ಚೀನಾದ ಕಾರ್ ಕಂಪನಿ ಬಿವೈಡಿ ಮೋಟಾರ್ಸ್ ವಿರುದ್ಧ ತೆರಿಗೆ ವಂಚನೆ ಆರೋಪ; ಡಿಆರ್​ಐನಿಂದ ತನಿಖೆ

China's BYD Faces Probe ಚೀನಾ ಮೂಲದ ಆಟೊಮೊಬೈಲ್ ಸಂಸ್ಥೆ ಬಿವೈಡಿ ಮೋಟಾರ್ಸ್ ತೆರಿಗೆ ಸರಿಯಾಗಿ ಪಾವತಿಸಿಲ್ಲ ಎಂಬ ಕಾರಣಕ್ಕೆ ಭಾರತೀಯ ಪ್ರಾಧಿಕಾರವೊಂದರಿಂದ ತನಿಖೆ ನಡೆಯುತ್ತಿದೆ. ಕಳೆದ ತಿಂಗಳಷ್ಟೇ ಭಾರತದಲ್ಲಿ ಕಾರ್ ತಯಾರಿಕಾ ಘಟಕ ಸ್ಥಾಪಿಸುವ ಬಿವೈಡಿ ಪ್ರಸ್ತಾಪವನ್ನು ಕೇಂದ್ರ ತಿರಸ್ಕರಿಸಿತ್ತು.

ಚೀನಾದ ಕಾರ್ ಕಂಪನಿ ಬಿವೈಡಿ ಮೋಟಾರ್ಸ್ ವಿರುದ್ಧ ತೆರಿಗೆ ವಂಚನೆ ಆರೋಪ; ಡಿಆರ್​ಐನಿಂದ ತನಿಖೆ
ಬಿವೈಡಿ ಆಟ್ಟೋ3 ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2023 | 2:26 PM

ನವದೆಹಲಿ, ಆಗಸ್ಟ್ 2: ಚೀನಾದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಬಿವೈಡಿ ಮೋಟಾರ್ಸ್ (BYD Motors) ವಿರುದ್ಧದ ತೆರಿಗೆ ವಂಚನೆ ಆರೋಪ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯ (DRI- Directorate of Revenue Intelligence) ತನಿಖೆ ನಡೆಸುತ್ತಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ಆಗಸ್ಟ್ 2ರಂದು ವರದಿ ಮಾಡಿದೆ. ಬಿವೈಡಿ ಸುಮಾರು 73 ಕೋಟಿ ರೂನಷ್ಟು ತೆರಿಗೆ ಪಾವತಿಸಿಲ್ಲ ಎಂಬುದು ಡಿಆರ್​ಐ ಆರೋಪ. ಡಿಅರ್​ಐನ ಪ್ರಾಥಮಿಕ ತನಿಖೆಯ ಬಳಿಕ ಈ ತೆರಿಗೆ ಹಣವನ್ನು ಬಿವೈಡಿ ಸಲ್ಲಿಸಿತ್ತಾದರೂ ಹೆಚ್ಚುವರಿ ತೆರಿಗೆ ಮತ್ತು ದಂಡ ಸಾಧ್ಯತೆಯನ್ನು ಅವಲೋಕಿಸಲು ಡಿಆರ್​ಐ ತನಿಖೆ ಕೈಗೊಂಡಿರುವುದು ತಿಳಿದುಬಂದಿದೆ. ಈ ಬಗ್ಗೆ ಡಿಆರ್​ಐನಿಂದ ಚೀನೀ ಕಾರ್ ಕಂಪನಿಗೆ ಅಂತಿಮ ನೋಟೀಸ್ ಸದ್ಯದಲ್ಲೇ ಸಲ್ಲಿಕೆಯಾಗಬಹುದು.

ಬಿವೈಡಿ ಮೋಟಾರ್ಸ್ ಚೀನಾದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ. ಭಾರತದಲ್ಲಿ ಅದರ ಎರಡು ಮಾಡೆಲ್​ಗಳು ಮಾರುಕಟ್ಟೆಯಲ್ಲಿವೆ. ಬಿವೈಡಿ ಇ6 ಮತ್ತು ಬಿವೈಡಿ ಆಟ್ಟೋ3 ಕಾರುಗಳು ಸುಮಾರು 30 ಲಕ್ಷ ರೂನಿಂದ 45 ಲಕ್ಷ ರೂವರೆಗೂ ಬೆಲೆ ಹೊಂದಿವೆ. ಈ ವರ್ಷದ ಕೊನೆಯಲ್ಲಿ ಬಿವೈಡಿ ಸೀಲ್ ಕಾರು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: IBC: ಬ್ಯಾಟರಿ ತಯಾರಿಕಾ ಘಟಕ ಸ್ಥಾಪನೆಗೆ ಕರ್ನಾಟಕ ಸರ್ಕಾರದೊಂದಿಗೆ ಐಬಿಸಿ ಒಪ್ಪಂದ

ಬಿವೈಡಿ ಸಂಸ್ಥೆ ಭಾರತದಲ್ಲಿ ಮಾರುವ ತನ್ನ ಕಾರುಗಳನ್ನು ಇಲ್ಲಿಯೇ ಅಸೆಂಬಲ್ ಮಾಡುತ್ತದೆ. ಇದರ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಈ ಬಿಡಿಭಾಗಗಳ ಆಮದಿಗೆ ಅದು ನಿಗದಿಗಿಂತ ಕಡಿಮೆ ತೆರಿಗೆ ಪಾವತಿಸಿರುವುದು ಭಾರತದ ಪ್ರಾಧಿಕಾರಗಳ ಗಮನಕ್ಕೆ ಬಂದಿದೆ. ಹೀಗಾಗಿ, ಡಿಆರ್​ಐನಿಂದ ತನಿಖೆ ನಡೆದಿರುವುದು.

ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರಿಸುವ ಒಲೆಕ್ಟ್ರಾ ಗ್ರೀನ್​ಟೆಕ್​ನ ಮಾಲೀಕ ಸಂಸ್ಥೆ ಮೇಘಾ ಎಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟ್ರಕ್ಚರ್ಸ್ ಸಂಸ್ಥೆ ಬಿವೈಡಿ ಮೋಟಾರ್ಸ್ ಜೊತೆಗೂಡಿ ಹೈದರಾಬಾದ್​ನಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ಸ್ಥಾಪಿಸುವ ಯೋಜನೆ ಪ್ರಸ್ತಾಪ ಇತ್ತು. ಹತ್ತರಿಂದ ಹದಿನೈದು ಸಾವಿರ ವಾಹನ ಉತ್ಪಾದನೆ ಸಾಧ್ಯವಿರುವ ಘಟಕಕ್ಕೆ ಮೇಘಾ ಎಂಜಿನಿಯರಿಂಗ್ ಸಂಸ್ಥೆ ಬಂಡವಾಳ ಹಾಕುವುದು, ಬಿವೈಡಿ ಮೋಟಾರ್ಸ್ ತಾಂತ್ರಿಕ ನೆರವು ಒದಗಿಸುವುದು ಎಂದು ಹೇಳಲಾಗಿತ್ತು. ಈ ಎರಡೂ ಕಂಪನಿಗಳು ಈ ಯೋಜನೆಯ ಪ್ರಸ್ತಾಪವನ್ನು ಡಿಪಿಐಐಟಿಗೆ ಸಲ್ಲಿಸಿದ್ದವು. ಕಳೆದ ತಿಂಗಳು ಕೇಂದ್ರ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿತು.

ಇದನ್ನೂ ಓದಿ: Loan: ಬೆಲೆ ಏರಿಕೆಯ ಬಿಸಿಯಲ್ಲಿ ಜೀವನ ನಡೆಸಲು ಸಾಲದ ಮೊರೆಹೋದ ಜನರು; ಕುತೂಹಲಕಾರಿ ಅಂಕಿಅಂಶಗಳು ಇಲ್ಲಿವೆ

ಚೀನಾದ ಹೂಡಿಕೆ ಮಿತಿಗೊಳಿಸುವುದು ಭಾರತದ ಉದ್ದೇಶ?

ಮೇಘಾ ಎಂಜಿನಿಯರಿಂಗ್ ಸಂಸ್ಥೆ ಜೊತೆ ಸೇರಿ ಭಾರತದಲ್ಲಿ ಕಾರು ಉತ್ಪಾದನೆ ಘಟಕ ಸ್ಥಾಪಿಸುವ ಬಿವೈಡಿ ಮೋಟಾರ್ಸ್ ಯೋಜನೆಯನ್ನು ಭಾರತ ಸರ್ಕಾರ ತಿರಸ್ಕರಿಸುವ ನಿರ್ಧಾರದ ಹಿಂದೆ ಕೇಂದ್ರದ ಎಫ್​ಡಿಐನ ಬದಲಾದ ನೀತಿ ಕೆಲಸ ಮಾಡಿದೆ. 2020ರ ಏಪ್ರಿಲ್​ನಲ್ಲಿ ವಿದೇಶೀ ನೇರ ಹೂಡಿಕೆ ನೀತಿಯಲ್ಲಿ ಕೇಂದ್ರ ಸರ್ಕಾರ ಒಂದು ಬದಲಾವಣೆ ಮಾಡಿತ್ತು. ಅದರ ಪ್ರಕಾರ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲು ಬಯಸುವ ನೆರೆ ದೇಶದ ಸಂಸ್ಥೆಗಳು ಭಾರತ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂಬುದು ಈ ನಿಯಮ.

ಸರ್ಕಾರ ಚೀನಾ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಹೋದರೂ, ಚೀನೀ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮಿತಿಗೊಳಿಸಲು ಸರ್ಕಾರ ಈ ಕಾನೂನು ತಿದ್ದುಪಡಿ ಮಾಡಿರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ