Share Market Shock: ಎರಡು ದಿನ ಭಯಂಕರ ಉಬ್ಬಿದ್ದ ಷೇರುಪೇಟೆ ಗುರುವಾರ ಠುಸ್; 2 ಲಕ್ಷ ಕೋಟಿ ನಷ್ಟಕಂಡ ಹೂಡಿಕೆದಾರರು
BSE Listed Companies See Loss Of Market Cap: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟು ಷೇರು ಸಂಪತ್ತು 294.4 ಲಕ್ಷ ಕೋಟಿ ಇದ್ದದ್ದು 292.3 ಲಕ್ಷ ಕೋಟಿ ರೂಗೆ ಇಳಿದಿದೆ. 2.1 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಕರಗಿದೆ.
ನವದೆಹಲಿ: ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕಗಳು ಗುರುವಾರ (ಜೂನ್ 22) ಭೀಕರ ಹೊಡೆತಕ್ಕೆ ಸಿಲುಕಿದಂತೆ ಹಿನ್ನಡೆ ಕಂಡಿವೆ. ನಿನ್ನೆ ಬುಧವಾರ ಎರಡೂ ಕೂಡ ದಾಖಲೆ ಮಟ್ಟಕ್ಕೆ ಹೋಗಿ ನಿಂತಿದ್ದವು. ಇಂದು ಸೆನ್ಸೆಕ್ಸ್ (BSE Sensex) ಬರೋಬ್ಬರಿ 284 ಅಂಕಗಳನ್ನು ಕಳೆದುಕೊಂಡಿದೆ. 63,601.71 ವರೆಗೂ ಏರಿದ್ದ ಅದು 63,238.89 ಅಂಕಗಳಿಗೆ ಬಂದು ನಿಂತಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ 86 ಅಂಕಗಳು ಕಡಿಮೆಗೊಂಡು 18,771.25ರ ಮಟ್ಟಕ್ಕೆ ಬಂದಿದೆ. ಇನ್ನು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (ಬಿಎಸ್ಇ) ಸೆನ್ಸೆಕ್ಸ್ ಇಂಡೆಕ್ಸ್ನಲ್ಲಿರುವ ಕಂಪನಿಗಳೂ ಒಳಗೊಂಡಂತೆ ಎಲ್ಲಾ ಕಂಪನಿಗಳ ಷೇರುಸಂಪತ್ತು ಗಣಿಸಿದಾಗ 2 ಲಕ್ಷ ಕೋಟಿ ರೂಗಿಂತ ಹೆಚ್ಚು ಸಂಪತ್ತು ಕರಗಿರುವುದು ತಿಳಿದುಬಂದಿದೆ.
ಹಿಂದಿನ ದಿನ ಬಿಎಸ್ಇನಲ್ಲಿ ಲಿಸ್ಟ್ ಆಗಿದ್ದ ಕಂಪನಿಗಳ ಒಟ್ಟು ಷೇರುಸಂಪತ್ತು 294.4 ಲಕ್ಷ ಕೋಟಿ ರೂ ಇತ್ತು. ಇವತ್ತು ಅದು 292.3 ಲಕ್ಷ ಕೋಟಿ ರೂ ಆಗಿದೆ. ಒಂದೇ ದಿನದಲ್ಲಿ 2.1 ಲಕ್ಷ ಕೋಟಿ ರೂ ಷೇರುಸಂಪತ್ತು ಕಡಿಮೆ ಆಗಿದೆ.
ದಿಢೀರ್ ಷೇರುಪೇಟೆ ಅಲುಗಾಡಲು ಮತ್ತೆ ವಿಶ್ವ ದೊಡ್ಡಣನೇ ಕಾರಣನಾದನಾ?
ಜಗತ್ತಿನ ಹಲವು ಆರ್ಥಿಕ ಏರಿಳಿತಕ್ಕೆ, ಅದರಲ್ಲೂ ಷೇರಪೇಟೆಯ ವ್ಯತ್ಯಯಗಳಿಗೆ ಪ್ರಮುಖ ಕಾರಣಕರ್ತ ಎನಿಸುವುದು ಅಮೆರಿಕದಲ್ಲಿ ನಡೆಯುವ ಬೆಳವಣಿಗೆಗಳೇ. ಭಾರತದಲ್ಲಿ ಷೇರುಪೇಟೆ ಒಂದೇ ದಿನದಲ್ಲಿ ಕುಸಿಯಲು ಅಮೆರಿಕವೇ ಕಾರಣವಾಗಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ನೀಡಿದ ಒಂದು ಹೇಳಿಕೆ ಈ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಅಮೆರಿಕದಲ್ಲಿ ಹಣದುಬ್ಬರ ಅಷ್ಟು ಸುಲಭಕ್ಕೆ ನಿರೀಕ್ಷಿತ ಗುರಿಗೆ ಬರುವುದಿಲ್ಲ. ಅದರ ವಿರುದ್ಧದ ಹೋರಾಟ ಸುದೀರ್ಘದ್ದಿರುತ್ತದೆ ಎಂದು ಯುಎಸ್ ಫೆಡರಲ್ ಬ್ಯಾಂಕ್ ಮುಖ್ಯಸ್ಥ ಜಿರೋಮ್ ಪೋವೆಲ್ ಹೇಳಿದ್ದರು. ಅಂದರೆ, ಫೆಡರಲ್ ಬ್ಯಾಂಕ್ನ ಬಡ್ಡಿ ದರ ಏರಿಕೆಗೆ ಅಲ್ಪ ವಿರಾಮ ಇಟ್ಟಿರುವುದು ತಾತ್ಕಾಲಿಕ ಮಾತ್ರವೇ. ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನುವುದರ ಸುಳಿವನ್ನು ಪೋವೆಲ್ ಅವರು ನೀಡಿದ್ದರು. ಅಮೆರಿಕ ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸಲು ಗುರಿ ಇಟ್ಟಿದೆ. ಈಗ ಸದ್ಯ ಅಲ್ಲಿ ಹಣದುಬ್ಬರ ಶೇ. 4ಕ್ಕಿಂತ ತುಸು ಹೆಚ್ಚಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ