Budget Deficit: ಸತತ ಐದನೇ ವರ್ಷ ಅಂದುಕೊಂಡಿದ್ದಕ್ಕಿಂತ ಮೀರಿ ಹೋಗಲಿದೆ ಕೇಂದ್ರದ ಬಜೆಟ್ ಕೊರತೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಿಂದಾಗಿ ಬಜೆಟ್ ಕೊರತೆಯ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದಲ್ಲಿ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ.
ಕೊವಿಡ್ ಎರಡನೇ ಅಲೆ ಕಾರಣಕ್ಕೆ ಸತತ ಐದನೇ ವರ್ಷ ಬಜೆಟ್ ಕೊರತೆ ಗುರಿಯ ಅಂದಾಜು ಮೀರಿದೆ. ಕೊವಿಡ್ ಪರಿಹಾರ ಕ್ರಮದ ಭಾಗವಾಗಿ ಖರ್ಚು ಹೆಚ್ಚಳವಾಗಿದೆ. ಇದರ ಜತೆಗೆ ಕೊವಿಡ್ ಕಾರಣಕ್ಕೆ ನಿರ್ಬಂಧ ಹಾಕಿದ್ದರಿಂದ ಆದಾಯ ದುರ್ಬಲವಾಗಿದೆ. ಇದರಿಂದಾಗಿ ಒಂದು ಪರ್ಸಂಟೇಜ್ ಪಾಯಿಂಟ್ನಷ್ಟು ಕೊರತೆ ಜಾಸ್ತಿಯಾಗಲಿದೆ ಎಂದು ಆರು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ನೂಮುರಾ ಹೋಲ್ಡಿಂಗ್ಸ್ ಇಂಕ್ ಮತ್ತು ಬಾರ್ಕ್ಲೇಸ್ ಪಿಎಲ್ಸಿ ಅಂದಾಜು ಮಾಡುವಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ವ್ಯತ್ಯಾಸ ಶೇ 7ಕ್ಕಿಂತ ಹೆಚ್ಚಾಗಲಿದೆ. ಸರ್ಕಾರವು ಫೆಬ್ರವರಿಯಲ್ಲಿ ಬಜೆಟ್ ಮಂಡನೆ ವೇಳೆಯಲ್ಲಿ ಅಂದಾಜು ಮಾಡಿರುವ ಪ್ರಕಾರ, ಈ ವ್ಯತ್ಯಾಸ ಶೇ 6.8ರಷ್ಟು. ಆದರೆ ಮುಂಬೈ ಮೂಲದ ಕೇರ್ ರೇಟಿಂಗ್ ಲಿಮಿಟೆಡ್ ಅಂದಾಜಿಸುವಂತೆ ಶೇ 7.8ರಷ್ಟು ಬಜೆಟ್ ಕೊರತೆ ಆಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಂದು ಕೊರೊನಾ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಸರ್ಕಾರದಿಂದ ಸಾಲ ಖಾತ್ರಿ ಯೋಜನೆ ವಿಸ್ತರಣೆ ಮಾಡಿದೆ. ಈ ಹಿಂದೆ ಘೋಷಣೆ ಮಾಡಿದಂತೆ ಬಡವರಿಗೆ ಉಚಿತ ಆಹಾರ ಧಾನ್ಯ ನೀಡಲಾಗಿದೆ. ಈ ಕ್ರಮಗಳಿಂದಾಗಿ ಸರ್ಕಾರದ ಆರ್ಥಿಕತೆ ಮೇಲೆ ಇನ್ನಷ್ಟು ಹೊಡೆತ ಬಿದ್ದಿದೆ. ಈಗಾಗಲೇ ತೆರಿಗೆ ಆದಾಯ ಕಡಿಮೆ ಆಗಿದ್ದು, ಆಸ್ತಿ ಮಾರಾಟಕ್ಕೆ ಅಂತ ಇಟ್ಟಿರುವುದು ಕೂಡ ನಿರೀಕ್ಷಿತ ಫಲಿತಾಂಶ ತಂದಿಲ್ಲ. ಗ್ರಾಹಕರ ಬೆಲೆಯಲ್ಲಿನ ಏರಿಕೆ, ಬಾಂಡ್ ಯೀಲ್ಡ್ಗಳು ಮತ್ತು ಸ್ವ್ಯಾಪ್ ದರಗಳು ಕೂಡ ಹೆಚ್ಚಾಗಿವೆ. ಇದಕ್ಕೆ ಕಾರಣವಾಗಿರುವುದು ನಿರೀಕ್ಷೆಗಿಂತ ಬೇಗ ಹಣಕಾಸು ಸ್ಥಿತಿ ಸಹಜ ಸ್ಥಿತಿಗೆ ಮರಳಬಹುದು ಎಂಬ ಕಾರಣಕ್ಕೆ ಹೀಗಾಗಬಹುದು.
ಬಹಳ ಹೆಚ್ಚು ವಹಿವಾಟಾದ 5 ವರ್ಷದ ಬಾಂಡ್ ಕಳೆದ ಎರಡು ವಾರದಲ್ಲಿ 19 ಬೇಸಿಸ್ ಪಾಯಿಂಟ್ಸ್ ಹೆಚ್ಚಾಗಿದೆ. ಸರ್ಕಾರದಿಂದ ಹೆಚ್ಚಿನ ಸಾಲ ಮಾಡುವುದರಿಂದ ಹೆಚ್ಚುವರಿ ಒತ್ತಡ ಆಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಡಾಯಿಶ್ ಬ್ಯಾಂಕ್ ಎಜಿಯ ಆರ್ಥಿಕ ತಜ್ಞ ಕೌಶಿಕ್ ದಾಸ್ ಹೇಳುವಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.5ರಷ್ಟು ಕೊರತೆ ಆಗಬಹುದು. “ಮೇ ತಿಂಗಳಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಗ್ರಾಕ ದರ ಹಣದುಬ್ಬರ ಆಗಿದ್ದರಿಂದ ಬಾಂಡ್ ಮಾರ್ಕೆಟ್ನ ಸೆಂಟಿಮೆಂಟ್ ಮೇಲೇರಿದೆ,” ಎಂದು ದಾಸ್ ಹೇಳುತ್ತಾರೆ. “ಹೆಚ್ಚಿನ ಹಣಕಾಸಿನ ಕೊರತೆಯನ್ನು ನಿಭಾಯಿಸಲು ಹೆಚ್ಚುವರಿಯಾಗಿ ಮಾರುಕಟ್ಟೆಯಿಂದ ಸಾಲ ಪಡೆಯುವುದರಿಂದ ಹೆಚ್ಚಿನ ಅಪಾಯ ತಂದೊಡ್ಡಲಿದ್ದು, ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ವಿತ್ತೀಯ ನೀತಿ ಕ್ರಮವನ್ನು ಸಂಕೀರ್ಣಗೊಳಿಸುತ್ತದೆ,” ಎನ್ನುತ್ತಾರೆ.
ಬಜೆಟ್ ಕೊರತೆ (ಬಜೆಟ್ ಡಿಫಿಸಿಟ್) ಅಂದರೆ, ಸರ್ಕಾರಕ್ಕೆ ಅಂದಾಜು ವೆಚ್ಚದಿಂದ ಅಂದಾಜು ಆದಾಯವನ್ನು ಕಳೆದರೆ ಬರುವ ವ್ಯತ್ಯಾಸ.
(Due to covid- 19 second wave package announced by FM Nirmala Sitharaman current financial year budget deficit also increase beyond expectation)