ಹಳೆಯ ಎಸಿ ಕೊಟ್ಟು ಹೊಸ 5 ಸ್ಟಾರ್ ಎಸಿ ಪಡೆಯಿರಿ; ವಿದ್ಯುತ್ ಉಳಿತಾಯದ ಜೊತೆಗೆ ಸರ್ಕಾರದಿಂದಲೂ ಇನ್ಸೆಂಟಿವ್
Govt incentive scheme for 5-star ACs: ಭಾರತದಲ್ಲಿ ಬೇಸಿಗೆ ಬಿಸಿ ವರ್ಷದಿಂದ ವರ್ಷಕ್ಕೆ ಹೆಚ್ಚು ಕಾವಾಗುತ್ತಿದೆ. ಪರಿಣಾಮವಾಗಿ ಎಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವಿದ್ಯುತ್ ಉಳಿಸುವ ಇತ್ತೀಚಿನ 5-ಸ್ಟಾರ್ ರೇಟಿಂಗ್ನ ಎಸಿಗಳನ್ನು ಬಳಸಲು ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕಾಗಿ ವಿವಿಧ ಯೋಜನೆಗಳನ್ನು ಪ್ಲಾನ್ ಮಾಡುತ್ತಿದೆ. ಹಳೆಯ ಎಸಿಗಳನ್ನು ಮರಳಿಸಿ ಹೊಸ 5-ಸ್ಟಾರ್ ಎಸಿ ಖರೀದಿಸಲು ಇನ್ಸೆಂಟಿವ್ ಸ್ಕೀಮ್ಗಳನ್ನು ಸರಕಾರ ತರಲಿದೆ.

ನವದೆಹಲಿ, ಮಾರ್ಚ್ 27: ಬೇಸಿಗೆ ಬಂತು, ಧಗೆ ಧಗೆ ಬಿಸಿಲಿಗೆ ಮನೆಯಲ್ಲಿ ಇರುವುದು ಕಷ್ಟ. ಅದರಲ್ಲೂ ಸುಡು ನೆತ್ತಿಯ ಛಾವಣಿ ಅಡಿಯಲ್ಲಿ ವಾಸಿಸುವ ಮನೆಗಳಿಗೆ ಎಸಿ ಇಲ್ಲದಿದ್ದರೆ ಬಹಳ ಕಷ್ಟ. ಈಗ ಒಂದು ಏರ್ ಕಂಡೀಷನರ್ ಬೆಲೆ 30,000 ರೂನಿಂದ 60,000 ರೂವರೆಗೂ ಇರುತ್ತದೆ. ನಿಮ್ಮಲ್ಲಿ ಈಗಾಗಲೇ ಏರ್ ಕಂಡೀಷನರ್ ಇದ್ದು, ಅದು ಎಂಟು ವರ್ಷ ಹಳತಾಗಿದ್ದರೆ ಸುಲಭವಾಗಿ ಹೊಸ ಎಸಿ (AC- Air Conditioner) ಖರೀದಿಸಬಹುದು. ಅದಕ್ಕಾಗಿ ಸರ್ಕಾರದಿಂದ ಇನ್ಸೆಂಟಿವ್ ಸ್ಕೀಮ್ ಸಿದ್ಧವಾಗುತ್ತಿದೆ. ಹಳೆಯ ಎಸಿ ಕೊಟ್ಟರೆ ನಿಮಗೆ ಡಿಸ್ಕೌಂಟ್ ದರದಲ್ಲಿ 5-ಸ್ಟಾರ್ ರೇಟಿಂಗ್ನ ಎಸಿ ಸಿಗುತ್ತದೆ. ಹಳೆಯ ಎಸಿಗಳು ಹೆಚ್ಚು ವಿದ್ಯುತ್ ಬೇಡುವುದರಿಂದ ಹೊಸ ಏರ್ಕಂಡೀಶನರ್ಗಳಿಗೆ ಉತ್ತೇಜನ ನೀಡಲು ಕೇಂದ್ರ ವಿದ್ಯುತ್ ಸಚಿವಾಲಯವು ಇಂಥದ್ದೊಂದು ಸ್ಕೀಮ್ ರೂಪಿಸುತ್ತಿದೆ. ವಿದ್ಯುತ್
ಹೇಗಿರಬಹುದು ಈ ಎಸಿ ಇನ್ಸೆಂಟಿವ್ ಸ್ಕೀಮ್?
ಹೊಸ 5-ಸ್ಟಾರ್ ರೇಟಿಂಗ್ನ ಎಸಿಗಳಿಗೆ ಉತ್ತೇಜಿಸಲು ಸರ್ಕಾರ ಮೂರು ರೀತಿಯ ಪ್ಲಾನ್ಗಳನ್ನು ಮಾಡಿದೆ. ವಾಹನಗಳನ್ನು ಸ್ಕ್ರ್ಯಾಪ್ಗೆ ಕೊಟ್ಟಂತೆ, ಜನರು ತಮ್ಮ ಹಳೆಯ ಎಸಿಗಳನ್ನು ರೀಸೈಕ್ಲಿಂಗ್ ಕಂಪನಿಗಳಿಗೆ ಕೊಡುವುದು. ಇದಕ್ಕೆ ಬದಲಾಗಿ ಒಂದು ಸರ್ಟಿಫಿಕೇಟ್ ಸಿಗುತ್ತದೆ. ಹೊಸ 5-ಸ್ಟಾರ್ ಎಸಿ ಖರೀದಿಸುವಾಗ ಈ ಸರ್ಟಿಫಿಕೇಟ್ ನೀಡಿದರೆ ನಿರ್ದಿಷ್ಟ ಡಿಸ್ಕೌಂಟ್ ಸಿಗುತ್ತದೆ. ಇದು ಒಂದು ಮಾದರಿಯ ಇನ್ಸೆಂಟಿವ್ ಸ್ಕೀಮ್.
ಮತ್ತೊಂದು ಐಡಿಯಾ ಎಂದರೆ ಎಕ್ಸ್ಚೇಂಜ್ ಆಫರ್. ಮಳಿಗೆಗಳಲ್ಲಿ ಗ್ರಾಹಕರೇ ನೇರವಾಗಿ ತಮ್ಮ ಹಳೆಯ ಎಸಿಗಳನ್ನು ಕೊಟ್ಟು ಹೊಸ ಎಸಿಗಳನ್ನು ಡಿಸ್ಕೌಂಟ್ ದರದಲ್ಲಿ ಪಡೆಯಲು ಅವಕಾಶ ಕಲ್ಪಿಸಬಹುದು.
ಇದನ್ನೂ ಓದಿ: ವಾಹನಗಳಿಗೆ ಟ್ರಂಪ್ ಶೇ. 25 ಆಮದುಸುಂಕ ಬರೆ; ಭಾರತೀಯ ಆಟೊ ಉದ್ಯಮದ ಮೇಲೇನು ಪರಿಣಾಮ?
ಮೂರನೇ ಮಾರ್ಗ ಎಂದರೆ, ಹಳೆಯ ಎಸಿಗಳನ್ನು ಕೊಟ್ಟು ಹೊಸ ಎಸಿಗಳನ್ನು ಖರೀದಿಸುವ ಗ್ರಾಹಕರಿಗೆ ವಿದ್ಯುತ್ ಬಿಲ್ಗಳಲ್ಲಿ ರಿಯಾಯಿತಿ ಕೊಡಬಹುದು.
ಹೊಸ ಎಸಿಗಳ ಖರೀದಿಗೆ ಸರ್ಕಾರ ಉತ್ತೇಜಿಸುವುದು ಯಾಕೆ?
ಭಾರತದ ಹೆಚ್ಚಿನ ಭಾಗಗಳಲ್ಲಿ ಬೇಡಿಗೆಯ ಬಿಸಿಲು ತಡೆದುಕೊಳ್ಳುವುದು ಬಹಳ ಕಷ್ಟವಾಗುತ್ತಿದೆ. ಬಹುತೇಕ ಖಾಸಗಿ ಕಚೇರಿ ಕಟ್ಟಡಗಳು ಎಸಿ ಬಳಸುತ್ತವೆ. ಮನೆಗಳಲ್ಲೂ ಎಸಿ ಅಳವಡಿಕೆಗೆ ಬೇಡಿಕೆ ಹೆಚ್ಚುತ್ತಿದೆ. 2021-22ರಲ್ಲಿ 84 ಲಕ್ಷ ಎಸಿ ಯೂನಿಟ್ಗಳು ಮಾರಾಟವಾಗಿದ್ದುವು. ಎರಡು ವರ್ಷದ ಅಂತರದಲ್ಲಿ, ಅಂದರೆ 2023-24ರಲ್ಲಿ ಮಾರಾಟವಾದ ಏರ್ ಕಂಡೀಷನರ್ಗಳ ಸಂಖ್ಯೆ ಒಂದು ಕೋಟಿ ದಾಟಿತ್ತು.
ಕಟ್ಟಡಗಳಿಂದ ಬಳಕೆಯಾಗುವ ವಿದ್ಯುತ್ನಲ್ಲಿ ಶೇ. 25ರಷ್ಟು ವಿದ್ಯುತ್ ಎಸಿಗಳಿಂದ ಆಗುತ್ತಿದೆ. ಭಾರತದಲ್ಲಿರುವ ಹಳೆಯ ಎಸಿಗಳೆಲ್ಲವೂ ಬಹುತೇಕ 3-ಸ್ಟಾರ್ ರೇಟಿಂಗ್ನ ಎಸಿಗಳೇ ಆಗಿವೆ.
ಇದನ್ನೂ ಓದಿ: ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು, ಕಾನೂನು ಏನು ಹೇಳುತ್ತೆ?
ಒಂದೂವರೆ ಟನ್ನ ಏರ್ ಕಂಡೀಷನ್ ಸಾಧನವು ಒಂದು ಗಂಟೆಗೆ ಎರಡು ಯುನಿಟ್ ವಿದ್ಯುತ್ (ಕೆಡಬ್ಲ್ಯುಎಚ್) ಬಳಸುತ್ತದೆ. 5-ಸ್ಟಾರ್ ಎಸಿಗಳನ್ನು ಬಳಸಿದರೆ ವರ್ಷಕ್ಕೆ 1,276 ಯುನಿಟ್ಗಳನ್ನು ಉಳಿಸಬಹುದು. ಅಂದರೆ, ವರ್ಷಕ್ಕೆ ಸುಮಾರು ಆರು ಸಾವಿರ ರೂಗೂ ಹೆಚ್ಚು ಹಣ ಉಳಿಸಬಹುದು. ಹೀಗಾಗಿ, ಹಳೆಯ ಎಸಿಯನ್ನು ಮರಳಿಸಿ ಹೊಸ ಎಸಿ ಖರೀದಿಸುವುದು ವೈಯಕ್ತಿಕವಾಗಿಯೂ ಲಾಭಕಾರಿ, ಪರಿಸರಕ್ಕೂ ಅನುಕೂಲ ಎನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Thu, 27 March 25