ಪ್ಯಾನ್ 2.0 ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತಾ? ಕ್ಯೂಆರ್ ಕೋಡ್ ಇರುವ ಪ್ಯಾನ್ ಪಡೆಯುವುದು ಹೇಗೆ?

|

Updated on: Nov 26, 2024 | 2:18 PM

PAN 2.0 project announced: ಕೇಂದ್ರ ಸರ್ಕಾರ ಪ್ಯಾನ್ 2.0 ಪ್ರಾಜೆಕ್ಟ್ ಘೋಷಿಸಿದೆ. ಇದು ಈಗಿರುವ ಪ್ಯಾನ್​ನ ಅಪ್​ಗ್ರೇಡೆಡ್ ಸಿಸ್ಟಂ. ಹೊಸ ಪ್ಯಾನ್ ಕಾರ್ಡ್​ನಲ್ಲಿ ಕ್ಯೂಆರ್ ಕೋಡ್ ಇತ್ಯಾದಿ ಹೊಸ ಫೀಚರ್​ಗಳಿವೆ. ಕಾರ್ಡ್ ಬದಲಾದರೂ ಪ್ಯಾನ್ ನಂಬರ್ ಅದೇ ಇರುತ್ತದೆ. ಹೊಸ ಪ್ಯಾನ್ ಕಾರ್ಡ್ ಪಡೆಯಲು ಯಾರೂ ಕೂಡ ಶುಲ್ಕ ನೀಡಬೇಕಿಲ್ಲ.

ಪ್ಯಾನ್ 2.0 ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತಾ? ಕ್ಯೂಆರ್ ಕೋಡ್ ಇರುವ ಪ್ಯಾನ್ ಪಡೆಯುವುದು ಹೇಗೆ?
ಪ್ಯಾನ್ ಕಾರ್ಡ್
Follow us on

ನವದೆಹಲಿ, ನವೆಂಬರ್ 26: ಕೇಂದ್ರ ಸರ್ಕಾರ ನಿನ್ನೆ ಸೋಮವಾರ ಕೃಷಿ, ರೈಲ್ವೇಸ್, ಗ್ರೀನ್ ಎನರ್ಜಿ, ಶಿಕ್ಷಣ, ಟೆಲಿಕಾಂ ಇತ್ಯಾದಿ ವಿವಿಧ ವಲಯಗಳಲ್ಲಿ 22,847 ಕೋಟಿ ರೂ ಮೊತ್ತದ ಹಲವು ಯೋಜನೆಗಳಿಗೆ ಸಮ್ಮತಿ ನೀಡಿದೆ. ಟೆಲಿಕಾಂ ಕಂಪನಿಗಳಿಗೆ ಬ್ಯಾಂಕ್ ಗ್ಯಾರಂಟಿಗಳಿಂದ ವಿನಾಯಿತಿಯನ್ನೂ ನೀಡಲಾಗಿದೆ. ಪ್ರಮುಖ ಕ್ರಮಗಳಲ್ಲಿ ಪ್ಯಾನ್ 2.0 ಯೋಜನೆಯೂ ಇದೆ. ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಗೆ ಸರ್ಕಾರ 1,435 ಕೋಟಿ ರೂ ವ್ಯಯಿಸಲಿದೆ.

ಏನಿದು ಪ್ಯಾನ್ 2.0 ಯೋಜನೆ?

ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಎನ್ನುವುದು ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಎಲ್ಲಾ ಹಣಕಾಸು ವಹಿವಾಟುಗಳು, ತೆರಿಗೆಗಳ ಮಾಹಿತಿಯನ್ನು ಕ್ರೋಢೀಕರಿಸುವ ಸಾಧನ. ಇದರ ತಂತ್ರಜ್ಞಾನವನ್ನು ಇನ್ನೊಂದು ಹಂತ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅದುವೇ ಪ್ಯಾನ್ 2.0. ಎರಡನೇ ಆವೃತ್ತಿಯ ಪ್ಯಾನ್​ನಲ್ಲಿ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರಲಾಗುತ್ತದೆ.

ಇದನ್ನೂ ಓದಿ: ಟೆಲಿಕಾಂ ಕಂಪನಿಗಳಿಗೆ ಬ್ಯಾಂಕ್ ಗ್ಯಾರಂಟಿಯಿಂದ ವಿನಾಯಿತಿ: ಸಂಪುಟ ಒಪ್ಪಿಗೆ; ಚಿಂತಾಕ್ರಾಂತಗೊಂಡಿದ್ದ ವೊಡಾಫೋನ್ ಐಡಿಯಾಗೆ ರಿಲೀಫ್ ಸಾಧ್ಯತೆ

ಪ್ಯಾನ್ 2.0 ಹೆಚ್ಚು ನಿಖರವಾಗಿರುತ್ತದೆ. ಇದರ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಹೆಚ್ಚು ಸಮರ್ಪಕವಾಗಿರುತ್ತದೆ. ಸಮಸ್ಯೆಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹೆಚ್ಚು ಮುತುವರ್ಜಿ ವಹಿಸಲಾಗುತ್ತದೆ. ನಿರ್ದಿಷ್ಟ ಸೆಕ್ಟರ್​ನ ಎಲ್ಲಾ ವ್ಯವಹಾರ ಸಂಬಂಧಿತ ಚಟುವಟಿಕೆಗಳಿಗೆ ಇದು ಕಾಮನ್ ಬಿಸಿನೆಸ್ ಐಡೆಂಟಿಫೈರ್ ಆಗಿರಲಿದೆ.

ಹಳೆಯ ಪ್ಯಾನ್ ಕಾರ್ಡ್ ಏನಾಗುತ್ತದೆ?

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದ ಮಾಹಿತಿ ಪ್ರಕಾರ, ಈಗಿರುವ ಪ್ಯಾನ್ ನಂಬರ್ ಅನ್ನು ಬದಲಿಸುವ ಅವಶ್ಯಕತೆ ಇಲ್ಲ. ಕಾರ್ಡ್ ಅಸಿಂಧುಗೊಳ್ಳುವುದಿಲ್ಲ. ಆದರೆ, ಅಪ್​ಗ್ರೇಡ್ ಆಗಿರುವ ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು.

ಹೊಸ ಪ್ಯಾನ್ ಕಾರ್ಡ್ ಪಡೆದರೆ ಅದರಲ್ಲಿ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಆದರೆ, ಕ್ಯೂಆರ್ ಕೋಡ್​ನಂತಹ ಹೊಸ ಫೀಚರ್​ಗಳಿರುತ್ತವೆ. ಹೊಸ ಪ್ಯಾನ್ ಕಾರ್ಡ್​ಗೆ ಶುಲ್ಕ ನೀಡಬೇಕಿಲ್ಲ.

ಇದನ್ನೂ ಓದಿ: ರೂಯಾ ಫ್ಯಾಮಿಲಿ ಬಾಂಡಿಂಗ್… ಕಷ್ಟನಷ್ಟದಲ್ಲೂ ಬೇರ್ಪಡದ ಕುಟುಂಬ

ಆದಾಯ ತೆರಿಗೆ ಇಲಾಖೆಯು ಇಲ್ಲಿಯವರೆಗೆ 78 ಕೋಟಿ ಪ್ಯಾನ್ ಕಾರ್ಡ್​ಗಳನ್ನು ವಿತರಿಸಿದೆ. ಇದರಲ್ಲಿ ಶೇ. 98ರಷ್ಟು ಪ್ಯಾನ್ ಕಾರ್ಡ್​​ಗಳನ್ನು ವ್ಯಕ್ತಿಗಳು ಹೊಂದಿದ್ದಾರೆ. ಈಗ ಇಷ್ಟೂ ಪ್ಯಾನ್ ಕಾರ್ಡ್​ಗಳಿಗೆ ಬದಲಾಗಿ ಅಪ್​ಗ್ರೇಡೆಟ್ ಪ್ಯಾನ್ ಕಾರ್ಡ್ ವಿತರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ