
ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಸಂಘರ್ಷ (Operation Sindoor) ಮುಂದುವರಿಯುತ್ತಿದೆ. ಭಾರತ ಮನಸು ಮಾಡಿದರೆ ಪಾಕಿಸ್ತಾನವನ್ನು ಕ್ಷಣಮಾತ್ರದಲ್ಲಿ ಹೊಸಕಿ ಹಾಕಬಹುದು ಎನ್ನುವ ಮಾತುಗಳು ಕೇವಲ ಮಾತಿಗಷ್ಟೇ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಉಗ್ರ ರಾಷ್ಟ್ರವನ್ನು ಮಣಿಸುವುದು ಸುಲಭದ ಮಾತಲ್ಲ. ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾದ ಸ್ವಾಮಿನಾಥನ್ ಅಯ್ಯರ್ (Swaminathan Aiyar) ಪ್ರಕಾರ, ಪಾಕಿಸ್ತಾನವನ್ನು ಸೋಲಿಸಲು ಭಾರತಕ್ಕೆ ಕಷ್ಟದ ಸಂಗತಿ. ಅಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ಕೊನೆಗಾಣಿಸಲು ಮಿಲಿಟರಿ ಮೂಲಕ ಸಾಧ್ಯವಿಲ್ಲ, ರಾಜಕೀಯ ನಿರ್ಣಯದಿಂದ ಪರಿಹಾರ ಸಾಧ್ಯ ಎನ್ನುತ್ತಾರೆ. ಆದರೆ, ಪಾಕಿಸ್ತಾನ ತನ್ನ ಜನರನ್ನು ಮೆಚ್ಚಿಸಲು ಮತ್ತು ಭಾರತದಲ್ಲಿ ಜನಸಾಮಾನ್ಯರನ್ನು ಗಾಬರಿಗೊಳಿಸಲು ಮೇಲ್ನೋಟಕ್ಕೆ ಆರ್ಭಟಿಸುತ್ತಿದೆ. ಭಾರತ ಇನ್ನೂ ದೊಡ್ಡ ಪ್ರಹಾರ ಕೊಟ್ಟಿಲ್ಲ ಅಷ್ಟೇ ಎಂಬುದು ಮತ್ತೊಂದು ಪ್ರತಿವಾದ ಇದೆ.
ಪಾಕಿಸ್ತಾನಕ್ಕೆ ಸಾಲ ನೀಡುವ ಸಂಬಂಧ ಇವತ್ತು ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಮೀಟಿಂಗ್ ಇದೆ. ಭಾರತವೂ ವೋಟಿಂಗ್ನಲ್ಲಿ ಪಾಲ್ಗೊಳ್ಳಲಿದೆ. ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ ಎಂದು ಐಎಂಎಫ್ಗೆ ಭಾರತ ಮನವಿ ಮಾಡಿದೆ. ಆದರೆ, ಸ್ವಾಮಿನಾಥನ್ ಅಯ್ಯರ್ ಪ್ರಕಾರ, ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಸಿಗುವಂತೆ ತಡೆಯಲು ಭಾರತಕ್ಕೆ ಆಗದೇ ಹೋಗಬಹುದು. ಯಾಕೆಂದರೆ, ಐಎಂಎಫ್ನ ಬೋರ್ಡ್ಗೆ ಒಂದು ನಿರ್ಣಯ ಹೋಗಿದೆ ಎಂದರೆ ಅದಕ್ಕೆ ಸಹಮತ ಇದ್ದೇ ಹೋಗಿರುತ್ತದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ನೆರವು ನೀಡಲು ಚೀನಾ ಇದ್ದೇ ಇದೆ ಎನ್ನುತ್ತಾರೆ ಸ್ವಾಮಿನಾಥನ್ ಅಯ್ಯರ್.
ಇದನ್ನೂ ಓದಿ: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಇಷ್ಟು ದೂರ ಹೋಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಎರಡೂ ದೇಶಕ್ಕೂ ಯುದ್ಧವನ್ನು ಗೆಲ್ಲಲು ಆಗುವುದಿಲ್ಲ. ಕೆಲ ನಗರಗಳ ಮೇಲೆ ದಾಳಿ ಮಾಡಬಹುದು. ಯಾರಿಗೂ ಗೆಲುವು ದಕ್ಕುವುದಿಲ್ಲ. ನೀವು ದಾಳಿ ಹೆಚ್ಚಿಸಿದರೆ ಅಷ್ಟೇ ಪ್ರತಿದಾಳಿ ಬರುತ್ತದೆ. ನೀವೆಷ್ಟು ದೊಡ್ಡ ಸೇನೆ ಎಂಬುದು ಮುಖ್ಯವಲ್ಲ. ವಾಸ್ತವ ಎಂದರೆ ಪಾಕಿಸ್ತಾನ ಒಂಟಿಯಾಗಿಲ್ಲ. ಪಾಕಿಸ್ತಾನಕ್ಕೆ ಗಂಭೀರ ಅಪಾಯ ಎದುರಾದರೆ ಚೀನಾ ಬರುತ್ತದೆ. ಲಡಾಖ್ ಮತ್ತು ಅರುಣಾಚಲಪ್ರದೇಶದ ಮೇಲೆ ಅದು ಆಕ್ರಮಣ ಮಾಡಬಹುದು ಎಂದು ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಮತ್ತೊಬ್ಬ ಆರ್ಥಿಕ ತಜ್ಞ ಡಾ. ವಿಧುಶೇಖರ್ ಅವರ ಪ್ರಕಾರ, ಪಾಕಿಸ್ತಾನದ ನೆರವಿಗೆ ಚೀನಾ ನೇರವಾಗಿ ಬರುವ ಸಾಧ್ಯತೆ ಇಲ್ಲ. ತಾನು ಈ ಸಂಘರ್ಷದಲ್ಲಿ ಪಾಕಿಸ್ತಾನದ ಪರ ನಿಂತರೆ ಭಾರತವು ಅಮೆರಿಕದ ಜೊತೆ ಸೇರಿಬಿಡಬಹುದು ಎನ್ನುವ ಭಯ ಮತ್ತು ಗೊಂದಲ ಚೀನಾಗೆ ಇದ್ದೇ ಇದೆ. ಹೀಗಾಗಿ, ಅದು ಅಷ್ಟು ಸುಲಭಕ್ಕೆ ಭಾರತದ ವಿರುದ್ಧ ಯುದ್ಧಕ್ಕೆ ಬರುವುದಿಲ್ಲ ಎನ್ನುತ್ತಾರೆ ಅವರು.
ಇದನ್ನೂ ಓದಿ: ಟರ್ಕಿ ಏರ್ಲೈನ್ಸ್ ಜೊತೆ ಪಾರ್ಟ್ನರ್ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್ಸ್ಟೇಸ್ ಘೋಷಣೆ
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ಆಗಲಿ ಎಂದು ಅನೇಕ ಪ್ರಬಲ ದೇಶಗಳು ಬಯಸುತ್ತಿವೆ. ಪಾಕಿಸ್ತಾನಕ್ಕೆ ಯುದ್ಧ ಅನಿವಾರ್ಯ ಎಂಬಂತಾಗಿದೆ. ಅದರಲ್ಲೂ ಈಗಲೇ ಯುದ್ಧ ಆಗಲಿ ಎಂದು ಬಯಸುತ್ತಿದೆ. ಹೀಗಾಗಿ, ಕೆಣಕುತ್ತಲೇ ಇದೆ. ಭಾರತ ಯುದ್ಧಕ್ಕೆ ಎರಗಿದರೆ ಕೆಲ ಪ್ರಬಲ ದೇಶಗಳಿಂದ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಬರುತ್ತದೆ. ಇದಕ್ಕಾಗಿ ಈ ಉಗ್ರ ದೇಶ ಈ ಕಿತಾಪತಿ ಮಾಡುತ್ತಿದೆ ಎಂಬುದು ವಿಧುಶೇಖರ್ ಅವರ ಅನಿಸಿಕೆ.
ಯಾವುದೇ ಸೇನೆಯನ್ನು ಸದಾ ಕಾಲ ಜಾಗೃತಿಯಲ್ಲಿ ಇಡುವುದು ಆರ್ಥಿಕ ದೃಷ್ಟಿಯಿಂದ ಮತ್ತು ಮಾನಸಿಕ ದೃಷ್ಟಿಯಿಂದ ಬಹಳ ಶಕ್ತಿ ವ್ಯಯವಾಗುತ್ತದೆ. ಭಾರತವು ಮುನ್ನುಗ್ಗಿದ ಸ್ಥಿತಿಯಲ್ಲೇ ಇದ್ದು ಹೆಚ್ಚೇನೂ ಪ್ರಹಾರ ಮಾಡುತ್ತಿಲ್ಲ ಎಂದರೆ ಪಾಕಿಸ್ತಾನದ ಶಕ್ತಿಯನ್ನು ಬಸಿಯುವುದು ಉದ್ದೇಶವಾಗಿದೆ. ಇದು ಪಾಕಿಸ್ತಾನಕ್ಕೂ, ಅದನ್ನು ಪ್ರಾಯೋಜಿಸುತ್ತಿರುವ ದೇಶಗಳಿಗೂ ಹತಾಶೆಗೊಳಿಸುವಂತಹ ನಡೆ ಎನ್ನುತ್ತಾರೆ ವಿಧುಶೇಖರ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:59 pm, Fri, 9 May 25