ಸ್ಕ್ರ್ಯಾಪ್​ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಲ್ಲಿ ಬಂದ ಆದಾಯ 4,000 ಕೋಟಿ ರೂಗೂ ಹೆಚ್ಚು

Govt earns big money from scrap sales: ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ 2021ರಿಂದಲೂ ನಡೆಸುತ್ತಿದೆ. ಈ ವರ್ಷ ಅಕ್ಟೋಬರ್ 2ರಿಂದ 31ರವರೆಗೂ ಅಭಿಯಾನ ನಡೆದಿದ್ದು, 11 ಲಕ್ಷಕ್ಕೂ ಅಧಿಕ ಕಚೇರಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಒಂದು ತಿಂಗಳಲ್ಲಿ 29 ಲಕ್ಷ ನಿರುಪಯುಕ್ತ ಫೈಲ್​ಗಳನ್ನು ಹೊರತೆಗೆಯಲಾಗಿದೆ. ಇದರಿಂದ ಬಂದ ಆದಾಯ 800 ಕೋಟಿ ರೂ.

ಸ್ಕ್ರ್ಯಾಪ್​ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಲ್ಲಿ ಬಂದ ಆದಾಯ 4,000 ಕೋಟಿ ರೂಗೂ ಹೆಚ್ಚು
ಆಫೀಸ್ ಸ್ಕ್ರ್ಯಾಪ್

Updated on: Nov 09, 2025 | 2:15 PM

ನವದೆಹಲಿ, ನವೆಂಬರ್ 9: ಸರ್ಕಾರಿ ಕಚೇರಿಗಳಲ್ಲಿ ನಿರುಪಯುಕ್ತವಾಗಿ ಉಳಿದಿರುವ ಹಲವು ವಸ್ತುಗಳನ್ನು ಹೊರತೆಗೆದು, ಶುದ್ಧಗೊಳಿಸುವ ಕೆಲಸ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷದಲ್ಲೇ ಅತಿದೊಡ್ಡ ಸ್ವಚ್ಛತಾ ಅಭಿಯಾನ (Cleanliness drive) ಈ ವರ್ಷ ನಡೆದಿದೆ. ಇದರಲ್ಲಿ 11.58 ಲಕ್ಷ ಆಫೀಸ್ ಸ್ಥಳಗಳಲ್ಲಿದ್ದ 29 ಲಕ್ಷ ಫೈಲ್​ಗಳನ್ನು ಹೊರತೆಗೆಯಲಾಗಿದೆ. ಇದರಿಂದ 232 ಲಕ್ಷ ಚದರಡಿಯಷ್ಟು ಕಚೇರಿ ಸ್ಥಳವು ಸ್ಕ್ರ್ಯಾಪ್​ಗಳಿಂದ (scraps) ಮುಕ್ತಗೊಂಡಿದೆ. ಅಕ್ಟೋಬರ್ 2ರಿಂದ 31ರವರೆಗೂ ನಡೆದ ಈ ಅಭಿಯಾನದಲ್ಲಿ ಹೊರತೆಗೆಯಲಾದ ಫೈಲ್ ಇತ್ಯಾದಿ ಸ್ಕ್ರ್ಯಾಪ್​ಗಳನ್ನು ಮಾರಲಾಯಿತು. ಇದರಿಂದ ಸರ್ಕಾರಕ್ಕೆ ಸುಮಾರು 800 ಕೋಟಿ ರೂ ಆದಾಯವೂ ಸಿಕ್ಕಿದೆ.

ಅಕ್ಟೋಬರ್​ನ ಈ ಒಂದೇ ತಿಂಗಳಲ್ಲಿ ಸರ್ಕಾರಕ್ಕೆ ಸ್ಕ್ರ್ಯಾಪ್​ಗಳಿಂದ 800 ಕೋಟಿ ರೂ ಆದಾಯ ಸಿಕ್ಕಿದೆ. ಸರ್ಕಾರ ಪ್ರತೀ ವರ್ಷ ಒಂದು ಅಥವಾ ಎರಡು ಬಾರಿ ಇಂಥ ಅಭಿಯಾನ ನಡೆಸುತ್ತದೆ. 2021ರಲ್ಲಿ ಆರಂಭಿಸಿದ ಈ ಕಾರ್ಯದಿಂದ ಸರ್ಕಾರ ಈವರೆಗೆ 4,100 ಕೋಟಿ ರೂ ಆದಾಯ ಗಳಿಸಿರುವುದು ಗಮನಾರ್ಹ.

ಈ ಹಿಂದಿನ ಕೆಲ ವರ್ಷದಲ್ಲಿ ಸ್ಕ್ರ್ಯಾಪ್​ಗಳ ಮಾರಾಟದಿಂದ ಸರ್ಕಾರಕ್ಕೆ 800 ಕೋಟಿ ರೂಗಿಂತ ಹೆಚ್ಚು ಆದಾಯ ಬಂದಿರುವುದುಂಟು. ಆದರೆ, ಈ ವರ್ಷ ನಡೆದ ಅಭಿಯಾನದಲ್ಲಿ ಅತಿಹೆಚ್ಚು ಕಚೇರಿ ಸ್ಥಳಗಳನ್ನು ಗುರಿ ಮಾಡಲಾಯಿತು. ಅತಿಹೆಚ್ಚು ನಿರುಪಯುಕ್ತ ಕಡತಗಳನ್ನು ಹೊರತೆಗೆಯಾಗಿದೆ.

ಇದನ್ನೂ ಓದಿ: ಬೊಜ್ಜು, ಶುಗರ್ ಇದ್ದರೆ ಅಮೆರಿಕಕ್ಕೆ ಇಲ್ಲ ಪ್ರವೇಶ? ಇಲ್ಲಿದೆ ಹೊಸ ವೀಸಾ ಪಾಲಿಸಿ

2021ರಿಂದ 2025ರವರೆಗೂ ಸರ್ಕಾರ ಐದು ಬಾರಿ ಈ ಅಭಿಯಾನ ನಡೆಸಿದೆ. ಒಟ್ಟು 23.62 ಲಕ್ಷ ಕಚೇರಿಗಳಲ್ಲಿ ಸ್ವಚ್ಛತೆ ಮಾಡಲಾಗಿದೆ. ಇಲ್ಲಿ 928.84 ಚದರಡಿಯಷ್ಟು ಸ್ಥಳವು ಸ್ಕ್ರ್ಯಾಪ್​ಗಳಿಂದ ಮುಕ್ತಗೊಂಡಿದೆ. 166.95 ಲಕ್ಷ ಕಡತಗಳನ್ನು ಹೊರತೆಗೆಯಲಾಗಿದೆ. ಇವುಗಳ ಮಾರಾಟದಿಂದ 4,097.24 ಲಕ್ಷ ರೂ ಆದಾಯವನ್ನು ಸರ್ಕಾರ ಪಡೆದಿದೆ.

ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ದೂರುಗಳ ಇಲಾಖೆ (ಡಿಎಆರ್ ಪಿಜಿ) ಕಣ್ಗಾವಲಿನಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ 84 ಸಚಿವಾಲಯಗಳು ಹಾಗೂ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಲು ಈ ಇಲಾಖೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ: ಕ್ಲೌಡ್ ಕಿಚನ್ ಐಡಿಯಾ; ಹೋಟೆಲ್ ಬೇಕಿಲ್ಲ, ಇದು ಟ್ರೆಂಡಿ ಬ್ಯುಸಿನೆಸ್

ಮೂವರು ಹಿರಿಯ ಸಚಿವರಾದ ಮನಸುಖ್ ಮಾಂಡವೀಯ, ರಾಮಮೋಹನ್ ನಾಯ್ಡು ಮತ್ತು ಡಾ. ಜಿತೇಂದ್ರ ಸಿಂಗ್ ಅವರು ಸ್ವಚ್ಛತಾ ಅಭಿಯಾನದ ಮೇಲ್ವಿಚಾರಣೆ ನಡೆಸಿದ್ದಾರೆ. ಬೇರೆ ಹಲವು ಸಚಿವರುಗಳು ಕೂಡ ಅಭಿಯಾನವನ್ನು ಪರಾಮರ್ಶಿಸಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಪ್ರಗತಿಪರಿಶೀಲನೆಯ ಅವಲೋಕನ ನಡೆಸುತ್ತಾ ಬಂದಿದ್ದರೆನ್ನಲಾಗಿದೆ. ಈ ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಬಹಳ ಅಸ್ಥೆ ವಹಿಸಿದ್ದರು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Sun, 9 November 25