ನವದೆಹಲಿ, ಫೆಬ್ರುವರಿ 15: ಷೇರು ವಹಿವಾಟಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್, ಎಕ್ಸಿಸ್ ಬ್ಯಾಂಕ್ ಹಾಗು ಅವುಗಳ ಸಹ-ಸಂಸ್ಥೆಗಳ ವಿರುದ್ಧ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ದೆಹಲಿ ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ. ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ನ ಷೇರು ವಹಿವಾಟಿನಲ್ಲಿ ಎಕ್ಸಿಸ್ ಬ್ಯಾಂಕ್ ಅಕ್ರಮವಾಗಿ ಲಾಭ ಮಾಡಿದೆ. ಇದರ ತನಿಖೆ ನಡೆಯಬೇಕು ಎಂದು ಬಿಜೆಪಿ ರಾಜ್ಯಸಭಾ ಸಂಸದರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ನ ಷೇರುದಾರರಲ್ಲಿ ಎಕ್ಸಿಸ್ ಬ್ಯಾಂಕ್ ಒಂದು. ಎಕ್ಸಿಸ್ ಸೆಕ್ಯೂರಿಟೀಸ್ ಮತ್ತು ಎಕ್ಸಿಸ್ ಕ್ಯಾಪಿಟಲ್ ಸಂಸ್ಥೆಗಳಿಗೆ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಸಂಸ್ಥೆ ತನ್ನ ಷೇರುಗಳನ್ನು ಅಕ್ರಮವಾಗಿ ಖರೀದಿಸಿ ಮಾರಲು ಅನುವು ಮಾಡಿಕೊಟ್ಟಿದೆ. ಈ ವಂಚನೆಯ ಬಗ್ಗೆ ತನಿಖೆ ಆಗಬೇಕು ಎಂದು ಸ್ವಾಮಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2023ರ ಅಂತ್ಯದಲ್ಲಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ ಬ್ರಿಟನ್; ರಿಸಿಶನ್ ಎಂದು ಪರಿಗಣಿಸಲು ಲೆಕ್ಕಾಚಾರ ಏನು? ಇಲ್ಲಿದೆ ಡೀಟೇಲ್ಸ್
ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಕೋ ಲಿ, ಮ್ಯಾಕ್ಸ್ ಫೈನಾನ್ಷಿಯಲ್ ಸರ್ವಿಸ್ ಲಿ, ಎಕ್ಸಿಸ್ ಬ್ಯಾಂಕ್, ಎಕ್ಸಿಸ್ ಸೆಕ್ಯೂರಿಟೀಸ್ ಲಿ, ಎಕ್ಸಿಸ್ ಕ್ಯಾಪಿಟಲ್ ಲಿ ಸಂಸ್ಥೆಗಳನ್ನು ಸುಬ್ರಮಣಿಯನ್ ಸ್ವಾಮಿ ತಮ್ಮ ದೂರಿನಲ್ಲಿ ಹೆಸರಿಸಿದ್ದಾರೆ.
ಷೇರುಗಳ ವರ್ಗಾವಣೆಗೆ ಪೂರ್ವಾನುಮತಿ ಪಡೆಯುವ ವಿಚಾರದಲ್ಲಿ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಸಂಸ್ಥೆ ನಿಯಮ ಪಾಲಿಸಿಲ್ಲ. ಮ್ಯಾಕ್ಸ್ ಲೈಫ್ನ ಈಕ್ವಿಟಿ ಷೇರುಗಳ ಖರೀದಿ ಮತ್ತು ಮಾರಾಟದಿಂದ ಅಕ್ರಮವಾಗಿ ಲಾಭ ಮಾಡಲು ಎಕ್ಸಿಸ್ ಬ್ಯಾಂಕ್ ಹಾಗೂ ಅದರ ಗ್ರೂಪ್ ಕಂಪನಿಗಳಿಗೆ ಅನುವಾಗುವ ರೀತಿಯಲ್ಲಿ ಬಹಳ ಯೋಜಿತ ರೀತಿಯಲ್ಲಿ ಸಂಚು ರೂಪಿಸಲಾಗಿದೆ. ಮ್ಯಾಕ್ಸ್ ಲೈಫ್ನ ಷೇರುದಾರರು ಮತ್ತು ಕಾರ್ಪೊರೇಟ್ ಏಜೆಂಟ್ ಆಗಿ ಹೊಂದಿರುವ ಸಂಬಂಧವನ್ನು ದುರುಪಯೋಗಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ.
ಎಕ್ಸಿಸ್ ಬ್ಯಾಂಕ್ ಈ ಹಿಂದೆಯೂ ಅಕ್ರಮವಾಗಿ ಲಾಭ ಮಾಡಲು ಮುಂದಾಗಿದ್ದಿದೆ. ಹಲವು ಬಾರಿ ಅದಕ್ಕೆ ದಂಡ ಹಾಕಲಾಗಿದ್ದರೂ ಇದು ನಿಂತಿಲ್ಲ. ಹೀಗಾಗಿ, ಈಗ ನಡೆದಿರುವ ವಹಿವಾಟನ್ನೂ ಸಂಶಯದಿಂದ ನೋಡಬೇಕಾಗುತ್ತದೆ. ಕೋರ್ಟ್ನಿಂದ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿ, ಅದರ ಮೂಲಕ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಜನತಾ ಪಕ್ಷದ ಮಾಜಿ ಅಧ್ಯಕ್ಷರೂ ಆದ ಸ್ವಾಮಿ ಕೇಳಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ