ಕಾರ್ಪೊರೇಟ್ ಕಂಪನಿಗಳಿಂದ ಆಗುವ ಪರಿಸರ ಮಾಲಿನ್ಯವನ್ನು ತಡೆಯಲು ವಿಶ್ವದ ಹಲವೆಡೆ ಕಾರ್ಬನ್ ಕ್ರೆಡಿಟ್ (Carbon Credit) ಎಂಬ ವ್ಯವಸ್ಥೆ ಇದೆ. ಭಾರತದಲ್ಲಿ ಇನ್ನೆರಡು ವಾರದಲ್ಲಿ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ನ ಅಂತಿಮ ರೂಪುರೇಖೆ ಸಿದ್ಧಪಡಿಸಲು ಸರ್ಕಾರ ಯೋಜಿಸಿದೆ. ಕೇಂದ್ರ ವಿದ್ಯುತ್ ಕಾರ್ಯದರ್ಶಿ ಅಲೋಕ್ ಕುಮಾರ್ (Power Secretary Alok Kumar) ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. 2022ರ ಶಕ್ತಿ ಸಂರಕ್ಷಣೆ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿತ್ತು. ಆ ಮೂದೆಯಲ್ಲಿ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ವಿಚಾರ ಇದೆ. ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ (ಬಿಇಇ) ಸಂಸ್ಥೆ ಜೊತೆ ಸಮಾಲೋಚನೆ ನಡೆಸಿ ಕಾರ್ಬನ್ ಟ್ರೇಡಿಂಗ್ ಸ್ಕೀಮ್ ವಿನ್ಯಾಸಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ ಈ ಮಸೂದೆ.
ವಾತಾವರಣದಲ್ಲಿ ಸೇರಿರುವ ಹಸಿರುಮನೆ ಅನಿಲಗಳನ್ನು ನಿರ್ಮೂಲನೆ ಮಾಡಲು ಅಥವಾ ಕಡಿಮೆ ಮಾಡುವ ಉದ್ದೇಶದಿಂದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಅನ್ನು ಜಾರಿಗೆ ತರಲಾಗುತ್ತಿದೆ. ಒಂದು ಕಾರ್ಬನ್ ಕ್ರೆಡಿಟ್ ಯೂನಿಟ್ ಎಂದರೆ ವಾತಾವರಣದಿಂದ 1 ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ನಿರ್ಮೂಲಗೊಳಿಸಿರುವುದಕ್ಕೆ ಸಮ. ಒಂದು ಟನ್ ಇಂಗಾಲ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡಿದರೆ ಒಂದು ಕಾರ್ಬನ್ ಕ್ರೆಡಿಟ್ ಸಿಗುತ್ತದೆ. ಇದನ್ನು ಹೊಂದಿದ ಯಾವುದೇ ಕಂಪನಿಯು ಅಷ್ಟು ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರಸೂಸುವ ಅವಕಾಶ ಹೊಂದಿರುತ್ತವೆ. ಈ ಕಾರ್ಬನ್ ಕ್ರೆಡಿಟ್ಗಳನ್ನು ಮಾರಾಟ ಮಾಡಲು ಮತ್ತು ಖರೀದಿ ಮಾಡಲು ಅವಕಾಶ ಮಾಡಿಕೊಡುತ್ತದೆ ಸಿಸಿಟಿಎಸ್ ಸ್ಕೀಮ್.
ಇದನ್ನೂ ಓದಿ: Share Market Shock: ಎರಡು ದಿನ ಭಯಂಕರ ಉಬ್ಬಿದ್ದ ಷೇರುಪೇಟೆ ಗುರುವಾರ ಠುಸ್; 2 ಲಕ್ಷ ಕೋಟಿ ನಷ್ಟಕಂಡ ಹೂಡಿಕೆದಾರರು
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಉದ್ಯಮಗಳ ಸಂಸ್ಥೆಗಳು ಈ ಕಾರ್ಬನ್ ಕ್ರೆಡಿಟ್ಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ. ಕಲ್ಲಿದ್ದಲು, ವಿದ್ಯುತ್ ಉತ್ಪಾದನೆ, ಗಣಿಗಾರಿಕೆ ಇತ್ಯಾದಿ ಕ್ಷೇತ್ರಗಳ ಕಂಪನಿಗಳ ವೆಚ್ಚ ಹೆಚ್ಚಾಗಬಹುದು.
ಆದರೆ, ವಾತಾವರಣದಿಂದ ಕಾರ್ಬನ್ ಹೊರಸೂಸುವಿಕೆ ಎಷ್ಟು ಕಡಿಮೆ ಆಗಿದೆ ಎಂಬುದನ್ನು ಅಳೆಯುವ ವಿಧಾನಗಳು ಮತ್ತಿತರ ಮಾನದಂಡ ಹಾಗೂ ವ್ಯವಸ್ಥೆಗಳನ್ನು ರೂಪಿಸಬೇಕಿದೆ. ಇಂಡಿಯನ್ ಕಾರ್ಬನ್ ಮಾರ್ಕೆಟ್ (ಐಸಿಎಂ) ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ತಂತ್ರಜ್ಞಾನಗಳನ್ನು ಬಳಸಿ ಪರಿಸರ ಮಾಲಿನ್ಯ ತಡೆದು ಆ ಮೂಲಕ ಕಾರ್ಬನ್ ಕ್ರೆಡಿಟ್ಗಳನ್ನು ಪಡೆಯುವಂತಹ ಅವಕಾಶಗಳಿವೆ. ಕಾರ್ಬನ್ ಕ್ರೆಡಿಟ್ ಸೃಷ್ಟಿಗೆ ಒಳ್ಳೆಯ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಲೂ ಇಂಡಿಯನ್ ಕಾರ್ಬನ್ ಮಾರ್ಕೆಟ್ ಅನುವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ