AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಹಾಯಕವಾಗಿ ನಿಂತ ವೊಡಾಫೋನ್ ಐಡಿಯಾ; ಸರ್ಕಾರದಿಂದ ನೆರವಿನ ಸಾಧ್ಯತೆ

Vodafone Idea funding crisis: ವೊಡಾಫೋನ್ ಐಡಿಯಾ ಸಂಸ್ಥೆ 25,000 ಕೋಟಿ ರೂ ಮೊತ್ತದ ಸಾಲ ಪಡೆಯಲು ಮಾಡುತ್ತಿರುವ ಪ್ರಯತ್ನ ಫಲಪ್ರದವಾಗಿಲ್ಲ. ಎಜಿಆರ್ ಬಾಕಿ ಹಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬ್ಯಾಂಕುಗಳನ್ನು ಹಿಂದೇಟು ಹಾಕುವಂತೆ ಮಾಡಿದೆ. ಇದೇ ವೇಳೆ, ಎಜಿಆರ್ ಬಾಕಿ ಹಣಕ್ಕೆ ಬದಲಾಗಿ ಈಕ್ವಿಟಿಯನ್ನು ಪಡೆಯುವ ಮೂಲಕ ಸರ್ಕಾರವು ವಿಐಗೆ ನೆರವಿನ ಹಸ್ತ ಚಾಚುವ ಸಾಧ್ಯತೆ ಇದೆ.

ಅಸಹಾಯಕವಾಗಿ ನಿಂತ ವೊಡಾಫೋನ್ ಐಡಿಯಾ; ಸರ್ಕಾರದಿಂದ ನೆರವಿನ ಸಾಧ್ಯತೆ
ವೊಡಾಫೋನ್ ಐಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 19, 2024 | 2:47 PM

Share

ನವದೆಹಲಿ, ನವೆಂಬರ್ 19: ಟೆಲಿಕಾಂ ರೇಸ್​ನಲ್ಲಿ ರಿಲಾಯನ್ಸ್ ಜಿಯೊ ಮತ್ತು ಏರ್ಟೆಲ್ ಜೊತೆ ಸ್ಪರ್ಧಿಸಲು ಹೆಣಗುತ್ತಿರುವ ವೊಡಾಫೋನ್ ಐಡಿಯಾ ಈಗ ಮತ್ತಷ್ಟು ಅಸಹಾಯಕವಾಗಿ ನಿಂತಿದೆ. ಎಜಿಆರ್ ಬಾಕಿ ಹಣವನ್ನು ಪರಿಷ್ಕರಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ವಿಐಗೆ ನುಂಗಲಾಗದ ತುತ್ತಾಗಿದೆ. ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು 5ಜಿ ನೆಟ್ವರ್ಕ್ ಅಳವಡಿಕೆಯಲ್ಲಿ ವೇಗವಾಗಿ ಓಡುತ್ತಿವೆ. ಆದರೆ, ವೊಡಾಫೋನ್ ಐಡಿಯಾ ಫಂಡಿಂಗ್ ಇಲ್ಲದೇ ಒದ್ದಾಡುತ್ತಿದೆ. 4ಜಿ ಮತ್ತು 5ಜಿ ನೆಟ್ವರ್ಕ್ ಅಳವಡಿಸಲು ವಿಐಗೆ ಮುಂದಿನ ಮೂರು ವರ್ಷಕ್ಕೆ 50,000-55,000 ಕೋಟಿ ರೂ ಹೂಡಿಕೆಯ ಅಗತ್ಯ ಇದೆ. ಈ ಹಣ ಹುಟ್ಟಿಸಬೇಕೆಂದರೆ ಸರ್ಕಾರಕ್ಕೆ ಎಜಿಆರ್ ಬಾಕಿಗಳನ್ನು ಅದು ತೀರಿಸುವುದು ಅಗತ್ಯ ಇದೆ. ಇದು ಈಗ ವೊಡಾಫೋನ್ ಐಡಿಯಾ ಸಂಸ್ಥೆಯ ಹತಾಶೆಗೆ ಕಾರಣವಾಗಿದೆ.

ಇದೇ ವೇಳೆ, ಸರ್ಕಾರವು ವೊಡಾಫೋನ್ ನೆರವಿಗೆ ಧಾವಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ವೊಡಾಫೋನ್ ಸದ್ಯಕ್ಕೆ ನೀಡಬೇಕಿರುವ ಎಜಿಆರ್ ಬಾಕಿ ಹಣವನ್ನು ಸರ್ಕಾರ ಮನ್ನಾ ಮಾಡಬಹುದು. ಅದಕ್ಕೆ ಬದಲಾಗಿ ವೊಡಾಫೋನ್ ಐಡಿಯಾದ ನಿರ್ದಿಷ್ಟ ಈಕ್ವಿಟಿಗಳನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ. ಸದ್ಯ ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಸರ್ಕಾರವೇ ಅತಿಹೆಚ್ಚು ಷೇರುಪಾಲು ಹೊಂದಿದೆ. ಶೇ. 23.15ರಷ್ಟು ಪಾಲು ಸರ್ಕಾರದ್ದಿದೆ. ವೊಡಾಫೋನ್ ಗ್ರೂಪ್ ಶೇ. 22.56 ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಗ್ರೂಪ್ ಶೇ. 14.76ರಷ್ಟು ಪಾಲು ಹೊಂದಿವೆ. ಈಗ ಸಾಲ ಬಾಕಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದರೆ ಸರ್ಕಾರದ ಪಾಲು ಇನ್ನಷ್ಟು ಏರುತ್ತದೆ.

ವೊಡಾಫೋನ್ ಐಡಿಯಾ ಸಂಸ್ಥೆ ಉಳಿಸಿಕೊಂಡಿರುವ ಎಜಿಆರ್ ಬಾಕಿ ಹಣ ಬರೋಬ್ಬರಿ 70,320 ಕೋಟಿ ರೂ. ಮುಂದಿನ ಮೂರು ವರ್ಷದಲ್ಲಿ ಅದು ಆ ಹಣ ಪಾವತಿಸಬೇಕು. 2026ರ ಮಾರ್ಚ್​ನೊಳಗೆ 29,000 ಕೋಟಿ ರೂ, ಹಾಗು 2027ರ ಮಾರ್ಚ್​ನೊಳಗೆ 43,000 ಕೋಟಿ ರೂ ಹಣವನ್ನು ಅದು ಸರ್ಕಾರಕ್ಕೆ ನೀಡಬೇಕು. ಎಜಿಆರ್ ಲೆಕ್ಕಾಚಾರವು ತಮಗೆ ಅನ್ಯಾಯ ತಂದಿದೆ. ಅದನ್ನು ಪರಿಷ್ಕರಿಸಿ ಎಂದು ಟೆಲಿಕಾಂ ಕಂಪನಿಗಳು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದ್ದು ಈಗ ವಿಐಗೆ ಸಂಕಷ್ಟ ಹೆಚ್ಚಿಸಿದೆ.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್ 2024: ನಿಪುಣ ಕರ್ನಾಟಕ ಯೋಜನೆಗೆ ಕೈಜೋಡಿಸಿದ ಟೆಕ್ ಕಂಪನಿಗಳು; ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂನಿಂದ 1 ಲಕ್ಷ ಯುವಕರಿಗೆ ತರಬೇತಿ

ಕೋರ್ಟ್ ತೀರ್ಪಿಗೆ ಮುನ್ನ ವಿಐಗೆ ಸಾಲ ಕೊಡಲು ಬ್ಯಾಂಕುಗಳು ಮುಂದಾಗಿದ್ದವು. ಆದರೆ, ಈಗ ಸಾಲ ನೀಡಲು ಆಗದು ಎಂದು ಬ್ಯಾಂಕುಗಳೂ ಕೈಚೆಲ್ಲಿವೆ. ಸರ್ಕಾರವೇನಾದರೂ ಎಜಿಆರ್ ಬಾಕಿ ಹಣವನ್ನು ಈಕ್ವಿಟಿಗಳಾಗಿ ಪರಿವರ್ತಿಸಲು ಅವಕಾಶ ಕೊಟ್ಟಲ್ಲಿ ಆಗ ವೊಡಾಫೋನ್ ಐಡಿಯಾ ಒಂದಷ್ಟು ಬಂಡವಾಳ ಹುಟ್ಟಿಸಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ