Stock Market Tips: 60 ಸಾವಿರ ಪಾಯಿಂಟ್ಸ್​ ತಲುಪಿದ ನಂತರ ಷೇರು ಮಾರ್ಕೆಟ್​ ಮುಂದೆ ಏನಾಗಬಹುದು?

ಸೆನ್ಸೆಕ್ಸ್​ 60 ಸಾವಿರ ಪಾಯಿಂಟ್ಸ್​ ದಾಟಿದ ಮೇಲೆ ಮುಂದಿನ ಹಾದಿ ಏನು ಹಾಗೂ ಹೂಡಿಕೆದಾರರು ಏನು ಮಾಡಬೇಕು ಎಂಬ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

Stock Market Tips: 60 ಸಾವಿರ ಪಾಯಿಂಟ್ಸ್​ ತಲುಪಿದ ನಂತರ ಷೇರು ಮಾರ್ಕೆಟ್​ ಮುಂದೆ ಏನಾಗಬಹುದು?
ಡಾ.ಬಾಲಾಜಿ ರಾವ್

“ಷೇರು ಮಾರ್ಕೆಟ್ 60 ಸಾವಿರ ಪಾಯಿಂಟ್ಸ್ ದಾಟಿದೆ. ಆದರೆ ಒಂದು ವಿಷಯ ಗೊತ್ತಿರಲಿ, ಇನ್ನೂ ಎರಡ್ಮೂರು ವರ್ಷಗಳ ನಂತರ ಇರಬೇಕಾದ ಕಂಪೆನಿ ಷೇರುಗಳ ದರ ಈಗಲೇ ಇದೆ. ಷೇರು ಮಾರ್ಕೆಟ್​ನಲ್ಲಿ ಹಣ ಹಾಕುವವರು ರಾತ್ರೋರಾತ್ರಿ ಅದರಿಂದ ಭಾರೀ ಲಾಭ ನಿರೀಕ್ಷೆ ಮಾಡಬಾರದು. ಸಣ್ಣ ಮಟ್ಟದ ಹೂಡಿಕೆದಾರರು ಒಂದು ವೇಳೆ ಸಣ್ಣ ಮಾರ್ಕೆಟ್ ಕರೆಕ್ಷನ್ (ಇಳಿಕೆ) ಆದರೂ ಹೆದರಬಾರದು. ಹೇಗೆ ಕೆಳಗೆ ಕುಸಿದ ಮಾರ್ಕೆಟ್​ ಮೇಲೇರಿದೆ, ಅದೇ ರೀತಿ ಇಷ್ಟೊಂದು ವೇಗವಾಗಿ ಏರಿಕೆ ಕಾಣುತ್ತಿರುವ ಮಾರ್ಕೆಟ್​ ಕೆಳಗೆ ಇಳಿಯಬೇಕು. ಆದರೆ ಮಾರ್ಕೆಟ್​ ಎಷ್ಟು ಕರೆಕ್ಷನ್​ ಆಗುತ್ತದೆ ಅಥವಾ ಕ್ರ್ಯಾಶ್ (ಕುಸಿತ) ಆಗುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ ಈ ಯಾವುದೇ ಸನ್ನಿವೇಶವನ್ನು ತಡೆಯುವುದು ರೀಟೇಲ್ ಹೂಡಿಕೆದಾರರ ಕೈಯಲ್ಲಿದೆ. ಯಾವುದೇ ಮಾರ್ಕೆಟ್​ ಇರಲಿ, ಅದರಲ್ಲಿ ಷೇರುಗಳ ಖರೀದಿ ಮಾಡಬಹುದು. ಆದರೆ…”

-ಹೀಗೆ ಒಂದು ಕ್ಷಣ ಮಾತು ನಿಲ್ಲಿಸಿದರು ಹೂಡಿಕೆ ತಜ್ಞರಾದ ಡಾ. ಬಾಲಾಜಿ ರಾವ್. ಸೆನ್ಸೆಕ್ಸ್ ಹಾಗೂ ನಿಫ್ಟಿ ಗರಿಷ್ಠ ಮಟ್ಟದಲ್ಲಿದೆ. ಈಗಿನ ಹಂತದಲ್ಲಿ ಷೇರು ಮಾರುಕಟ್ಟೆ ಮುಂದಿನ ನಡೆ ಏನಾಗಬಹುದು, ಹೂಡಿಕೆದಾರರು ಏನು ಮಾಡಬೇಕು, ಷೇರುಗಳನ್ನು ಆಯ್ಕೆ ಹೇಗೆ ಮಾಡಿಕೊಳ್ಳಬೇಕು ಇತ್ಯಾದಿ ಪ್ರಶ್ನೆಗಳನ್ನು ಅವರ ಮುಂದಿಟ್ಟು, ಟಿವಿ9 ಕನ್ನಡ ಡಿಜಿಟಲ್​​ನಿಂದ ಮಾತನಾಡಿಸಲಾಯಿತು. ಆ ಎಲ್ಲ ಪ್ರಶ್ನೆಗಳಿಗೂ ಅವರು ಉತ್ತರ ನೀಡಿದ್ದು ಹೀಗೆ: ಸ್ಟಾಕ್​ ಮಾರ್ಕೆಟ್ ಮುಂದೆ ಯಾವ ಹಂತ ತಲುಪುತ್ತದೆ ಅಥವಾ ಇಲ್ಲಿಂದ ಮುಂದೆ ಹೇಗೆ ವರ್ತಿಸಲಿದೆ ಎಂಬುದನ್ನು ಯಾರಿಂದಲೂ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಯಾವುದೇ ಹಂತದಲ್ಲಿ ಖರೀದಿ ಮಾಡಬಹುದು. 10 ಷೇರು ಕೊಳ್ಳಬೇಕು ಅಂತಿದ್ದಲ್ಲಿ 3 ಖರೀದಿಸಿ. ಇನ್ನೊಂದಿಷ್ಟು ಬೆಲೆ ಕಡಿಮೆ ಅಥವಾ ಮೇಲೇರುವ ಸೂಚನೆ ಕಂಡರೆ ಮತ್ತಷ್ಟು ಖರೀದಿಸಬಹುದು. ಒಳ್ಳೆ ಷೇರನ್ನೇ ಕೊಂಡುಕೊಳ್ಳಬೇಕು. ಯಾವುದು ಒಳ್ಳೆ ಷೇರು ಎಂಬ ಮತ್ತೊಂದು ಪ್ರಶ್ನೆ ಎದುರಾಗುತ್ತದೆ.

ಡೆಟ್ ಈಕ್ವಿಟಿ ರೇಷಿಯೋ 1ರ ಒಳಗಿರಬೇಕು
ಕಂಪೆನಿಯು ಬಿಎಸ್​ಇ ಅಥವಾ ಎನ್​ಎಸ್​ಇಯಲ್ಲಿ ಲಿಸ್ಟಿಂಗ್​ ಆಗಿರಬೇಕು. ಆ ಕಂಪೆನಿಯ ವ್ಯವಹಾರ ಯಾವುದು ಎಂಬ ಬಗ್ಗೆ ಮಾಹಿತಿ ಕಲೆಹಾಕಬೇಕು. ಆ ನಂತರ ಅದರ ಸಾಲ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ಕಂಪೆನಿಯ ಡೆಟ್ ಈಕ್ವಿಟಿ ರೇಷಿಯೋ ನೋಡಿಕೊಳ್ಳಬೇಕು. ಯಾವ ಕಂಪೆನಿಯ ಡೆಟ್​ ಈಕ್ವಿಟಿ ರೇಷಿಯೋ 1ರ ಒಳಗಿದೆಯೋ ಅದಕ್ಕೆ ಸಾಲ ಕಡಿಮೆ ಇದೆ ಎಂದರ್ಥ. ಅದಕ್ಕಿಂತ ಹೆಚ್ಚಿದ್ದಲ್ಲಿ ಜಾಸ್ತಿ ಸಾಲವಿದೆ ಎಂದು ತಿಳಿದುಕೊಳ್ಳಬೇಕು. ಇನ್ನು ಆ ಕಂಪೆನಿಯು ಕಳೆದ ಐದು ವರ್ಷದಲ್ಲಿ ಡಿವಿಡೆಂಡ್ (ಲಾಭಾಂಶ) ನೀಡಿದೆಯಾ ಹಾಗೂ ಯಾವ ಪ್ರಮಾಣದಲ್ಲಿ ನೀಡಿದೆ ನೋಡಬೇಕು. ಲಾಭ ಮಾಡಿದ್ದಾಗ ಮಾತ್ರ ಕಂಪೆನಿಯಿಂದ ಲಾಭಾಂಶ ನೀಡುವುದಕ್ಕೆ ಸಾಧ್ಯ. ಆದ್ದರಿಂದ ಲಾಭದಾಯಕ ಸ್ಥಿತಿಯಲ್ಲಿ ಇರುವ ಕಂಪೆನಿಯನ್ನು ಆರಿಸಿಕೊಳ್ಳಬೇಕು.

ಕರೆಕ್ಷನ್ ಅಥವಾ ಕ್ರ್ಯಾಷ್
ಯಾವುದೇ ಮಾರ್ಕೆಟ್ ಈಗ ಹೋಗುತ್ತಿರುವ ವೇಗದಲ್ಲಿ ಮುನ್ನುಗ್ಗುತ್ತಿದ್ದರೆ ಒಂದು ಹಂತದಲ್ಲಿ ಕರೆಕ್ಷನ್ ಬರುತ್ತದೆ. ಈಗಿನ ಮಾರ್ಕೆಟ್​ ಕೂಡ ಅದರಿಂದ ಹೊರತಲ್ಲ. ಈವರೆಗೆ ನಾನು ನಾಲ್ಕೈದು ಮಾರ್ಕೆಟ್​ ಕ್ರ್ಯಾಷ್​ಗಳನ್ನು ನಾನು ನೋಡಿದ್ದೇನೆ. ಆದರೆ ಒಳ್ಳೆ ಕಂಪೆನಿಯ ಷೇರುಗಳಿಗೆ ಯಾವ ಸಮಯದಲ್ಲೂ ಹಣ ಹೂಡಬಹುದು ಅನ್ನೋದು ನನ್ನ ಸಲಹೆ ಹಾಗೂ ನಂಬಿಕೆ. ಇನ್ನೊಬ್ಬರಿಗೆ ಸಲಹೆ ನೀಡಿ, ನಾನು ಬೇರೆ ರೀತಿ ನಡೆದುಕೊಳ್ಳುವುದಿಲ್ಲ. ಆದ್ದರಿಂದ ನಂಬಿಕೆ ಅಂತಲೂ ಅಂದೆ. ಏಕೆಂದರೆ ನಾನೂ ಮಾರ್ಕೆಟ್​ನಲ್ಲಿ ಹಣ ಹಾಕ್ತೀನಿ. ಷೇರು ಮಾರ್ಕೆಟ್​ ಸ್ವಲ್ಪ ಕುಸಿತ ಕಾಣಲು ಶುರುವಾದರೆ ಗಾಬರಿಯಿಂದ ಹೊರಬರುವವರೇ ಹೆಚ್ಚು. ಈ ಸ್ವಭಾವದಿಂದಲೇ ಹಣ ಕಳೆದುಕೊಳ್ಳುವವರು ಹೆಚ್ಚು. “ನೀವು ಕನಿಷ್ಠ 10 ವರ್ಷ ಆ ಕಂಪೆನಿಯ ಷೇರನ್ನು ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತಾದಲ್ಲಿ 10 ನಿಮಿಷ ಕೂಡ ಇಟ್ಟುಕೊಳ್ಳಲಾರಿರಿ ಅಂತಲೇ ಅರ್ಥ” ಎನ್ನುತ್ತಾರೆ ಹೂಡಿಕೆದಾರರ ಪಾಲಿನ ಜಗದ್ಗುರು ವಾರೆನ್​ ಬಫೆಟ್​. ಆದ್ದರಿಂದ ದೀರ್ಘಾವಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಹಣ ಹೂಡಬೇಕು.

ರಿವ್ಯೂ ನೋಡ್ತೀವಿ
ಒಂದು ಮೊಬೈಲ್, ಟ್ಯಾಬ್, ಲ್ಯಾಪ್​ಟಾಪ್, ಕಡೆಗೆ ಒಂದು ಸಿನಿಮಾ ನೋಡಬೇಕು ಅಂದರೂ ರಿವ್ಯೂ ನೋಡ್ತೀವಿ. ಆ ಬಗ್ಗೆ ತಜ್ಞರು ಏನೆಂದಿದ್ದಾರೆ ಗಮನಿಸ್ತೀವಿ. ಬ್ರ್ಯಾಂಡ್​ ನೋಡ್ತೀವಿ. ಬಹಳ ಲೆಕ್ಕಾಚಾರದ ನಂತರವೇ ಖರೀದಿ ಮಾಡ್ತೀವಿ. ಷೇರು ಮಾರ್ಕೆಟ್​ನ ಸ್ಟಾಕ್​ಗಳು ಹಾಗೇ. ಯಾವ ಕಂಪೆನಿಯ ಷೇರು ಖರೀದಿಸಬೇಕು ಅಂತಿರುತ್ತೇವೋ ಅದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕು. ಸಮಯ ಎತ್ತಿಡಬೇಕು. ಪ್ರತಿ ದಿನ ಬಿಜಿನೆಸ್​ ನ್ಯೂಸ್​ಪೇಪರ್, ವೆಬ್​ಸೈಟ್​ಗಳನ್ನು ಓದಬೇಕು, ನ್ಯೂಸ್​ ಚಾನೆಲ್​ಗಳನ್ನು ನೋಡುತ್ತಿರಬೇಕು. ಇದ್ಯಾವುದೂ ಮಾಡದೇ ಷೇರು ಬ್ರೋಕರ್​ ಹೇಳಿದ ಮಾತನ್ನೇ ನಂಬಿ, ಹಣ ಹೂಡುತ್ತಾ ಹೋದಲ್ಲಿ ಅವರಿಗೆ ಲಾಭ (ಬ್ರೋಕರೇಜ್) ಅಷ್ಟೇ.

ಎರಡು ನಿಮಿಷದಲ್ಲಿ ನಿರ್ಧರಿಸಬಹುದು
ಒಂದೊಳ್ಳೆ ಕಂಪೆನಿ ಯಾವುದು ಅಂತ ನಿರ್ಧರಿಸೋದು ಎರಡು ನಿಮಿಷದ ಕೆಲಸ. ಆದರೆ ಅದಕ್ಕಾಗಿ ಅಧ್ಯಯನ ಬೇಕು, ಅನುಭವ ಜತೆಯಾಗಬೇಕು. ಇದೇ ಸಂದರ್ಭದಲ್ಲಿ ಇನ್ನೂ ಒಂದು ವಾರೆನ್​ ಬಫೆಟ್​ ಅವರ ಮಾತು ನೆನಪಿಸಿಕೊಳ್ಳುವುದಾದರೆ, “ಇನ್ನು 10 ವರ್ಷ ಷೇರು ಮಾರ್ಕೆಟ್​ ಬಾಗಿಲು ತೆಗೆಯಲ್ಲ ಅಂದರೂ ತಡೆದುಕೊಳ್ಳುವ ಶಕ್ತಿ ಇರಬೇಕು”. ಬಹಳ ಜನಕ್ಕೆ ದಿನಕ್ಕೆ ಶೇ 2ರಂತೆ ಷೇರು ಪೇಟೆಯಲ್ಲಿ ದುಡಿಯಬೇಕು ಅನ್ನೋ ಉಮ್ಮೇದಿ. ಇವತ್ತಿಗೆ ತುಂಬ ಸೇಫ್​ ಆದ ಬ್ಯಾಂಕ್​ಗಳಲ್ಲಿ ಎಫ್​ಡಿ ಮೇಲೆ ವಾರ್ಷಿಕ ಬಡ್ಡಿ ಶೇ 5ರೊಳಗಿದೆ. ಷೇರು ಮಾರ್ಕೆಟ್​ನಲ್ಲಿ ವರ್ಷಕ್ಕೆ ಶೇ 15ರಷ್ಟು ರಿಟರ್ನ್ಸ್​ ಬಂದರೆ ಸಾಕಾಗಲ್ಲವಾ? ಅದಕ್ಕಿಂತ ಹೆಚ್ಚಿನ ಆಸೆ ಯಾಕೆ ಪಡಬೇಕು?

ಬ್ರ್ಯಾಂಡ್​ ವ್ಯಾಲ್ಯೂ, ವ್ಯವಹಾರ ಗಮನಿಸಿ
ರೀಟೇಲ್​ ಇನ್ವೆಸ್ಟರ್ಸ್ ದೊಡ್ಡ ಮಟ್ಟದಲ್ಲಿ ಷೇರು ಮಾರುಕಟ್ಟೆಗೆ ಬಂದಿದ್ದಾರೆ. ಆದರೆ ಹೆಸರು ಕೂಡ ಕೇಳಿಲ್ಲದ, ಯಾವ್ಯಾವುದೋ ಕಂಪೆನಿಯಲ್ಲಿ ಹಣ ಹಾಕುತ್ತಿದ್ದಾರೆ. ಈ ಹಣ ಸರಿಯಾದ ಕಡೆಗೆ ಹೂಡಿಕೆಯಾಗಬೇಕು. ಆಗ ಇನ್ನಷ್ಟು ಒಳ್ಳೆ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಷೇರಿನ ಬೆಲೆ ನೋಡುವುದು ಕೈಬಿಟ್ಟು, ಯಾವ ಕಂಪೆನಿ ಮತ್ತು ಅದರ ಬ್ರ್ಯಾಂಡ್​ ಹಾಗೂ ವ್ಯವಹಾರದ ಮೌಲ್ಯ ಗಮನಿಸಿ ಹಣ ಹೂಡಿಕೆ ಮಾಡಿ ಎಂದು ಮಾತು ಮುಗಿಸಿದರು ಬಾಲಾಜಿ ರಾವ್.

ಇದನ್ನೂ ಓದಿ: ಎಲ್ಲ ಕಂಪನಿಗಳ ಷೇರುಗಳು ಹಣವನ್ನು ದ್ವಿಗುಣಗೊಳಿಸಲಾರವು, ಹಣ ಹೂಡುವಾಗ ವಿವೇಚನೆ ಬಳಸಬೇಕು: ಡಾ ಬಾಲಾಜಿ ರಾವ್

(What Next For Sensex After Crossing 60000 Points Here Is The Stock Market Expert Opinion)

 

Click on your DTH Provider to Add TV9 Kannada