Layoffs: ಕಂಪನಿಯ ಸಹ-ಸಂಸ್ಥಾಪಕ ಬಿಟ್ಟ ಒಂದು ತಿಂಗಳಲ್ಲೇ ಶೇ. 20ರಷ್ಟು ಉದ್ಯೋಗಿಗಳಿಗೂ ಕೆಲಸ ಹೋಯ್ತು; ಇದು ಚಿಂಗಾರಿ ಕಥೆ

|

Updated on: Jun 20, 2023 | 6:26 PM

Chingari Layoffs 20pc Work Force: ಭಾರತದ ಪ್ರಮುಖ ವಿಡಿಯೋ ಶೇರಿಂಗ್ ಪ್ಲಾಟ್​ಫಾರ್ಮ್ ಚಿಂಗಾರಿ ತನ್ನ 250 ಉದ್ಯೋಗಿಗಳ ಪೈಕಿ ಶೇ. 20ರಷ್ಟು ಮಂದಿಯನ್ನು ಕೆಲಸದಿಂದ ಕಿತ್ತುಹಾಕಿರುವುದು ವರದಿಯಾಗಿದೆ.

Layoffs: ಕಂಪನಿಯ ಸಹ-ಸಂಸ್ಥಾಪಕ ಬಿಟ್ಟ ಒಂದು ತಿಂಗಳಲ್ಲೇ ಶೇ. 20ರಷ್ಟು ಉದ್ಯೋಗಿಗಳಿಗೂ ಕೆಲಸ ಹೋಯ್ತು; ಇದು ಚಿಂಗಾರಿ ಕಥೆ
ಚಿಂಗಾರಿ
Follow us on

ನವದೆಹಲಿ: ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ (Layoffs) ಟ್ರೆಂಡ್ ಕೇವಲ ದೊಡ್ಡ ಟೆಕ್ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಬಹುತೇಕ ಎಲ್ಲಾ ಸ್ತರದ ಹಾಗೂ ವಿವಿಧ ವಲಯದ ಕಂಪನಿಗಳಲ್ಲೂ ಇದೆ. ನಿರೀಕ್ಷೆಗೆ ತಕ್ಕಂತೆ ಆದಾಯ ಕಾಣದ ವಿಡಿಯೋ ಶೇರಿಂಗ್ ಪ್ಲಾಟ್​ಫಾರ್ಮ್​ಗಳು ಬಹುತೇಕ ಮುಚ್ಚುವ ಹಂತಕ್ಕೆ ಬಂದಿವೆ. ಜೋಷ್, ಮೋಜ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಿಂದ ನೂರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಚಿಂಗಾರಿ (Chingari App) ಸರದಿ. ಭಾರತದಿಂದ ಟಿಕ್ ಟಾಕ್ ನಿಷೇಧವಾದಾಗ ಆ ಸ್ಥಾನಕ್ಕೆ ತುಂಬುವ ಭರವಸೆ ನೀಡಿದ ಆ್ಯಪ್​ಗಳಲ್ಲಿ ಚಿಂಗಾರಿಯೂ ಒಂದು. ಇದೀಗ ಶೇ. 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿರುವ ಸುದ್ದಿ ಕೇಳಿಬಂದಿದೆ. 250 ಮಂದಿ ಉದ್ಯೋಗಿಗಳ ಪೈಕಿ 50 ಮಂದಿಯನ್ನು ಲೇ ಆಫ್ ಮಾಡಲಾಗಿದೆ.

ಕಳೆದ ತಿಂಗಳಷ್ಟೇ (2023 ಮೇ) ಚಿಂಗಾರಿ ಕಂಪನಿಯ ಸಹಸಂಸ್ಥಾಪಕ ಆದಿತ್ಯ ಕೊಠಾರಿ ಅವರು ಕೆಲಸ ಬಿಟ್ಟು ಹೋಗಿದ್ದರು. ಅದರ ಬೆನ್ನಲ್ಲೇ ಇದೀಗ ಶೇ. 20ರಷ್ಟು ಉದ್ಯೋಗಿಗಳಿಗೆ ಕೆಲಸ ಹೋಗಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಎರಡು ತಿಂಗಳ ಪರಿಹಾರ ಕೊಡಲಾಗುತ್ತಿದೆ. ಅವರಿಗೆ ಬೇರೆ ಕೆಲಸ ದೊರಕಿಸಿಕೊಡಲು ಸಹಾಯ ಮತ್ತು ವೃತ್ತಿ ಸಲಹೆಗಳನ್ನು ಕೊಡಲಾಗುತ್ತಿದೆ ಎಂದು ಚಿಂಗಾರಿ ಕಂಪನಿಯ ಪ್ರತಿನಿಧಿಯೊಬ್ಬರು ಮನಿಕಂಟ್ರೋಲ್ ವೆಬ್​ಸೈಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿTax Evasion: ಪ್ಯಾನ್, ಆಧಾರ್ ಕದ್ದು ಶೆಲ್ ಕಂಪನಿ ಮೂಲಕ ತೆರಿಗೆ ವಂಚಿಸುತ್ತಿದ್ದ ಜಾಲಗಳು ಬೆಳಕಿಗೆ; 30,000 ಕೋಟಿ ರೂ ಕರ್ಮಕಾಂಡ ಬಯಲು

ಕುತೂಹಲ ಎಂದರೆ ನಾಲ್ಕು ತಿಂಗಳ ಹಿಂದಷ್ಟೇ ಚಿಂಗಾರಿ ಸಂಸ್ಥೆ ಆಪ್​ಟೋಸ್ ಲ್ಯಾಬ್ಸ್ ಎಂಬ ಕಂಪನಿಯಿಂದ ಹೂಡಿಕೆ ಗಿಟ್ಟಿಸಿತ್ತು. ಜಾಗತಿಕವಾಗಿ ಆ್ಯಪ್ ಅನ್ನು ವಿಸ್ತರಿಸುವ ಬಗ್ಗೆ ಇತ್ತೀಚೆಗೆ ಕಂಪನಿ ಹೇಳಿಕೊಂಡಿತ್ತು. ಯುಎಇ, ಟರ್ಕಿ, ಇಂಡೋನೇಷ್ಯಾದ ಸ್ಥಳೀಯ ಭಾಷೆಗಳಲ್ಲಿ ಚಿಂಗಾರಿಯನ್ನು ಬಿಡುಗಡೆ ಮಾಡಲಾಗಿದೆ. ಅಮೆರಿಕದ ಕೆಲವೆಡೆಯೂ ಚಿಂಗಾರಿ ಸಿಗುತ್ತಿದೆ. ಯೂರೋಪ್, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ ವಿವಿಧ ದೇಶಗಳಲ್ಲಿ ಚಿಂಗಾರಿ ಆ್ಯಪ್ ಅನ್ನು ಬಿಡುಗಡೆ ಮಾಡಲು ಯೋಜಿಸಲಾಗುತ್ತಿದೆ ಎಂದು ಕಂಪನಿಯ ಮತ್ತೊಬ್ಬ ಸಹಸಂಸ್ಥಾಪಕ ಹಾಗೂ ಸಿಒಒ ದೀಪಕ್ ಸಾಳವಿ ಕಳೆದ ಡಿಸೆಂಬರ್​ನಲ್ಲಿ ಹೇಳಿದ್ದರು. ಇದೀಗ ಭಾರತದಲ್ಲಿ ಚಿಂಗಾರಿಯ ಉದ್ಯೋಗಕಡಿತ ಆಗುತ್ತಿದೆ. ಕಂಪನಿಗೆ ಹೊಸ ರೂಪು ಕೊಡಲು ಈ ಕ್ರಮ ಕೈಗೊಂಡಿದ್ದಾಗಿ ಅದು ಹೇಳಿಕೊಂಡಿದೆ.

ಕೇವಲ ಚಿಂಗಾರಿ ಮಾತ್ರವಲ್ಲ ಬೇರೆ ವಿಡಿಯೋ ಪ್ಲಾಟ್​ಫಾರ್ಮ್​ಗಳೂ ಲೇ ಆಫ್ ಭರಾಟೆಯಲ್ಲಿವೆ. ಮೋಜ್​ನಿಂದ 115 ಮಂದಿ, ಜೋಷ್​ನ ವರ್ಸೆ ಇನೋವೇಶನ್​ನಿಂದ 150 ಮಂದಿ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ