ಎಸ್ಸಾರ್ ಗ್ರೂಪ್ ಸಹ-ಸಂಸ್ಥಾಪಕ ಶಶಿಕಾಂತ್ ರೂಯಾ ವಿಧಿವಶ; ಪ್ರಧಾನಿ ಮೋದಿ ಸಂತಾಪ

Essar Group co-founder Shashikant Ruia passes away: ದೇಶದ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಶಶಿಕಾಂತ್ ರೂಯಾ ನವೆಂಬರ್ 25ರ ಮಧ್ಯರಾತ್ರಿ 11:55ಕ್ಕೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. ಅರವತ್ತರ ದಶಕದಲ್ಲಿ ಅವರು ಹಾಗೂ ಸೋದರ ರವಿ ರೂಯಾ ಸೇರಿ ಎಸ್ಸಾರ್ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಎಸ್ಸಾರ್ ಗ್ರೂಪ್ ಸಹ-ಸಂಸ್ಥಾಪಕ ಶಶಿಕಾಂತ್ ರೂಯಾ ವಿಧಿವಶ; ಪ್ರಧಾನಿ ಮೋದಿ ಸಂತಾಪ
ಶಶಿ ರೂಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2024 | 11:29 AM

ನವದೆಹಲಿ, ನವೆಂಬರ್ 26: ಭಾರತದ ಬಿಲಿಯನೇರ್​ಗಳಲ್ಲಿ ಒಬ್ಬರೆನಿಸಿದ್ದ ಹಾಗೂ ಎಸ್ಸಾರ್ ಗ್ರೂಪ್​ನ ಸಹ-ಸಂಸ್ಥಾಪಕರಾದ ಶಶಿಕಾಂತ್ ರೂಯಾ ಇಂದು ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಕುಟುಂಬ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ ಮಾಹಿತಿ ಪ್ರಕಾರ ಸೋಮವಾರ ಮಧ್ಯರಾತ್ರಿ 11:55ಕ್ಕೆ ಕೊನೆಯುಸಿರೆಳೆದಿದ್ದಾರೆ. ಇತ್ತೀಚಿನ ವರ್ಷಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಚಿಕಿತ್ಸೆಗಾಗಿ ಅಮೆರಿಕಕ್ಕೂ ಹೋಗಿದ್ದರು. ಕಳೆದ ತಿಂಗಳಷ್ಟೇ ಅವರು ಭಾರತಕ್ಕೆ ವಾಪಸ್ಸಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಉದ್ಯಮಿಗಳು ಶಶಿ ರೂಯಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ‘ಉದ್ಯಮ ವಲಯದಲ್ಲಿ ಶಶಿಕಾಂತ್ ರೂಯಾ ಅವರದ್ದು ಮೇರು ವ್ಯಕ್ತಿತ್ವ. ತಮ್ಮ ಬದ್ಧತೆಯಿಂದ ಅವರು ಭಾರತದಲ್ಲಿ ಬಿಸಿನೆಸ್ ಸ್ವರೂಪವನ್ನು ಬದಲಿಸಿದ್ದರು. ಅವರ ಸಾವು ನಿಜಕ್ಕೂ ಬೇಸರ ತಂದಿದೆ. ಅರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳಿರುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ವಂತವಾಗಿ ಬಿಸಿನೆಸ್ ಕಟ್ಟಿದ ಶಶಿ ರೂಯಾ…

ಶಶಿಕಾಂತ್ ರೂಯಾ ತಮ್ಮ ಸೋದರ ರವಿ ರೂಯಾ ಜೊತೆ ಸೇರಿ ಎಸ್ಸಾರ್ ಸಂಸ್ಥಯನ್ನು 1965ರಲ್ಲಿ ಸ್ಥಾಪಿಸಿದ್ದರು. ತಮ್ಮ ತಂದೆ ನಂದ ಕಿಶೋರ್ ರೂಯಾ ಮಾರ್ಗದರ್ಶನ ಬಿಟ್ಟರೆ ಈ ಬಿಸಿನೆಸ್ ಅನ್ನು ರೂಯಾ ಸೋದರರು ಸ್ವಂತವಾಗಿ ಕಟ್ಟಿ ಬೆಳೆಸಿದ್ದು ವಿಶೇಷ. ಎಸ್ಸಾರ್ ಗ್ರೂಪ್ ಇವತ್ತು 8 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯಾಗಿದೆ.

ಇದನ್ನೂ ಓದಿ: ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 17 ದಿನ ರಜೆ; ಕರ್ನಾಟಕದಲ್ಲಿ 8 ದಿನ ಮಾತ್ರ; ಇಲ್ಲಿದೆ ರಜಾದಿನಗಳ ಪಟ್ಟಿ

ಶಶಿ ರೂಯಾ ಅವರು ದೇಶ ವಿದೇಶಗಳಲ್ಲಿ ಹಲವು ಉದ್ಯಮ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಭಾರತೀಯ ವಾಣಿಜ್ಯ ಮತ್ತು ಉದ್ಯಮ ಚೇಂಬರ್ಸ್​ನ ಮ್ಯಾನೇಜಿಂಗ್ ಕಮಿಟಿಯಲ್ಲಿ ಅವರು ಇದ್ದರು. ಭಾರತ ಅಮೆರಿಕ ಜಂಟಿ ಬಿಸಿನೆಸ್ ಮಂಡಳಿಯ ಅಧ್ಯಕ್ಷರಾಗಿದ್ದರು. ಭಾರತೀಯ ಹಡಗು ಮಾಲೀಕರ ಸಂಘದ ಅಧ್ಯಕ್ಷರಾಗಿದ್ದರು. ಪ್ರಧಾನಿಗಳ ಇಂಡೋ ಯುಎಸ್ ಸಿಇಒ ಫೋರಂನ ಸದಸ್ಯರಾಗಿದ್ದರು. ಭಾರತ ಜಪಾನ್ ಬಿಸಿನೆಸ್ ಕೌನ್ಸಿಲ್​ನಲ್ಲೂ ಸದಸ್ಯರಾಗಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ