bank) ಅಧ್ಯಯನ ವರದಿ ತಿಳಿಸಿದೆ. ಆರ್ಥಿಕ ಹಿಂಜರಿತದಿಂದಾಗಿ ಅನೇಕ ದೇಶಗಳಲ್ಲಿ ಆಯಾ ದೇಶಗಳ ಕರೆನ್ಸಿ ಲೆಕ್ಕಾಚಾರದಲ್ಲಿ ಬೆಲೆ ಹೆಚ್ಚಾಗುತ್ತಲೇ ಇದೆ. ಜಾಗತಿಕ ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿದ್ದು, ತೀವ್ರಗೊಳ್ಳುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಸರಕು ಬೆಲೆಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಆದರೆ, ಕಳೆದ ಐದು ವರ್ಷಗಳ ಸರಾಸರಿ ಬೆಲೆಗಿಂತ ಹೆಚ್ಚೇ ಇರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
2023ರಲ್ಲಿ ಇಂಧನ ದರ ಶೇಕಡಾ 11ರಷ್ಟು ಇಳಿಕೆಯಾಗಲಿದ್ದು, 2024ರಲ್ಲಿ ಶೇಕಡಾ 12ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಆದಾಗ್ಯೂ, ಕಳೆದ ಐದು ವರ್ಷಗಳ ಸರಾಸರಿ ಬೆಲೆಗೆ ಹೋಲಿಸಿದರೆ ಶೇಕಡಾ 50ಕ್ಕಿಂತಲೂ ಹೆಚ್ಚೇ ಇರಲಿದೆ ಎಂದು 2022ರ ಅಕ್ಟೋಬರ್ ಅವಧಿಗೆ ಬಿಡುಗಡೆ ಮಾಡಿರುವ ‘ಸರಕು ಮಾರುಕಟ್ಟೆಗಳ ಔಟ್ಲುಕ್ ವರದಿ’ಯಲ್ಲಿ ವಿಶ್ವಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ: Petrol Price on October 27: ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
2023ರಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಸರಾಸರಿ 92 ಡಾಲರ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಕಳೆದ ಐದು ವರ್ಷಗಳ ಸರಾಸರಿ ಬೆಲೆಗೆ ಹೋಲಿಸಿದರೆ 30 ಡಾಲರ್ನಷ್ಟು ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಸರಾಸರಿ 60 ಡಾಲರ್ ಇತ್ತು. 2024ರಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಸರಾರಿ 80 ಡಾಲರ್ ಇರಬಹುದು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಪರಿಣಾಮವಾಗಿ ದೇಶೀಯ ಮಾರುಕಟ್ಟೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಸು ಇಳಿಕೆಯಾಗುವ ಸಾಧ್ಯತೆ ಇದೆ.
2023ರಲ್ಲಿ ನೈಸರ್ಗಿಕ ಅನಿಲ ಹಾಗೂ ಕಲ್ಲಿದ್ದಲು ಬೆಲೆ ಕೂಡ ಇಳಿಕೆಯಾಗುವ ಸಂಭವವಿದೆ. ಆದರೆ ಆಸ್ಟ್ರೇಲಿಯಾ ಮತ್ತು ಅಮೆರಿಕದ ನೈಸರ್ಗಿಕ ಅನಿಲದ ದರ ಕಳೆದ ಐದು ವರ್ಷಗಳ ಸರಾಸರಿ ಜತೆ ಹೋಲಿಸಿದರೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.
ಈ ಮಧ್ಯೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಕಚ್ಚಾ ತೈಲ ಬೆಲೆ ತೀವ್ರ ಏರಿಕೆ ಕಂಡಿತ್ತು. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ ಶೇಕಡಾ 0.3ರಷ್ಟು ಹೆಚ್ಚಾಗಿ 95.94 ಡಾಲರ್ಗೆ ಹೆಚ್ಚಳಗೊಂಡಿತ್ತು. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ ಶೇಕಡಾ 0.2ರಷ್ಟು ಹೆಚ್ಚಾಗಿ 88.10 ಡಾಲರ್ ಆಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ