ರಾಷ್ಟ್ರೀಯ ವಿನಿಮಯ ಕೇಂದ್ರ- ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE)ನ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ, ರವಿ ನರೇನ್ ಮತ್ತು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ವಿರುದ್ಧ ಕೇಂದ್ರೀಯ ತನಿಖಾ ದಳವು (CBI) ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿದೆ. 2009ರಿಂದ 2017ರ ಮಧ್ಯೆ ಎನ್ಎಸ್ಇ ಉದ್ಯೋಗಿಗಳ ಫೋನ್ ಕದ್ದಾಲಿಕೆ ಮಾಡಿರುವ ಆರೋಪದಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ (MHA) ನಿರ್ದೇಶನದ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಹೊಸ ವರದಿಯಲ್ಲಿ ಸಿಬಿಐನಿಂದ ಇತರ ಆರೋಪಗಳು ಕೂಡ ಸೇರ್ಪಡೆ ಆಗಿದೆ. ಭಾರತದ ವಿವಿಧೆಡೆ ಇರುವ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆಗೆ ಸೇರಿದ ಜಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ಎಫ್ಐಆರ್ನಲ್ಲಿ ತಿಳಿಸಿರುವಂತೆ, ಮೂವರು ಆರೋಪಿಗಳು ಕಾನೂನುಬಾಹಿರವಾಗಿ 2009ರಿಂದ 2017ರ ಮಧ್ಯೆ ಎನ್ಎಸ್ಇ ಉದ್ಯೋಗಿಗಳ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಈ ಕಾನೂನು ಬಾಹಿರ ನಿಗಾಗೆ ಚಿತ್ರಾ ಮತ್ತು ನರೇನ್ ಇವರಿಬ್ಬರು ಸಂಜಯ್ ಪಾಂಡೆಯ ಸಹಾಯ ಪಡೆದಿದ್ದಾರೆ ಎಂದು ಹೇಳಲಾಗಿದೆ. ಕಳೆದ ತಿಂಗಳು ಸೆಕ್ಯೂರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)ದಿಂದ 2015ರ ಡಾರ್ಕ್ ಫೈಬರ್ ಪ್ರಕರಣದಲ್ಲಿ ಎನ್ಎಸ್ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ, ಎನ್ಎಸ್ಇ ಸಿಒಒ ಆನಂದ್ ಸುಬ್ರಮಣಿಯನ್ ಮತ್ತು ಎನ್ಎಸ್ಇ ಸೇರಿದಂತೆ 18 ಸಂಸ್ಥೆಗಳನ್ನು ಕಂಡು ಹಿಡಿಯಲಾಗಿತ್ತು.
ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸಂಸ್ಥೆಯಾದ ಸೆಬಿ ಕ್ಯುಮುಲೇಟಿವ್ (ಸಂಚಿತ) ದಂಡ 43.8 ಕೋಟಿ ರೂಪಾಯಿಯನ್ನು 18 ಸಂಸ್ಥೆಗಳ ಮೇಲೆ ಹಾಕಲಾಗಿತ್ತು. ಅದರಲ್ಲಿ ಎನ್ಎಸ್ಇವೊಂದಕ್ಕೇ 7 ಕೋಟಿ ರೂಪಾಯಿ ದಂಡ ಹಾಕಲಾಗಿತ್ತು. ಎನ್ಎಸ್ಇ ಮುಖ್ಯ ಬಿಜಿನೆಸ್ ಡೆವಲಪ್ಮೆಂಟ್ ಅಧಿಕಾರಿ ರವಿ ವಾರಾಣಸಿ ಅವರಿಗೆ 5 ಕೋಟಿ ಹಾಗೂ ಚಿತ್ರಾ ರಾಮಕೃಷ್ಣಗೆ 5 ಕೋಟಿ ದಂಡ ಹಾಕಲಾಗಿತ್ತು.