ನವದೆಹಲಿ, ಡಿಸೆಂಬರ್ 17: ಮುಂದಿನ ಎರಡೂವರೆ ದಶಕದೊಳಗೆ ಭಾರತದ ವೃತ್ತೀಯ ಆರ್ಥಿಕತೆಯಿಂದ ಎರಡು ಟ್ರಿಲಿಯನ್ ಡಾಲರ್ನ ಮಾರುಕಟ್ಟೆ ಮೌಲ್ಯ ಸೃಷ್ಟಿಯಾಗಬಲ್ಲುದು. ಒಂದು ಕೋಟಿ ಉದ್ಯೋಗಗಳನ್ನೂ ಸೃಷ್ಟಿಸಬಲ್ಲುದು ಎಂದು ಆರ್ಥಿಕ ತಜ್ಞ ಹಾಗು ಭಾರತದ ಜಿ20 ಶೆರ್ಪಾ ಆಗಿದ್ದ ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಸರ್ಕುಲಾರ್ ಎಕನಾಮಿ ಅಥವಾ ವೃತ್ತಾಕಾರದ ಆರ್ಥಿಕತೆ ಎಂದರೆ ಪರಿಸರಕ್ಕೆ ಪೂರಕವಾಗಿ ವಸ್ತುಗಳನ್ನು ಮರುಬಳಕೆ ಮಾಡಿ ಬಳಸುವ ಒಂದು ವ್ಯವಸ್ಥೆಯಾಗಿದೆ. ಅಮಿತಾಭ್ ಕಾಂತ್ ಪ್ರಕಾರ, ಈ ಮಾದರಿಯ ಆರ್ಥಿಕತೆಯಿಂದ ಹಣ ಉಳಿತಾಯ ಆಗುವುದು ಮಾತ್ರವಲ್ಲ, ದೇಶದ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಕೂಡ ನೀಡಬಲ್ಲುದು. ಜಾಗತಿಕ ವೃತ್ತೀಯ ಆರ್ಥಿಕತೆಯ ಮಾರುಕಟ್ಟೆಯಲ್ಲಿ ಭಾರತ ಹಿಡಿತ ಸಾಧಿಸಲು ಅನುಕೂಲವಾಗಬಹುದು.
ಸದ್ಯ ಭಾರತದ ಒಟ್ಟಾರೆ ಆರ್ಥಿಕತೆಯ ಗಾತ್ರ 3.7 ಟ್ರಿಲಿಯನ್ ಡಾಲರ್ನಷ್ಟಿದೆ. ಇದರಲ್ಲಿ ವೃತ್ತೀಯ ಆರ್ಥಿಕತೆಯ ಗಾತ್ರವೇ 2025ರೊಳಗೆ ಎರಡು ಟ್ರಿಲಿಯನ್ ಡಾಲರ್ಗೆ ಏರುವುದು ಎಂದರೆ ಸಣ್ಣ ವಿಷಯವಲ್ಲ. ‘ನಗರೀಕರಣ ಮತ್ತು ಕೈಗಾರಿಕೀರಣದಿಂದಾಗಿ ಸುಸ್ಥಿರವಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಥ ಸಂದರ್ಭದಲ್ಲಿ ಮರುಬಳಕೆ ಆರ್ಥಿಕತೆಯು ಭರವಸೆಯ ಬೆಳಕಾಗಬಲ್ಲುದು’ ಎಂಬುದು ನೀತಿ ಆಯೋಗ್ನ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರ ಅನಿಸಿಕೆ.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ ರಫ್ತು
ದೇಶದ ನೈಸರ್ಗಿಕ ಸಂಪನ್ಮೂಲಗಳು ಬಹಳ ವೇಗವಾಗಿ ನಶಿಸಿಹೋಗುತ್ತಿವೆ. ಸಾಕಷ್ಟು ತ್ಯಾಜ್ಯಗಳು ನಿರ್ಮಾಣವಾಗುತ್ತಿವೆ. ದಿನವೊಂದಕ್ಕೆ 1.6 ಲಕ್ಷ ಟನ್ಗಳಷ್ಟು ಒಣತ್ಯಾಜ್ಯವು ನಿರ್ಮಾಣ ಆಗುತ್ತಿದೆ. ಹೀಗಾಗಿ, ವೃತ್ತೀಯ ಆರ್ಥಿಕತೆಗೆ ಒತ್ತು ಕೊಡುವುದು ಬಹಳ ಮುಖ್ಯ ಎನ್ನಲಾಗುತ್ತಿದೆ.
‘ಭಾರತದಲ್ಲಿ ವಾಸಿಸಲು ಅಯೋಗ್ಯ ಎನಿಸುವ ಪರಿಸ್ಥಿತಿ ಬರಬಹುದು. ನಗರೀಕರಣ ಮತ್ತು ಕೈಗಾರಿಕೀರಣದಿಂದ ಉದ್ಬವಿಸುತ್ತಿರುವ ಸಮಸ್ಯೆಗಳಿಗೆ ಸರ್ಕುಲಾರ್ ಎಕನಾಮಿ ಉತ್ತಮ ಪರಿಹಾರ ಅನಿಸಬಹುದು. ಇರುವ ಸಂಪನ್ಮೂಲಗಳನ್ನು ಸಾಧ್ಯವಾದಷ್ಟೂ ಹೆಚ್ಚು ಅವಧಿ ಮರುಬಳಕೆ ಮಾಡುವುದು ಉತ್ತಮ ವ್ಯವಸ್ಥೆ,’ ಎಂದು ಅಮಿತಾಭ್ ಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಯಶಸ್ಸು; ಒಂದು ದಶಕದ ಸಾಧನೆ ಒಂದೇ ವರ್ಷದಲ್ಲಿ…
ವೃತ್ತೀಯ ಆರ್ಥಿಕತೆಯ ವ್ಯವಸ್ಥೆಯು ತ್ಯಾಜ್ಯವನ್ನು ಮಾತ್ರವಲ್ಲ, ಪರಿಸರಕ್ಕೆ ಹಾನಿಯಾಗುವುದನ್ನೂ ಕಡಿಮೆ ಮಾಡುತ್ತದೆ. ಜೊತೆಗೆ, ಹೊಸ ಆರ್ಥಿಕ ಅವಕಾಶಗಳನ್ನೂ ಒದಗಿಸುತ್ತದೆ ಎಂಬುದು ಅವರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ