ಎಂಜಿನಿಯರ್ ಪದವೀಧರರಿಗೆ ಎರಡೂವರೆ ಲಕ್ಷ ರೂ ಸಂಬಳ ಸುಳ್ಳು; ಕನಿಷ್ಠ 4 ಲಕ್ಷ ರೂ ವೇತನ: ಕಾಗ್ನೈಜೆಂಟ್ ಸ್ಪಷ್ಟನೆ

|

Updated on: Aug 18, 2024 | 5:51 PM

Cognizant salary controversy: ಐಟಿ ಸಂಸ್ಥೆ ಕಾಗ್ನೈಜೆಂಟ್​ನಲ್ಲಿ ಎಂಜಿನಿಯರುಗಳಿಗೆ ಎರಡೂವರೆ ಲಕ್ಷ ರೂ ಆರಂಭಿಕ ಸಂಬಳ ನೀಡಲಾಗುತ್ತಿದೆ ಎಂಬುದು ಟ್ರೋಲ್ ಆಗುತ್ತಿದೆ. ಕಾಗ್ನೈಜೆಂಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎಂಜಿನಿಯರಿಂಗ್ ಅಲ್ಲದ 3 ವರ್ಷದ ಪದವಿ ಮಾಡಿದವರಿಗೆ ಮಾತ್ರವೇ 2.52 ಲಕ್ಷ ರೂ ಆರಂಭಿಕ ಸಂಬಳ ನೀಡಲಾಗುತ್ತಿದೆ ಎಂದಿದೆ. ಎಂಜಿನಿಯರುಗಳಿಗೆ ವರ್ಷಕ್ಕೆ 4 ಲಕ್ಷ ರೂನಿಂದ 12 ಲಕ್ಷ ರೂವರೆಗೆ ಪ್ಯಾಕೇಜ್ ಆಫರ್ ಮಾಡಲಾಗುತ್ತದೆ ಎಂದಿದೆ ಕಾಗ್ನೈಜೆಂಟ್.

ಎಂಜಿನಿಯರ್ ಪದವೀಧರರಿಗೆ ಎರಡೂವರೆ ಲಕ್ಷ ರೂ ಸಂಬಳ ಸುಳ್ಳು; ಕನಿಷ್ಠ 4 ಲಕ್ಷ ರೂ ವೇತನ: ಕಾಗ್ನೈಜೆಂಟ್ ಸ್ಪಷ್ಟನೆ
ಕಾಗ್ನೈಜೆಂಟ್
Follow us on

ನವದೆಹಲಿ, ಆಗಸ್ಟ್ 18: ಐಟಿ ಸರ್ವಿಸ್ ಕಂಪನಿ ಕಾಗ್ನೈಜೆಂಟ್ ಟೆಕ್ನಾಲಜೀಸ್ ತನ್ನ ಹೊಸ ನೇಮಕಾತಿಗಳಿಗೆ ವರ್ಷಕ್ಕೆ 2.52 ಲಕ್ಷ ರೂ ಮಾತ್ರವೇ ವೇತನ ಆಫರ್ ಮಾಡುತ್ತಿದೆ ಎನ್ನುವ ಟೀಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಈ ಬಗ್ಗೆ ಸ್ವತಃ ಕಾಗ್ನೈಜೆಂಟ್ ಸಂಸ್ಥೆಯೇ ಪ್ರತಿಕ್ರಿಯೆ ನೀಡಿದ್ದು, ಈ ಸುದ್ದಿಯನ್ನು ಅಲ್ಲಗಳೆದಿದೆ. ಎಂಜಿನಿಯರಿಂಗ್ ಪದವೀಧರರಿಗೆ ಆರಂಭಿಕ ಸಂಬಳ ವರ್ಷಕ್ಕೆ 4ರಿಂದ 12 ಲಕ್ಷ ರೂ ನೀಡುತ್ತಿದ್ದೇವೆ ಎಂದು ಹೇಳಿದೆ. ಐಟಿ ಅಥವಾ ಎಂಜಿನಿಯರಿಂಗ್ ಅಲ್ಲದ ಸಾಮಾನ್ಯ ಮೂರು ವರ್ಷದ ಡಿಗ್ರಿ ಮಾಡಿದವರಿಗೆ ಮಾತ್ರವೇ 4 ಲಕ್ಷ ರೂಗಿಂತ ಕಡಿಮೆ ಮೊತ್ತದ ಆರಂಭಿಕ ಸಂಬಳ ನೀಡುತ್ತಿದೆಯಂತೆ.

ಈ ಬಾರಿ ಸಂಬಳ ಹೆಚ್ಚಳ ಕೇವಲ ಶೇ. 1 ಮಾತ್ರ ಎನ್ನುವ ಟೀಕೆಗೂ ಕಾಗ್ನೈಜೆಂಟ್ ಪ್ರತಿಕ್ರಿಯಿಸಿದೆ. ಉದ್ಯೋಗಿಗಳ ಕಾರ್ಯಸಾಧನೆಗೆ ಅನುಗುಣವಾಗಿ ಶೇ. 1ರಿಂದ 5ರಷ್ಟು ಸಂಬಳ ನೀಡುತ್ತಿದ್ದೇವೆ. ಶೇ. 1 ಸ್ಯಾಲರಿ ಹೈಕ್ ಕನಿಷ್ಠ ಮಟ್ಟದ್ದಾಗಿದೆ. ಶೇ. 5ರವರೆಗೆ ಸಂಬಳ ಹೆಚ್ಚಳ ಪಡೆದವರಿದ್ದಾರೆ ಎಂದು ಐಟಿ ಸಂಸ್ಥೆ ಹೇಳಿದೆ.

ಅಮೆರಿಕದಲ್ಲಿ ಮುಖ್ಯಕಚೇರಿ ಹೊಂದಿರುವ ಕಾಗ್ನೈಜೆಂಟ್ ಭಾರತದಲ್ಲಿ ಶೇ. 70ರಷ್ಟು ಉದ್ಯೋಗಿಗಳನ್ನು ಹೊಂದಿದೆ. ಅದು ಐಟಿ ಸರ್ವಿಸ್​ನ ವಿವಿಧ ಹುದ್ದೆಗಳಿಗೆ ಎಂಜಿನಿಯರ್ ಪದವೀಧರರು ಮತ್ತು ಇತರ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುತ್ತದೆ. ಎರಡು ರೀತಿಯ ನೇಮಕಾತಿಗಳು ಒಂದೇ ಸಮಯದಲ್ಲಿ ನಡೆಯಬಹುದು. ಎಂಜಿನಿಯರಿಂಗ್ ಅಲ್ಲದ ಬಿಎ ಅಥವಾ ಬಿಎಸ್​ಸಿ ಅಥವಾ ಬಿಕಾಂ ಓದಿರುವ ಪದವೀಧರರ ನೇಮಕಾತಿಯೂ ನಡೆಯುತ್ತದೆ. ಇವರಿಗೆ ಆರಂಭಿಕ ಸಂಬಳವಾಗಿ 2.52 ಲಕ್ಷ ರೂ ಆಫರ್ ಮಾಡಲಾಗುತ್ತಿದೆಯಂತೆ. ಈ ವಿಚಾರವನ್ನು ಕಾಗ್ನೈಜೆಂಟ್ ಅಮೆರಿಕ ವಿಭಾಗದ ಅಧ್ಯಕ್ಷ ಸೂರ್ಯ ಗುಮ್ಮಡಿ ಹೇಳಿದರೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಸದ್ಯದಲ್ಲೇ ಆಗಲಿದೆ 7,500 ರೂ; ಚಿನ್ನಕ್ಕೆ ಬೇಡಿಕೆ ಹೆಚ್ಚಿಸುತ್ತಿವೆ ಹಲವು ಅಂಶಗಳು

ಎಂಜಿನಿಯರ್ ಆಗಲೀ ನಾನ್ ಎಂಜಿನಿಯರ್ ಆಗಲೀ ಯಾವುದೆ ಹೊಸ ನೇಮಕಾತಿ ಆದರೂ ಅವರಿಗೆ ತರಬೇತಿ, ಕೌಶಲ್ಯ ಅಭಿವೃದ್ಧಿ ಇತ್ಯಾದಿ ಒದಗಿಸಲಾಗುತ್ತದೆ. ಎಂಜಿನಿಯರಿಂಗ್ ಹಿನ್ನೆಲೆ ಇಲ್ಲದವರೂ ಇವತ್ತು ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್, ಮ್ಯಾನೇಜರ್ ಇತ್ಯಾದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂಬ ವಿಚಾರವನ್ನು ಗುಮ್ಮಡಿ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ