ನವದೆಹಲಿ, ಮೇ 14: ಒಂದು ದಿನದಲ್ಲಿ ನಿಮ್ಮ ಮೊಬೈಲ್ಗೆ ಹಲವು ಸ್ಪ್ಯಾಮ್ ಕರೆಗಳು ಬರುತ್ತಿರುತ್ತವೆ. ಎಷ್ಟೇ ಬ್ಲಾಕ್ ಮಾಡಿದರೂ ಒಂದಿಲ್ಲೊಂದು ನಂಬರ್ಗಳಿಂದ ಈ ಅನಪೇಕ್ಷಿತ ಕರೆಗಳು (unwanted calls) ಬಂದು ಕಿರಿಕಿರಿ ಮಾಡುತ್ತಿರುತ್ತವೆ. ಟೆಲಿಮಾರ್ಕೆಟಿಂಗ್ ಕರೆಗಳೇ ಹೆಚ್ಚು. ಈ ಕರೆ ಸ್ವೀಕರಿಸಿದರೆ ಅನವಶ್ಯಕ ಉತ್ಪನ್ನಗಳನ್ನು ಮಾರಲು ಅವಿರತ ಪ್ರಯತ್ನ ಮಾಡುತ್ತಾರೆ. ಗ್ರಾಹಕರನ್ನು ಗೊಂದಲಗೊಳಿಸಿ ಉತ್ಪನ್ನ ಮಾರುವುದಿದೆ. ಬಹಳಷ್ಟು ಜನರು ಇಂತಹ ಟೆಲಿಮಾರ್ಕೆಟಿಂಗ್ ಕರೆಗಳ (telemarketing calls) ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವುದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಸ್ಪ್ಯಾಮ್ ಕರೆ, ಟೆಲಿಮಾರ್ಕೆಟಿಂಗ್ ಕರೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈ ಕರೆಗಳನ್ನು ನ್ಯಾಯುವತವಲ್ಲದ ವ್ಯವಹಾರ ಕ್ರಮಗಳೆಂದು (unfair trade practice) ವರ್ಗೀಕರಿಸಲಿದೆ. ಹೀಗಾದಲ್ಲಿ, ಗ್ರಾಹಕ ರಕ್ಷಣಾ ಕಾನೂನು (consumer protection laws) ಪ್ರಕಾರ ಈ ಕರೆಗಳನ್ನು ಮಾಡುವವರು ಅಪರಾಧಿಗಳೆನಿಸುತ್ತಾರೆ. ಅದರಂತೆ ಕಾನೂನು ಕ್ರಮ ಜರುಗಿಸಬಹುದು.
ಗ್ರಾಹಕ ರಕ್ಷಣಾ ಕಾಯ್ದೆ 2019ರ ಸೆಕ್ಷನ್ 2(28) ಮತ್ತು 2(47) ಅಡಿಯಲ್ಲಿ ಇರುವ ಕಾನೂನು ಅನಪೇಕ್ಷಿತ ವಾಣಿಜ್ಯ ಕರೆಗಳನ್ನು ನ್ಯಾಯಯುತವಲ್ಲದ ವ್ಯಾಪಾರ ಕ್ರಮವೆಂದು ಪರಿಗಣಿಸುತ್ತದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಒಂದೆರಡು ತಿಂಗಳಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಹೊರತರಲಿದೆ. ಇದಾದ ಬಳಿಕ ಟೆಲಿಮಾರ್ಕೆಟಿಂಗ್ ಸಂಸ್ಥೆಗಳು ಹಾಗೂ ಅವರು ಸೇವೆ ನೀಡುವ ಬ್ಯಾಂಕ್, ರಿಯಲ್ ಎಸ್ಟೇಟ್ ಕಂಪನಿ ಇತ್ಯಾದಿ ಸಂಸ್ಥೆಗಳನ್ನು ನಿಯಮಾವಳಿಗೆ ಒಳಪಡಬೇಕಾಗುತ್ತದೆ.
ಎಲ್ಲಾ ಸ್ಪ್ಯಾಮ್ ಕರೆಗಳು ಅಥವಾ ಟೆಲಿಮಾರ್ಕೆಟಿಂಗ್ ಕರೆಗಳು ಅಪರಾಧವಾಗಿ ವರ್ಗೀಕೃತವಾಗುತ್ತವೆ ಎಂದು ಹೇಳಲು ಆಗುವುದಿಲ್ಲ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸುವ ಮಾರ್ಗಸೂಚಿಯಲ್ಲಿ ಈ ಬಗ್ಗೆ ವಿವರಣೆ ಇರಲಿದೆ. ಯಾವೆಲ್ಲಾ ಕರೆಗಳು ವಂಚನೆ ಕರೆಗಳಾಗಿರುತ್ತವೆ ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಗೇಟ್ಸ್ ಫೌಂಡೇಶನ್ಗೆ ರಾಜೀನಾಮೆ ಕೊಟ್ಟ ಮೆಲಿಂಡಾ; ಲಕ್ಷ ಕೋಟಿ ರೂ ಗಿಟ್ಟಿಸಿದ ಬಿಲ್ ಗೇಟ್ಸ್ ಹೆಂಡತಿ
ಎರಡು ತಿಂಗಳ ಹಿಂದೆ 2024ರ ಫೆಬ್ರುವರಿಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಸ್ಪ್ಯಾಮ್ ಕರೆಗಳ ಸಮಸ್ಯೆ ನೀಗಿಸಲು ಮಾರ್ಗಸೂಚಿಗಳನ್ನು ರಚಿಸಲು ಒಂದು ಸಮಿತಿ ರಚಿಸಿತ್ತು. ಟೆಲಿಮಾರ್ಕೆಟಿಂಗ್ ಮಾಡುವವರು ತಮ್ಮ ಫೋನ್ ನಂಬರ್ಗಳು 140 ನಂಬರ್ನಿಂದ ಆರಂಭಗೊಳ್ಳಬೇಕು ಎಂದು ಈ ಸಮಿತಿ ಶಿಫಾರಸು ಮಾಡಿತ್ತು. ಈ ರೀತಿಯ ಪ್ರೀಫಿಕ್ಸ್ ನಂಬರ್ ಇದ್ದರೆ ಗ್ರಾಹಕರಿಗೆ ಕರೆಗಳನ್ನು ಗುರುತಿಸಲು ಅನುಕೂಲವಾಗುತ್ತದೆ ಎಂಬುದು ಲೆಕ್ಕಾಚಾರ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ