ಎನ್​ಡಿಟಿವಿ ಷೇರುಗಳ ಸ್ವಾಧೀನ ಮಾಧ್ಯಮದ ಸ್ವಾತಂತ್ರ್ಯ ನಿಗ್ರಹಿಸುವ ಪ್ರಯತ್ನ; ಅದಾನಿ ಕುರಿತು ಕಾಂಗ್ರೆಸ್ ಟೀಕೆ

ಪ್ರಸಿದ್ಧ ಟಿವಿ ಸುದ್ದಿ ನೆಟ್‌ವರ್ಕ್ ಅನ್ನು ಪ್ರಧಾನಿಯವರ 'ಖಾಸ್ ದೋಸ್ತ್' ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಮಾಧ್ಯಮದ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಲಜ್ಜೆಗೆಟ್ಟ ಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಎನ್​ಡಿಟಿವಿ ಷೇರುಗಳ ಸ್ವಾಧೀನ ಮಾಧ್ಯಮದ ಸ್ವಾತಂತ್ರ್ಯ ನಿಗ್ರಹಿಸುವ ಪ್ರಯತ್ನ; ಅದಾನಿ ಕುರಿತು ಕಾಂಗ್ರೆಸ್ ಟೀಕೆ
ಗೌತಮ್ ಅದಾನಿ
Updated By: ಸುಷ್ಮಾ ಚಕ್ರೆ

Updated on: Aug 24, 2022 | 12:53 PM

ನವದೆಹಲಿ: ಅದಾನಿ ಸಮೂಹದ ಎಎಮ್‌ಜಿ ಮೀಡಿಯಾ ಪರೋಕ್ಷವಾಗಿ ಎನ್‌ಡಿಟಿವಿಯ ಶೇ. 26ರಷ್ಟು ಷೇರುಗಳ ಖರೀದಿ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದಶಕಗಳ ಕಾಲ ಸಂಬಂಧ ಹೊಂದಿರುವ ಗೌತಮ್ ಅದಾನಿ ಎನ್​ಡಿಟಿವಿ ಷೇರುಗಳನ್ನು ಖರೀದಿಸಲು ಮುಂದಾಗಿರುವ ಬಗ್ಗೆ ಪರೋಕ್ಷವಾಗಿಯೇ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಸಿದ್ಧ ಟಿವಿ ಸುದ್ದಿ ನೆಟ್‌ವರ್ಕ್ ಅನ್ನು ಪ್ರಧಾನಿಯವರ ‘ಖಾಸ್ ದೋಸ್ತ್’ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ಮಾಧ್ಯಮದ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಲಜ್ಜೆಗೆಟ್ಟ ಕ್ರಮವಾಗಿದೆ ಎಂದಿದ್ದಾರೆ.

ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL) ಸಂಸ್ಥೆಯ ಹೆಸರಿನಲ್ಲಿ ಈ ಖರೀದಿ ಪ್ರಕ್ರಿಯೆ ನಡೆಸಲು ಅದಾನಿ ಗ್ರೂಪ್ ಮುಂದಾಗಿದೆ. ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್ (AMNL) ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: BIG NEWS: ಎನ್‌ಡಿಟಿವಿಯ 29.2% ಪಾಲನ್ನು ಖರೀದಿಸಲಿದೆ ಅದಾನಿ ಗ್ರೂಪ್

“ಎನ್‌ಡಿಟಿವಿ ಅಥವಾ ಅದರ ಸಂಸ್ಥಾಪಕ-ಪ್ರವರ್ತಕರೊಂದಿಗೆ ಯಾವುದೇ ಚರ್ಚೆಯಿಲ್ಲದೆ, ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಅವರಿಗೆ ನೋಟಿಸ್ ನೀಡಲಾಗಿದೆ. ಅದು (ವಿಸಿಪಿಎಲ್) ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ 99.50 ಪ್ರತಿಶತ ನಿಯಂತ್ರಣವನ್ನು ಪಡೆಯಲು ತನ್ನ ಹಕ್ಕನ್ನು ಚಲಾಯಿಸಿದೆ ಎಂದು ಚಾನೆಲ್ ಹೇಳಿದೆ.

ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ “ಸ್ವತಂತ್ರ ಪತ್ರಿಕೋದ್ಯಮದ ಬಹುತೇಕ ಕೊನೆಯ ಭದ್ರಕೋಟೆಯನ್ನು ಉದ್ಯಮವು ಸ್ವಾಧೀನಪಡಿಸಿಕೊಂಡಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ