ಡಿವೋರ್ಸ್ ಬಳಿಕ ಗೇಟ್ಸ್ ಫೌಂಡೇಶನ್​ಗೆ ರಾಜೀನಾಮೆ ಕೊಟ್ಟ ಮೆಲಿಂಡಾ; ಲಕ್ಷ ಕೋಟಿ ರೂ ಗಿಟ್ಟಿಸಿದ ಬಿಲ್ ಗೇಟ್ಸ್ ಹೆಂಡತಿ

|

Updated on: May 14, 2024 | 11:56 AM

Melinda resigns as Gates foundation co-chairwoman: ಬಿಲ್ ಗೇಟ್ಸ್ ಅವರ ಮಾಜಿ ಪತ್ನಿ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಗೇಟ್ಸ್ ಫೌಂಡೇಶನ್​ನಿಂದ ಹೊರಬರುತ್ತಿದ್ದಾರೆ. ಡಿವೋರ್ಸ್ ಆಗಿ ಮೂರು ವರ್ಷದ ಬಳಿಕ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್​ನಿಂದ ಹೊರಹೋದರೆ ಸಿಗಬೇಕಿರುವ 12.5 ಬಿಲಿಯನ್ ಡಾಲರ್ ಹಣ ಮೆಲಿಂದಾ ಪಾಲಾಗಲಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಅವರು ಈ ವಿಚಾರವನ್ನು ದೃಢಪಡಿಸಿದ್ದಾರೆ. ತಾವೇ ಸ್ಥಾಪಿಸಿರುವ ಪೈವೋಟಲ್ ವೆಂಚರ್ಸ್​ನ ಚಟುವಟಿಕೆಗಳತ್ತ ಮೆಲಿಂದಾ ಗಮನ ಹರಿಸಲಿದ್ದಾರೆ.

ಡಿವೋರ್ಸ್ ಬಳಿಕ ಗೇಟ್ಸ್ ಫೌಂಡೇಶನ್​ಗೆ ರಾಜೀನಾಮೆ ಕೊಟ್ಟ ಮೆಲಿಂಡಾ; ಲಕ್ಷ ಕೋಟಿ ರೂ ಗಿಟ್ಟಿಸಿದ ಬಿಲ್ ಗೇಟ್ಸ್ ಹೆಂಡತಿ
ಬಿಲ್ ಗೇಟ್ಸ್ ಮತ್ತು ಮೆಲಿಂದಾ
Follow us on

ನ್ಯೂಯಾರ್ಕ್, ಮೇ 14: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಿಚ್ಛೇದಿತ ಪತ್ನಿ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಗೇಟ್ಸ್ ಫೌಂಡೇಶನ್​ನಿಂದ (Bill & Melinda Gates Foundation) ನಿರ್ಗಮಿಸಲಿದ್ದಾರೆ. 2021ರಲ್ಲಿ ಬಿಲ್ ಗೇಟ್ಸ್ ಅವರಿಗೆ ಡಿವೋರ್ಸ್ ಕೊಟ್ಟಿದ್ದ ಮೆಲಿಂದಾ ಗೇಟ್ಸ್ 3 ವರ್ಷಗಳ ಬಳಿಕ ಫೌಂಡೇಶನ್​ನಿಂದ ಹೊರ ಹೋಗುತ್ತಿದ್ದಾರೆ. ಬಿಲ್ ಗೇಟ್ಸ್ ಮತ್ತು ಮೆಲಿಂದಾ ಗೇಟ್ಸ್ ಇಬ್ಬರೂ ಸೇರಿ ಈ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಕಟ್ಟಿದ್ದರು. ಈ ಫೌಂಡೇಶನ್​ಗೆ ಮೆಲಿಂದಾ ಸಹ-ಛೇರ್ಮನ್ ಆಗಿದ್ದಾರೆ. ಈ ಹಿಂದೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಪ್ರಕಾರ ಮೆಲಿಂದಾ ಫ್ರೆಂಚ್ ಗೇಟ್ಸ್ ಅವರು ಫೌಂಡೇಶನ್​ನಿಂದ ಹೊರಹೋಗುವುದರೊಂದಿಗೆ 12.5 ಬಿಲಿಯನ್ ಡಾಲರ್ ಹಣವನ್ನೂ ಪಡೆದು ಹೋಗಲಿದ್ದಾರೆ. ಅಂದರೆ ಹೆಚ್ಚೂಕಡಿಮೆ ಒಂದು ಲಕ್ಷ ರೂನಷ್ಟು ಹಣವು ಬಿಲ್ ಗೇಟ್ಸ್ ಅವರ ಮಾಜಿ ಪತ್ನಿಗೆ ಸಿಗಲಿದೆ.

‘ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಯಿತು. ಬಿಲ್ ಮತ್ತು ನಾನು ಇಬ್ಬರೂ ಸೇರಿ ಸ್ಥಾಪಿಸಿದ ಫೌಂಡೇಶನ್ ಬಗ್ಗೆ ಹೆಮ್ಮೆ ಇದೆ. ಜಾಗತಿಕವಾಗಿ ಇರುವ ಅಸಮಾನತೆಯ ಸಮಸ್ಯೆ ನೀಗಿಸಲು ಇದು ಅಸಾಧಾರಣ ಕೆಲಸ ಮಾಡುತ್ತಿದ್ದು ಅದರ ಬಗ್ಗೆಯೂ ಹೆಮ್ಮೆ ಇದೆ,’ ಎಂದು ಮೆಲಿಂದಾ ಫ್ರೆಂಚ್ ಗೇಟ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ನನ್ನ ಸಾಮಾಜಿಕ ಕೈಂಕರ್ಯಗಳ (Philanthropy) ಮುಂದಿನ ಅಧ್ಯಾಯ ಆರಂಭಿಸಲು ಇದು ಸರಿಯಾದ ಸಮಯ ಎನಿಸುತ್ತದೆ’ ಎಂದು ಹೇಳಿರುವ ಮೆಲಿಂಡಾ ತಾನು ಈ ನಿರ್ಗಮನಕ್ಕೆ ಬದಲಾಗಿ 12.5 ಬಿಲಿಯನ್ ಡಾಲರ್ ಹಣ ಪಡೆಯಲಿರುವುದನ್ನು ದೃಢಪಡಿಸಿದ್ದಾರೆ. ಮೆಲಿಂದಾ ಗೇಟ್ಸ್ ಅವರು ಪೈವೋಟಲ್ ವೆಂಚರ್ಸ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ನಾನ್ ಪ್ರಾಫಿಟ್ ಅಲ್ಲವಾದರೂ ಮಾನವ ಹಕ್ಕು ಇತ್ಯಾದಿ ಕಾರ್ಯಗಳಿಗೆ ಪ್ರೇರೇಪಿಸಲೆಂದು ಸ್ಥಾಪಿಸಲಾಗಿರುವ ಈ ಕಂಪನಿಯಲ್ಲಿ ಮೆಲಿಂದಾ ತಮ್ಮ ಈ ಹಣವನ್ನು ಬಳಸಲಿದ್ದಾರೆ.

ಇದನ್ನೂ ಓದಿ: ಬಿರ್ಲಾ ಒಡೆತನದ ನಾವೆಲಿಸ್ ಕಂಪನಿ ಅಮೆರಿಕದ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜು

ಅತ್ತ, ಮಾಜಿ ಪತಿ ಬಿಲ್ ಗೇಟ್ಸ್ ಅವರು ಮೆಲಿಂದಾಗೆ ಶುಭ ಹಾರೈಸಿದ್ದಾರೆ. ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್​ನ ಕಾರ್ಯಗಳಲ್ಲಿ ತಮ್ಮ ಮಾಜಿ ಪತ್ನಿಯ ಕೊಡುಗೆಗಳನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಗೇಟ್ಸ್ ಫೌಂಡೇಶನ್​ನಲ್ಲಿ75.2 ಬಿಲಿಯನ್ ಡಾಲರ್ ಹಣದ ಸಂಗ್ರಹ ಇದೆ. ಮೈಕ್ರೋಸಾಫ್ಟ್ ಸಂಸ್ಥೆಯ ಫಿಲಾಂತ್ರೋಪಿ ಕಾರ್ಯಕ್ಕೆ ಈ ಫೌಂಡೇಶನ್ ಅನ್ನು ವಿನಿಯೋಗಿಸಲಾಗುತ್ತಿದೆ.

ಇದನ್ನೂ ಓದಿ: ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎನ್ನುವುದು ಭ್ರಮೆ; ಮಗು ಸಾಕಲು 20 ವರ್ಷ ಯಾಕೆ ಹಾಳು ಮಾಡಲಿ? ನಿಖಿಲ್ ಕಾಮತ್ ತರ್ಕಗಳಿವು…

2021ರಲ್ಲಿ ಬಿಲ್ ಗೇಟ್ಸ್ ಮತ್ತು ಮೆಲಿಂದಾ ಅವರು ತಾವು 27 ವರ್ಷದ ದಾಂಪತ್ಯದ ಬಳಿಕ ವಿಚ್ಛೇದನ ಹೊಂದಿರುವುದನ್ನು ಪ್ರಕಟಿಸಿದ್ದರು. ಅಮೆರಿಕದ ಸಿಯಾಟಲ್​ನಲ್ಲಿರುವ ಕೋರ್ಟ್​ನಲ್ಲಿ ಇಬ್ಬರ ಡಿವೋರ್ಸ್ ಸೆಟಲ್ಮೆಂಟ್ ಆಗಿದೆ. ಬಿಲ್ ಗೇಟ್ಸ್ ಬಳಿ 150 ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಆಸ್ತಿ ಇದೆ. ಇದರಲ್ಲಿ ಎಷ್ಟು ಮೊತ್ತದ ಆಸ್ತಿಯು ಮೆಲಿಂದಾ ಪಾಲಾಗಿದೆ, ಅಥವಾ ಆಗಲಿದೆ ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ