‘996’ ವಿರುದ್ಧ ತಿರುಗಿಬಿದ್ಧ ಚೀನೀ ಯುವಕರು, ಯುವತಿಯರು; ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ‘ಹಕ್ಕಿ’ಗಳ ಟ್ರೆಂಡ್

|

Updated on: Jun 19, 2024 | 11:59 AM

Chinese birds memes to protest against 996 work culture: ಚೀನಾದ ಟಿಕ್ ಟಾಕ್ ಇತ್ಯಾದಿ ಸೋಷಿಯಲ್ ಮೀಡಿಯಾದಲ್ಲಿ ಯುವಕರು, ಯುವತಿಯರ ‘ಹಕ್ಕಿ’ ಮೀಮ್ಸ್ ವೈರಲ್ ಆಗುತ್ತಿವೆ. ಹಕ್ಕಿಗಳಂತೆ ವೇಷಭೂಷಣ, ಹಾವಭಾವಗಳಿರುವ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ದೇಶದಲ್ಲಿರುವ ಕೆಲಸದ ವಾತಾವರಣದ ವಿರುದ್ಧ ಇವರು ನಡೆಸುತ್ತಿರುವ ಸಾಂಕೇತಿಕ ಪ್ರತಿಭಟನೆ ಇದು.

‘996’ ವಿರುದ್ಧ ತಿರುಗಿಬಿದ್ಧ ಚೀನೀ ಯುವಕರು, ಯುವತಿಯರು; ಕಾರ್ಪೊರೇಟ್ ವ್ಯವಸ್ಥೆ ವಿರುದ್ಧ ‘ಹಕ್ಕಿ’ಗಳ ಟ್ರೆಂಡ್
ಚೀನಾದ ಯುವಕರು, ಯುವತಿಯರು
Follow us on

ಬೀಜಿಂಗ್, ಜೂನ್ 19: ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಯುವಕರು, ಯುವತಿಯರು ಹಕ್ಕಿಗಳಂತೆ ಮೀಮ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಇದು ಯಾವುದೋ ಮೋಜು ಮಸ್ತಿಗಾಗಿ ನಡೆಯುತ್ತಿರುವ ಟ್ರೆಂಡ್ ಅಲ್ಲ. ಚೀನಾದಲ್ಲಿ ಬಹಳ ವರ್ಷಗಳಿಂದ ಇರುವ ‘996’ ವರ್ಕ್ ಮಾಡಲ್ ವಿರುದ್ಧ ಯುವಸಮುದಾಯ (Chinese youth) ನಡೆಸುತ್ತಿರುವ ಸಾಂಕೇತಿಕ ಪ್ರತಿಭಟನೆಗಳಿವು. ಟಿಕ್ ಟಾಕ್ ಮೊದಲಾದ ಸೋಷಿಯಲ್ ಮೀಡಿಯಾದಲ್ಲಿ ಈ ಮೀಮ್ಸ್ ಬಹಳ ಜನಪ್ರಿಯವಾಗುತ್ತಿವೆ. 996 ಎಂಬುದು ಚೀನಾದಲ್ಲಿ ನೆಲಸಿರುವ ಕೆಲಸದ ಸಂಸ್ಕೃತಿ. ಅಲ್ಲಿಯ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳು ವಾರದಲ್ಲಿ ಆರು ದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡುವುದು ಅನಿವಾರ್ಯ. ಅಂದರೆ ವಾರಕ್ಕೆ ಕನಿಷ್ಠ 72 ಗಂಟೆ ಕೆಲಸ.

ಉದ್ಯೋಗಿಗಳಿಗೆ ಅವರ ಖಾಸಗಿ ಜೀವನಕ್ಕೆ ಸಮಯವೇ ಸಿಗುತ್ತಿಲ್ಲ. ಹೀಗಾಗಿ, ಅಲ್ಲಿನ ಜನರು ಪಂಜರದ ಗಿಳಿಯಂತಾಗಿದ್ದಾರೆ. ರೆಕ್ಕೆ ಬಿಚ್ಚಿ ಹಾರಲು ಬಯಸುತ್ತಿದ್ದಾರೆ. ಅಂತೆಯೇ ಹಕ್ಕಿಗಳಂತೆ ವೇಷ ತೊಟ್ಟು ಹಕ್ಕಿಗಳ ವರ್ತನೆಯನ್ನೇ ಮೀಮ್ ಮಾಡುತ್ತಾ ತಮ್ಮ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಕುತೂಹಲ ಎಂದರೆ ಹೆಚ್ಚಿನ ಮೀಮ್ಸ್ ಮಾಡುತ್ತಿರುವುದು ಅಲ್ಲಿನ ಕಾಲೇಜು ಮಕ್ಕಳು ಹಾಗೂ ಕಿರಿಯ ವಯಸ್ಸಿನ ಉದ್ಯೋಗಸ್ತರು.

ಇದನ್ನೂ ಓದಿ: ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ

ಮೂರು ಹೊತ್ತೂ ಓದು ಓದು… ಓದಿನ ಬಳಿಕ ಕೆಲಸ ಕೆಲಸ… ಈ ರೇಸ್ ನಮಗೆ ಬೇಡ… ನಾವು ರೆಕ್ಕೆ ಬಿಚ್ಚಿ ಹಾರಬೇಕು… ಕೆಲಸ ಮಾಡುವ ಇಚ್ಛೆ ಇಲ್ಲ, ಹಕ್ಕಿಯಂತೆ ಸ್ವಚ್ಛಂದವಾಗಿರಬೇಕು ಎಂಬಿತ್ಯಾದಿ ನಾನಾ ರೀತಿಯ ಸಂದೇಶಗಳನ್ನು ಈ ಚೀನೀ ಯುವಕ ಮತ್ತು ಯುವತಿಯರು ತಮ್ಮ ಮೀಮ್​​ಗಳಲ್ಲಿ ತೋರ್ಪಡಿಸುತ್ತಿದ್ದಾರೆ.

ಬೇಬಲ್​ಫಿಶ್ ಡಾಟ್ ಏಷ್ಯಾ ಎಂಬ ಇನ್ಸ್​ಟಾಗ್ರಾಂ ಖಾತೆಯೊಂದರಲ್ಲಿ ಇಂಥ ಕೆಲ ಮೀಮ್​ಗಳ ಕಲೆಕ್ಷನ್ ಅನ್ನು ಪೋಸ್ಟ್ ಮಾಡಲಾಗಿದೆ.

ಚೀನಾ ದೇಶ 1980ರಿಂದ ಈಚೆಗೆ ಆರ್ಥಿಕವಾಗಿ ಅಗಾಧವಾಗಿ ಬೆಳೆದಿದೆ. ಅದಕ್ಕೆ ಪೂರಕವಾಗಿ ತೆಗೆದುಕೊಳ್ಳಲಾದ ಕ್ರಮಗಳಲ್ಲಿ ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆಯೂ ಇದೆ. ಕಮ್ಯೂನಿಸ್ಟ್ ರಾಷ್ಟ್ರವಾದರೂ ಅಲ್ಲಿನ ಕಾರ್ಮಿಕರ ಕೆಲಸ ಅವಧಿ ಬಹಳ ಹೆಚ್ಚಿದೆ. ದಿನಕ್ಕೆ ಕನಿಷ್ಠ 10-14 ಗಂಟೆ ಕೆಲಸದ ಅವಧಿ ಇರುತ್ತದೆ. ಇದರ ವಿರುದ್ಧ ಅಲ್ಲಿನ ಯುವಕರು ಈ ಹಿಂದೆಯೂ ಪ್ರತಿಭಟನೆ ಮಾಡಿದ್ದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ