AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಕಾಂ ಕಂಪನಿಗಳಿಗೆ ಬ್ಯಾಂಕ್ ಗ್ಯಾರಂಟಿಯಿಂದ ವಿನಾಯಿತಿ: ಸಂಪುಟ ಒಪ್ಪಿಗೆ; ಚಿಂತಾಕ್ರಾಂತಗೊಂಡಿದ್ದ ವೊಡಾಫೋನ್ ಐಡಿಯಾಗೆ ರಿಲೀಫ್ ಸಾಧ್ಯತೆ

Vodafone Idea gets to benefit: ಬ್ಯಾಂಕ್ ಗ್ಯಾರಂಟಿಗಳನ್ನು ಒದಗಿಸುವುದರಿಂದ ಟೆಲಿಕಾಂ ಕಂಪನಿಗಳಿಗೆ ವಿನಾಯಿತಿ ನೀಡುವ ಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 2022ಕ್ಕೆ ಮುನ್ನ ಖರೀದಿಸಲಾದ ಸ್ಪೆಕ್ಟ್ರಂನ ಹಣಪಾವತಿಗೆ ಇದು ಅನ್ವಯ ಆಗಲಿದೆ. ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ 30,000 ಕೋಟಿ ರೂಗೂ ಅಧಿಕ ಮೊತ್ತದ ಬ್ಯಾಂಕ್ ಗ್ಯಾರಂಟಿ ಬಾಕಿ ಹೊಂದಿವೆ. ಇದರಲ್ಲಿ ವೊಡಾಫೋನ್ ಐಡಿಯಾವೊಂದೇ ಹತ್ತಿರಹತ್ತಿರ 25,000 ಕೋಟಿ ರೂ ಬ್ಯಾಂಕ್ ಗ್ಯಾರಂಟಿ ಬಾಧ್ಯತೆ ಹೊಂದಿದೆ.

ಟೆಲಿಕಾಂ ಕಂಪನಿಗಳಿಗೆ ಬ್ಯಾಂಕ್ ಗ್ಯಾರಂಟಿಯಿಂದ ವಿನಾಯಿತಿ: ಸಂಪುಟ ಒಪ್ಪಿಗೆ; ಚಿಂತಾಕ್ರಾಂತಗೊಂಡಿದ್ದ ವೊಡಾಫೋನ್ ಐಡಿಯಾಗೆ ರಿಲೀಫ್ ಸಾಧ್ಯತೆ
ವೊಡಾಫೋನ್ ಐಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2024 | 1:06 PM

Share

ನವದೆಹಲಿ, ನವೆಂಬರ್ 26: ಟೆಲಿಕಾಂ ಕಂಪನಿಗಳು ಬ್ಯಾಂಕ್ ಗ್ಯಾರಂಟಿಗಳನ್ನು ಒದಗಿಸಬೇಕು ಎನ್ನುವ ನಿಯಮದಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಟೆಲಿಕಾಂ ಕಂಪನಿಗಳಿಗೆ ಬ್ಯಾಂಕ್ ಗ್ಯಾರಂಟಿಗಳಿಂದ ವಿನಾಯಿತಿ ನೀಡುವ ಕ್ರಮಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಸಿಎನ್​ಬಿಸಿ ಟಿವಿ18 ವರದಿ ಪ್ರಕಾರ 2022ಕ್ಕೆ ಮುನ್ನ ನಡೆದ ಹರಾಜುಗಳಲ್ಲಿ ಟೆಲಿಕಾಂ ಕಂಪನಿಗಳ ಸ್ಪೆಕ್ಟ್ರಂ ಖರೀದಿ ವಿಚಾರದಲ್ಲಿ ಈ ವಿನಾಯಿತಿ ಅನ್ವಯ ಆಗಬಹುದು ಎನ್ನಲಾಗಿದೆ. ಇದೇನಾದರೂ ನಿಜವೇ ಆದಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆಗೆ ಸಾಕಷ್ಟು ರಿಲೀಫ್ ಸಿಗಲಿದೆ.

5ಜಿ ನೆಟ್ವರ್ಕ್ ಅಳವಡಿಕೆಯಲ್ಲಿ ಜಿಯೋ ಮತ್ತು ಏರ್ಟೆಲ್ ಜೊತೆಗೆ ಸ್ಪರ್ಧೆಗೆ ಬಿದ್ದಿರುವ ವೊಡಾಫೋನ್ ಐಡಿಯಾ ಸಂಸ್ಥೆಗೆ ಈ ಬೆಳವಣಿಗೆ ನಿಜಕ್ಕೂ ಹೊಸ ಭರವಸೆ ಮೂಡಿಸುವ ನಿರೀಕ್ಷೆ ಇದೆ. ಇವತ್ತು ಈ ಕಂಪನಿಯ ಷೇರುಬೆಲೆ ಕೂಡ ಮೇಲೇರತೊಡಗಿದೆ.

ಬ್ಯಾಂಕ್ ಗ್ಯಾರಂಟಿಗಳನ್ನು ಮನ್ನಾ ಮಾಡುವ ಸರ್ಕಾರದ ನಿರ್ಧಾರವು ಟೆಲಿಕಾಂ ಸೆಕ್ಟರ್​ಗೆ ಅನುಕೂಲ ತರಲಿದೆ. ಅದರಲ್ಲೂ ವೊಡಾಫೋನ್ ಐಡಿಯಾಗೆ ಇದು ಒಂದು ರೀತಿಯಲ್ಲಿ ಮುಳುಗುವವನಿಗೆ ಹಲ್ಲು ಕಡ್ಡಿ ಆಸರೆ ಎನ್ನುವ ರೀತಿಯಲ್ಲಿ ಅನುಕೂಲವಾಗಲಿದೆ.

ಇದನ್ನೂ ಓದಿ: ಅಸಹಾಯಕವಾಗಿ ನಿಂತ ವೊಡಾಫೋನ್ ಐಡಿಯಾ; ಸರ್ಕಾರದಿಂದ ನೆರವಿನ ಸಾಧ್ಯತೆ

ಟೆಲಿಕಾಂ ಆಪರೇಟಿಂಗ್ ಸಂಸ್ಥೆಗಳು ಒಟ್ಟಾರೆ 30,000 ಕೋಟಿ ರೂಗೂ ಹೆಚ್ಚು ಮೊತ್ತದ ಬ್ಯಾಂಕ್ ಗ್ಯಾರಂಟಿಗಳನ್ನು ಸರ್ಕಾರಕ್ಕೆ ನೀಡುವುದು ಬಾಕಿ ಇದೆ. ಇದರಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆಯೊಂದೇ 24,700 ಕೋಟಿ ರೂ ಮೊತ್ತದ ಬ್ಯಾಂಕ್ ಗ್ಯಾರಂಟಿ ಬಾಕಿ ಹೊಂದಿದೆ. ಹೀಗಾಗಿ, ಸರ್ಕಾರದ ಈ ಬ್ಯಾಂಕ್ ಗ್ಯಾರಂಟಿಗಳ ಮನ್ನಾ ಮಾಡುವ ಕ್ರಮ ನೇರವಾಗಿ ವಿಐಗೆ ಅನುಕೂಲ ಮಾಡಿಕೊಡಲಿದೆ.

ದುಬಾರಿ ಸ್ಪೆಕ್ಟ್ರಂ ಶುಲ್ಕಗಳು ಹಾಗೂ ಎಜಿಆರ್ ಹಣವು ಟೆಲಿಕಾಂ ಕಂಪನಿಗಳಿಗೆ ದೊಡ್ಡ ಹೊರೆ ಎನಿಸಿದೆ. ಹಣಕಾಸು ಸಂಕಷ್ಟದಿಂದ ಬಳಲುತ್ತಿರುವ ವೊಡಾಫೋನ್ ಐಡಿಯಾ ಟ್ರಾಯ್​ಗೆ ನೀಡಬೇಕಾದ ಎಜಿಆರ್ ಪಾಲನ್ನು ಮರುಪರಿಶೀಲಿಸಬೇಕು ಎಂದು ಸಾಕಷ್ಟು ಬಾರಿ ಕೋರಿದೆ. ಆದರೆ, ಸುಪ್ರೀಂ ಕೋರ್ಟ್ ಅಂತಿಮವಾಗಿ ಇದಕ್ಕೆ ಅಸಮ್ಮತಿ ನೀಡಿದೆ. ಹೀಗಾಗಿ, ವೊಡಾಫೋನ್ ಐಡಿಯಾ ಹತಾಶೆಯ ಸ್ಥಿತಿಯಲ್ಲಿದೆ. ಈ ಹೊತ್ತಿನಲ್ಲಿ ಸರ್ಕಾರವು ಬ್ಯಾಂಕ್ ಗ್ಯಾರಂಟಿಗಳಿಂದ ವಿನಾಯಿತಿ ಕೊಟ್ಟಿರುವುದು ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ರೂಯಾ ಫ್ಯಾಮಿಲಿ ಬಾಂಡಿಂಗ್… ಕಷ್ಟನಷ್ಟದಲ್ಲೂ ಬೇರ್ಪಡದ ಕುಟುಂಬ

ಗಮನಿಸಬೇಕಾದ ಸಂಗತಿ ಎಂದರೆ ಸರ್ಕಾರ ಮನ್ನಾ ಮಾಡಿರುವುದು ಸಾಲದ ಹಣವನ್ನಲ್ಲ, ಬದಲಾಗಿ ಬ್ಯಾಂಕ್ ಗ್ಯಾರಂಟಿಗಳನ್ನು ಮಾತ್ರ. ಅಂದರೆ, 2022ಕ್ಕೆ ಮುಂಚೆ ಖರೀದಿಸಲಾದ ಸ್ಪೆಕ್ಟ್ರಂನ ಶುಲ್ಕಕ್ಕೆ ಟೆಲಿಕಾಂ ಕಂಪನಿಗಳು ಬ್ಯಾಂಕ್ ಗ್ಯಾರಂಟಿಗಳನ್ನು ಒದಗಿಸಬೇಕು. ಈ ಗ್ಯಾರಂಟಿಗಳಿಂದ ಮಾತ್ರವೇ ವಿನಾಯಿತಿ ಕೊಡಲಾಗಿದೆ.

ಈ ಕ್ರಮವು ವೊಡಾಫೋನ್ ಐಡಿಯಾ ಈಗ ಹೊಸ ಬ್ಯಾಂಕ್ ಸಾಲ ಪಡೆಯಲು ಸಹಾಯವಾಗುತ್ತದೆ. ಅಲ್ಲಿ ಬಳಸಲಾದ ಬ್ಯಾಂಕ್ ಗ್ಯಾರಂಟಿಗಳನ್ನು ಹೊಸ ಸಾಲ ಪಡೆಯಲು ಬಳಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ