Closing Bell: ದಿನದ ಕನಿಷ್ಠ ಮಟ್ಟದಿಂದ 722 ಪಾಯಿಂಟ್ಸ್ ಚೇತರಿಸಿಕೊಂಡ ನಂತರ ಸೆನ್ಸೆಕ್ಸ್ 410 ಪಾಯಿಂಟ್ಸ್ ಕುಸಿತ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಸೆ. 28ರ ಮಂಗಳವಾರದಂದು ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು 410 ಪಾಯಿಂಟ್ಸ್​ ಇಳಿಕೆಯೊಂದಿಗೆ ವಹಿವಾಟು ಮುಗಿಸಿದೆ.

Closing Bell: ದಿನದ ಕನಿಷ್ಠ ಮಟ್ಟದಿಂದ 722 ಪಾಯಿಂಟ್ಸ್ ಚೇತರಿಸಿಕೊಂಡ ನಂತರ ಸೆನ್ಸೆಕ್ಸ್ 410 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Sep 28, 2021 | 4:13 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೆಪ್ಟೆಂಬರ್ 28ನೇ ತಾರೀಕಿನ ಮಂಗಳವಾರದಂದು ಇಳಿಕೆಯಲ್ಲಿ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಆದರೆ ಈ ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಅದಕ್ಕೆ ಕಾರಣವಾಗಿದ್ದು ಲೋಹ, ವಿದ್ಯುತ್ ಮತ್ತು ತೈಲ ಹಾಗೂ ಅನಿಲ ಕಂಪೆನಿಯ ಷೇರುಗಳಲ್ಲಿನ ಖರೀದಿ. ಈ ದಿನದ ಕೊನೆಗೆ ಸೆನ್ಸೆಕ್ಸ್ 410.28 ಪಾಯಿಂಟ್ಸ್ ಅಥವಾ ಶೇ 0.68ರಷ್ಟು ಇಳಿಕೆ ಕಂಡು, 59,667.60 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ 106.50 ಅಥವಾ ಶೇ 0.60ರಷ್ಟು ಕುಸಿತ ಕಂಡು 17,748.60 ಪಾಯಿಂಟ್ಸ್​​ನಲ್ಲಿ ವಹಿವಾಟು ಚುಕ್ತಾ ಮಾಡಿತು. ಇಂದಿನ ವಹಿವಾಟಿನಲ್ಲಿ 1463ರಷ್ಟು ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1715 ಕಂಪೆನಿಯ ಷೇರುಗಳು ಇಳಿಕೆ ಕಂಡವು ಮತ್ತು 164 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್​ ಸೂಚ್ಯಂಕಗಳು ತಲಾ ಶೇ 0.5ರಷ್ಟು ಇಳಿಕೆ ಕಂಡವು. ವಲಯವಾರು ನೋಡುವುದಾದರೆ, ಮಾಹಿತಿ ತಂತ್ರಜ್ಞಾನ ಹಾಗೂ ರಿಯಾಲ್ಟಿ ಸೂಚ್ಯಂಕಗಳು ಶೇ 2ರಿಂದ ಶೇ 3ರಷ್ಟು ಕುಸಿದವು. ವಿದ್ಯುತ್, ತೈಲ ಹಾಗೂ ಅನಿಲ ಮತ್ತು ಲೋಹದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಆದವು. ಮಾರ್ಕೆಟ್​ನಲ್ಲಿ ಇಳಿಕೆ ಕಂಡುಬಂದಿದ್ದರೂ ನಿಫ್ಟಿ50 17,600 ಪಾಯಿಂಟ್​ನಲ್ಲಿ ಉಳಿಸಿಕೊಳ್ಳಲು ಯತ್ನಿಸಿದೆ. ಇದರರ್ಥ ಏನೆಂದರೆ 17,550ರಿಂದ 17,600 ಪಾಯಿಂಟ್ಸ್​ ಬಹಳ ಮುಖ್ಯವಾದ ಸಪೋರ್ಟ್​ ಝೋನ್. ಅದು ಉಳಿದುಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ವಿಶ್ಲೇಷಕರು. ಒಂದು ವೇಳೆ ಈ ಮಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾದಲ್ಲಿ 18 ಸಾವಿರ ಪಾಯಿಂಟ್ಸ್​ ತಲುಪಬಹುದು ಎಂದು ಅಭಿಪ್ರಾಯ ಪಡುತ್ತಾರೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಪವರ್​ ಗ್ರಿಡ್​ ಕಾರ್ಪೊರೇಷನ್ ಶೇ 4.52
ಕೋಲ್ ಇಂಡಿಯಾ ಶೇ 4.49
ಎನ್​ಟಿಪಿಸಿ ಶೇ 4.02
ಐಒಸಿ ಶೇ 3.62
ಬಿಪಿಸಿಎಲ್​ ಶೇ 2.14

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಭಾರ್ತಿ ಏರ್​ಟೆಲ್ ಶೇ -3.65
ಟೆಕ್ ಮಹೀಂದ್ರಾ ಶೇ -3.44
ಬಜಾಜ್​ ಫೈನಾನ್ಸ್​ ಶೇ -3.23
ಡಿವೀಸ್​ ಲ್ಯಾಬ್ಸ್ ಶೇ -3.01
ಬಜಾಜ್​ ಫಿನ್​ಸರ್ವ್​ ಶೇ -2.67

ಇದನ್ನೂ ಓದಿ: Stock Market Tips: 60 ಸಾವಿರ ಪಾಯಿಂಟ್ಸ್​ ತಲುಪಿದ ನಂತರ ಷೇರು ಮಾರ್ಕೆಟ್​ ಮುಂದೆ ಏನಾಗಬಹುದು?

(Closing Bell Stock Market Index Sensex Recovered From Low Levels And Ends With More Than 400 Points Down)