ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧ; ಸಚಿವ ಹರದೀಪ್ ಸಿಂಗ್ ಪುರಿ

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರಗಳು ಸಮ್ಮತಿಸುವ ಸಾಧ್ಯತೆ ಬಹಳ ಕಡಿಮೆ ಇದೆ. ಯಾಕೆಂದರೆ ಇಂಧನ ಮತ್ತು ಮದ್ಯ ಮಾರಾಟವೇ ಅವುಗಳ ಆದಾಯದ ಪ್ರಮುಖ ಮೂಲಗಳು ಎಂದು ಪೆಟ್ರೋಲಿಯಂ ಮತ್ತು ನೈರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಕೇಂದ್ರ ಸಿದ್ಧ; ಸಚಿವ ಹರದೀಪ್ ಸಿಂಗ್ ಪುರಿ
ಹರದೀಪ್ ಸಿಂಗ್ ಪುರಿImage Credit source: PTI
Follow us
| Updated By: ಗಣಪತಿ ಶರ್ಮ

Updated on: Nov 14, 2022 | 6:37 PM

ಶ್ರೀನಗರ: ಪೆಟ್ರೋಲ್ (petrol) ಮತ್ತು ಡೀಸೆಲ್ (diesel) ಅನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಯಡಿ ತರಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ (Hardeep Singh Puri) ಸೋಮವಾರ ಹೇಳಿದ್ದಾರೆ. ಇಂಧನವನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕಿದ್ದರೆ ರಾಜ್ಯಗಳ ಸಮ್ಮತಿ ಬೇಕಾಗುತ್ತದೆ. ರಾಜ್ಯಗಳು ಸಮ್ಮತಿಸಿದರೆ ನಾವು ಸಿದ್ಧರಿದ್ದೇವೆ. ಅದನ್ನು ಹೇಗೆ ಜಿಎಸ್​ಟಿ ವ್ಯಾಪ್ತಿಗೆ ತರುವುದು ಎಂದೂ ಯೋಚಿಸಬೇಕಾಗುತ್ತದೆ. ಇದನ್ನು ಹಣಕಾಸು ಸಚಿವರೇ ನಿರ್ಧರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಶ್ರೀನಗರದಲ್ಲಿ ವರದಿಗಾರರ ಜತೆ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರಗಳು ಸಮ್ಮತಿಸುವ ಸಾಧ್ಯತೆ ಬಹಳ ಕಡಿಮೆ ಇದೆ. ಯಾಕೆಂದರೆ ಇಂಧನ ಮತ್ತು ಮದ್ಯ ಮಾರಾಟವೇ ಅವುಗಳ ಆದಾಯದ ಪ್ರಮುಖ ಮೂಲಗಳು. ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ. ಯಾರಾದರೂ ತಮ್ಮ ಆದಾಯದ ಮೂಲವನ್ನು ಬಿಟ್ಟುಕೊಡುತ್ತಾರೆಯೇ? ಹಣದುಬ್ಬರ ಮತ್ತು ಇತರ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Petrol Price on November 14: ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಇಂಧನವನ್ನು ಜಿಎಸ್​​ಟಿ ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಚರ್ಚಿಸುವಂತೆ ಕೇರಳ ಹೈಕೋರ್ಟ್​ ನಿರ್ದೇಶನ ನೀಡಿತ್ತು. ಕಳೆದ ತಿಂಗಳು ಲಖನೌನಲ್ಲಿ ನಡೆದ ಸಭೆಯಲ್ಲಿ ಅದನ್ನು ಅನುಸರಿಸಲಾಗಿದೆ. ಆದರೆ, ರಾಜ್ಯಗಳು ಸಮ್ಮತಿಸಿಲ್ಲ. ನಿಮ್ಮ ಬಯಕೆಯೇ ನನ್ನದೂ ಆಗಿದೆ. ಆದರೆ, ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ಅವರು ತಿಳಿಸಿದ್ದಾರೆ.

ಇಂಧನ ದರದಲ್ಲಿ ಇನ್ನೂ ಸ್ವಲ್ಪ ಕಡಿತ ನಿರೀಕ್ಷಿಸಬಹುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಒಂದು ವರ್ಷದಲ್ಲಿ ಅತಿ ಕಡಿಮೆ ಇಂಧನ ದರ ಏರಿಕೆ ಮಾಡಿದ ದೇಶ ಭಾರತ ಎಂದು ಹೇಳಿದ್ದಾರೆ. ನಿಮ್ಮ ಪ್ರಶ್ನೆಯಿಂದ ಅಚ್ಚರಿಯಾಗಿದೆ. ಉತ್ತರ ಅಮೆರಿಕದಲ್ಲಿ ಕಳೆದ ಒಂದು ವರ್ಷದಲ್ಲಿ ಇಂಧನ ದರದಲ್ಲಿ ಶೇಕಡಾ 43ರಷ್ಟು ಏರಿಕೆಯಾಗಿದೆ. ಆದರೆ ಭಾರತದಲ್ಲಿ ಕೇವಲ ಶೇಕಡಾ 2ರಷ್ಟು ಮಾತ್ರ ಹೆಚ್ಚಳವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ