ನವದೆಹಲಿ, ಡಿಸೆಂಬರ್ 1: ಈ ಹಣಕಾಸು ವರ್ಷದ ಎರಡನೇ ಭಾಗದಲ್ಲಿ, ಅಂದರೆ ಅಕ್ಟೋಬರ್ನಿಂದ ಮಾರ್ಚ್ವರೆಗಿನ ಆರು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಬಂಡವಾಳ ವೆಚ್ಚ (Capital expenditure) ಶೇ. 25ರಷ್ಟು ಹೆಚ್ಚಳವಾಗಬಹುದು ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಅಂದಾಜು ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ದ್ವಿತೀಯಾರ್ಧದಲ್ಲಿ ಸರ್ಕಾರದ ಬಂಡವಾಳ ವೆಚ್ಚ ಶೇ. 25ರಷ್ಟು ಹೆಚ್ಚಬಹುದು ಎಂಬುದು ಅದರ ನಿರೀಕ್ಷೆ. ಹಾಗೆಯೇ, ಸರ್ಕಾರದಿಂದ ಒಟ್ಟಾರೆ ವೆಚ್ಚವೂ ಶೇ. 15ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜೆಫರೀಸ್ನ ವರದಿಯಲ್ಲಿ ನಿರೀಕ್ಷಿಸಲಾಗಿದೆ.
ಚುನಾವಣೆಗಳ ನಿಮಿತ್ತವಾಗಿ ಜಾರಿಗೊಳಿಸಲಾಗಿರುವ ಕೆಲ ಜನಪ್ರಿಯ ಯೋಜನೆಗಳಿಗೆ ವೆಚ್ಚ ಹೆಚ್ಚಾಗಿದ್ದರೂ ಸರ್ಕಾರವು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹಣ ವಿನಿಯೋಗಿಸುವುದಕ್ಕೆ ಕತ್ತರಿ ಹಾಕುವ ಸಾಧ್ಯತೆ ಇಲ್ಲ. ಕೇಂದ್ರ ಸರ್ಕಾರವು ಜನಕಲ್ಯಾಣ ಯೋಜನೆಗಳ ಜೊತೆಜೊತೆಗೆ ಅಭಿವೃದ್ಧಿ ಯೋಜನೆಗಳಿಗೂ ಬದ್ಧತೆ ತೋರುವ ಮೂಲಕ ಸಮತೋಲಿತ ನೀತಿ ಅನುಸರಿಸುತ್ತಿದೆ ಎಂಬುದು ಬ್ರೋಕರೇಜ್ ಸಂಸ್ಥೆಯ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಒಂದು ತಿಂಗಳ ವಿಶೇಷ ಅಭಿಯಾನದಲ್ಲಿ ಒಂದು ಕೋಟಿ ಪಿಂಚಣಿದಾರರಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೃಷ್ಟಿ: ಸರ್ಕಾರದಿಂದ ಮಾಹಿತಿ
ಜನಪ್ರಿಯ ಯೋಜನೆಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ ಸರ್ಕಾರವು ಈ ಯೋಜನೆಗಳಿಗೆ ವಿನಿಯೋಗಿಸುವುದಕ್ಕಿಂತ ಹೆಚ್ಚು ಮೊತ್ತದ ಬಂಡವಾಳ ವೆಚ್ಚ ಮಾಡುತ್ತಿರುವುದನ್ನು ಗಮನಿಸಬೇಕು ಎಂದು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರವಸೆ ಕೊಟ್ಟ ವಿವಿಧ ಕಲ್ಯಾಣ ಯೋಜನೆಗಳ ಜಾರಿಗೆ ವರ್ಷಕ್ಕೆ 460 ಬಿಲಿಯನ್ ಡಾಲರ್ ಖರ್ಚಾಗುತ್ತದೆ. ಇದು ಆ ರಾಜ್ಯದ ಜಿಡಿಪಿಯ ಶೇ. 1.1ರಷ್ಟಾಗುತ್ತದೆ. ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಿಗೆಲ್ಲಾ ಆಗುವ ವೆಚ್ಚವನ್ನು ಪರಿಗಣಿಸಿದರೆ ಅದು ದೇಶದ ಜಿಡಿಪಿಯ ಶೇ. 0.7ರಿಂದ 0.8ರಷ್ಟಾಗಬಹುದು.
ಆದಾಗ್ಯೂ ಕೇಂದ್ರ ಸರ್ಕಾರವು ಸುಸ್ಥಿರ ಅಭಿವೃದ್ಧಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿ ಮೂಲಕ ದೀರ್ಘಕಾಲೀನ ಆರ್ಥಿಕ ಆಸ್ತಿಗಳನ್ನು ನಿರ್ಮಿಸುವ ಕಾರ್ಯಕ್ಕೆ ಒತ್ತು ಕೊಡುವುದನ್ನು ಮುಂದುವರಿಸಿದೆ. ಮುಂಬರುವ ದಿನಗಳಲ್ಲೂ ಈ ನೀತಿ ಮುಂದುವರಿಯಬಹುದು ಎಂಬುದು ಜೆಫರೀಸ್ನ ಅಂದಾಜು.
ಇದನ್ನೂ ಓದಿ: ಬೆಳೆ ತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ 3,623 ಕೋಟಿ ರೂ ವೆಚ್ಚ; ಪಂಜಾಬ್, ಹರ್ಯಾಣ ರಾಜ್ಯಕ್ಕೆ ಹೆಚ್ಚಿನ ವ್ಯಯ
ಜೆಫರೀಸ್ ವರದಿಯಲ್ಲಿ ಮಾಡಲಾಗಿರುವ ಮತ್ತೊಂದು ಅಂದಾಜು ಷೇರು ಮಾರುಕಟ್ಟೆಗೆ ಸಂಬಂಧಿಸಿದ್ದು. ಷೇರುಪೇಟೆಯ ಕುಸಿತ ಬಹುಶಃ ಮುಗಿದಿರಬಹುದು. ಹೆಚ್ಚು ಬೆಲೆ ಇದ್ದ ಮಿಡ್ಕ್ಯಾಪ್ ಷೇರುಗಳಲ್ಲಿ ಪ್ರೈಸ್ ಕರೆಕ್ಷನ್ ಆಗಿದೆ. ಈಗ ಮಾರುಕಟ್ಟೆ ಚೇತರಿಸಿಕೊಳ್ಳಬಹುದು ಎಂದು ಜೆಫರೀಸ್ನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ