ಹೈದರಾಬಾದ್, ಮಾರ್ಚ್ 28: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆಯ ಘಟಕ ಸ್ಥಾಪಿಸಲು ಇಲಾನ್ಸ್ ಮಸ್ಕ್ ಅವರ ಟೆಸ್ಲಾ ಕಂಪನಿ ಹಿಂದೇಟು ಹಾಕುತ್ತಲೇ ಇದೆ. ಇನ್ನೊಂದೆಡೆ, ವಿಶ್ವದ ನಂಬರ್ ಒನ್ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಬಿವೈಡಿ (BYD) ಮಿಂಚಿನಂತೆ ಭಾರತಕ್ಕೆ ಬರಲು ಅಣಿಯಾಗಿದೆ. ಇಟಿವಿ ಭಾರತ್ನಲ್ಲಿ ಪ್ರಕಟವಾದ ವರದಿ ಪ್ರಕಾರ ಹೈದರಾಬಾದ್ ಬಳಿ ಬಿವೈಡಿ ಇವಿ ತಯಾರಕ ಘಟಕ (Manufacturing Unit) ಸ್ಥಾಪಿಸಬಹುದು. ತೆಲಂಗಾಣ ಸರ್ಕಾರದ ಜೊತೆ ಬಿವೈಡಿ ಕಂಪನಿ ಅಧಿಕಾರಿಗಳು ಸುದೀರ್ಘ ಮಾತುಕತೆ ನಡೆಸಿದ್ದು, ಕಂಪನಿಗೆ ಜಮೀನು ಒದಗಿಸುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಉತ್ಸುಕವಾಗಿರುವುದು ತಿಳಿದುಬಂದಿದೆ.
ತೆಲಂಗಾಣ ಸರ್ಕಾರ ಬಿವೈಡಿಯ ಇವಿ ಘಟಕ ಸ್ಥಾಪನೆಗೆ ಮೂರು ಜಾಗಗಳನ್ನು ಆಫರ್ ಮಾಡಿದೆ. ಈ ಮೂರೂ ಕೂಡ ಹೈದರಾಬಾದ್ ಸಮೀಪವೇ ಇದೆ. ಬಿವೈಡಿ ಅಧಿಕಾರಿಗಳು ಯಾವುದಾದರೂ ಒಂದು ಜಾಗವನ್ನು ಅಂತಿಮಗೊಳಿಸಿದ ಬಳಿಕ ತೆಲಂಗಾಣ ಸರ್ಕಾರ ಮತ್ತು ಬಿವೈಡಿ ಮಧ್ಯೆ ಎಂಒಯು ಒಪ್ಪಂದ ಆಗಬಹುದು. ಬಿವೈಡಿಗೆ ಭಾರತದಲ್ಲಿ ಇದು ಮೊದಲ ಫ್ಯಾಕ್ಟರಿಯಾಗುತ್ತದೆ. ಬಿವೈಡಿ ಘಟಕ ಸ್ಥಾಪನೆಯಾದರೆ, ಅದರ ಸರಬರಾಜು ಸರಪಳಿಯಲ್ಲಿರುವ ಇತರ ಹಲವು ಬಿಡಿಭಾಗ ತಯಾರಕ ಕಂಪನಿಗಳೂ ಕೂಡ ಹೈದರಾಬಾದ್ ಸಮೀಪವೇ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆ ಹೆಚ್ಚು. ಒಂದು ರೀತಿಯಲ್ಲಿ ಹೈದರಾಬಾದ್ನಲ್ಲಿ ಆಟೊ ಸೆಕ್ಟರ್ನ ಪ್ರಮುಖ ಕ್ಲಸ್ಟರ್ ನಿರ್ಮಾಣ ಆಗಬಹುದು.
ಇದನ್ನೂ ಓದಿ: ಸರ್ಕಾರದಿಂದ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ? ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಆದಾಯ
ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಅಮೆರಿಕದ ನಂಬರ್ ಒನ್ ಇವಿ ಕಂಪನಿ. ಚೀನಾದಲ್ಲಿ ಇದು ತಯಾರಕಾ ಘಟಕ ಸ್ಥಾಪಿಸಿ, ಕೆಲ ವರ್ಷ ಕಾಲ ಇವಿ ಮಾರುಕಟ್ಟೆಯ ಕಿಂಗ್ ಎನಿಸಿತ್ತು. ಈಗ್ಗೆ ಕೆಲ ವರ್ಷಗಳಿಂದ ಚೀನೀ ಕಂಪನಿಗಳು ಇವಿ ಸೆಕ್ಟರ್ನಲ್ಲಿ ಮುಂಚೂಣಿಗೆ ಬಂದಿವೆ. ಅದರಲ್ಲೂ ಬಿವೈಡಿ ನಂಬರ್ ಒನ್ ಎನಿಸಿದೆ. ಚೀನಾದ ಇವಿ ಮಾರುಕಟ್ಟೆಯಲ್ಲಿ ಟೆಸ್ಲಾ ಮೂರನೇ ಸ್ಥಾನಕ್ಕೋ, ನಾಲ್ಕನೇ ಸ್ಥಾನಕ್ಕೋ ಹೋಗಿದೆ. ಚೀನಾದ ಇವಿ ಮಾರುಕಟ್ಟೆಯಲ್ಲಿ ಚೀನೀ ಕಂಪನಿಗಳೊಂದಿಗೆ ಪೈಪೋಟಿ ಆಗಲ್ಲ ಎಂದು ಮಸ್ಕ್ ಅವರೇ ಸ್ವತಃ ಹತಾಶೆ ತೋಡಿಕೊಂಡಿದ್ದುಂಟು.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಈಗ ಬೆಳವಣಿಗೆಯ ಹಂತದಲ್ಲಿದ್ದು, ಇಲ್ಲಿ ಯಾವುದೆ ಇವಿ ಕಂಪನಿ ಹೆಜ್ಜೆ ಊರಲು ಸಕಾಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಟೆಸ್ಲಾ ಕಂಪನಿ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಇಷ್ಟರಲ್ಲೇ ಸ್ಥಾಪನೆಯಾಗಬೇಕಿತ್ತು. ಚೀನಾದ ಇವಿ ಮಾರುಕಟ್ಟೆ ಈಗ ಬಹುತೇಕ ನಿಂತ ನೀರಾಗಿರುವುದರಿಂದ ಭಾರತದ ಮಾರುಕಟ್ಟೆ ಪ್ರವೇಶಿಸಲು ಟೆಸ್ಲಾಗೆ ಸರಿಯಾದ ಸಂದರ್ಭ ಇದು. ಆದರೆ, ಇಲಾನ್ ಮಸ್ಕ್ ಮೀನ ಮೇಷ ಎಣಿಸುತ್ತಲೇ ಇದ್ದಾರೆ.
ಇದನ್ನೂ ಓದಿ: ಹಳೆಯ ಎಸಿ ಕೊಟ್ಟು ಹೊಸ 5 ಸ್ಟಾರ್ ಎಸಿ ಪಡೆಯಿರಿ; ವಿದ್ಯುತ್ ಉಳಿತಾಯದ ಜೊತೆಗೆ ಸರ್ಕಾರದಿಂದಲೂ ಇನ್ಸೆಂಟಿವ್
ಅತ್ತ, ಬಿವೈಡಿ ಕಂಪನಿ ಭಾರತಕ್ಕೆ ಬರಲು ಸದಾ ಉತ್ಸುಕವಾಗಿಯೇ ಇತ್ತು. ಆದರೆ, ಭಾರತ ಮತ್ತು ಚೀನಾ ನಡುವೆ ಸೂಕ್ಷ್ಮ ಪರಿಸ್ಥಿತಿ ಇದ್ದುದ್ದರಿಂದ ಘಟಕ ಸ್ಥಾಪಿಸಲು ಆಗಿರಲಿಲ್ಲ. ಈಗ ಪರಿಸ್ಥಿತಿ ತಿಳಿಗೊಳ್ಳುತ್ತಿರುವುದರಿಂದ ಬಿವೈಡಿ ಮೀನ ಮೇಷ ಎಣಿಸುವ ಗೋಜಿಗೆ ಹೋಗದೆ ಟೆಸ್ಲಾಗಿಂತ ಮುಂಚೆ ಘಟಕ ಸ್ಥಾಪಿಸಲು ಮುಂದಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ