Global Recession: ಆರ್ಥಿಕ ಹಿಂಜರಿತದ ಭೀತಿ; ಬಲಾಢ್ಯ ದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನೀರಸ, ಚೀನಾದಲ್ಲಿ ಸಾಲ ಮರುಪಾವತಿ ಕುಸಿತ

World Economy: ಯೂರೊ ಕರೆನ್ಸಿ ಬಳಸುವ 19 ದೇಶಗಳಲ್ಲಿ ಇಂಧನ ಮತ್ತು ಆಹಾರದ ಬೆಲೆಗಳು ದಾಖಲೆ ಮಟ್ಟಕ್ಕೆ ಹೆಚ್ಚಾಗಿದೆ. ಹಲವು ವಲಯಗಳು ಕುಸಿತಕ್ಕೆ ಜಾರುವ ಮುನ್ಸೂಚನೆ ನೀಡಿವೆ.

Global Recession: ಆರ್ಥಿಕ ಹಿಂಜರಿತದ ಭೀತಿ; ಬಲಾಢ್ಯ ದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನೀರಸ, ಚೀನಾದಲ್ಲಿ ಸಾಲ ಮರುಪಾವತಿ ಕುಸಿತ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 24, 2022 | 9:07 AM

ಅಮೆರಿಕದಿಂದ ಯೂರೋಪ್​ ಮತ್ತು ಏಷ್ಯಾದವರೆಗೆ ವಿಶ್ವದ ಹಲವು ದೇಶಗಳು ಹಣದುಬ್ಬರದಿಂದ ನಲುಗುತ್ತಿವೆ. ಸಾಮಾನ್ಯ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದು, ವಾಣಿಜ್ಯ ಚಟುವಟಿಕೆಗಳು ನೀರಸವಾಗುತ್ತಿವೆ. ಈ ನಡುವೆ ಹಲವು ದೇಶಗಳಲ್ಲಿ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿದರ ಹೆಚ್ಚಳದತ್ತ ಗಮನ ಕೊಡುತ್ತಿದ್ದು, ಉದ್ಯಮಗಳಿಗೆ ದುಡಿಯುವ ಬಂಡವಾಳ ಹೊಂಚುವುದು ಸಮಸ್ಯೆಯಾಗುತ್ತಿದೆ. ಇಂಧನ ಕೊರತೆಯಿಂದ ಕಂಗಾಲಾಗಿರುವ ಹಲವು ಬಲಾಢ್ಯ ದೇಶಗಳು ವಿದ್ಯುತ್ ಪೂರೈಕೆಯ ಕಡಿತ ಘೋಷಿಸಿವೆ. ಸಂಘರ್ಷದಿಂದ ತತ್ತರಿಸಿರುವ ಉಕ್ರೇನ್​ನಲ್ಲಿ ಕಳೆದ ಹಂಗಾಮಿನ ಕೃಷಿ ಉತ್ಪನ್ನಗಳ ರಫ್ತು ಮತ್ತು ಪ್ರಸಕ್ತ ಸಾಲಿನ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಹಲವು ದೇಶಗಳಲ್ಲಿ ಆಹಾರ ಭದ್ರತೆಗೆ ಆತಂಕ ಎದುರಾಗಿದೆ. ಆರ್ಥಿಕ ಹಿಂಜರಿತದ ಆತಂಕ ಎದುರಿಸುತ್ತಿರುವ ಜಗತ್ತು, ರಷ್ಯಾ-ಉಕ್ರೇನ್ ಸಂಘರ್ಷ ಶೀಘ್ರ ಕೊನೆಗೊಳ್ಳಬೇಕು, ಚೀನಾ-ತೈವಾನ್ ಸಂಘರ್ಷ ಆರಂಭವಾಗಬಾರದು ಎಂದು ಎಲ್ಲ ದೇಶಗಳೂ ಬಯಸುತ್ತಿವೆ.

ಸತತ ಎರಡನೇ ತಿಂಗಳು ಅಮೆರಿಕದಲ್ಲಿ ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಂಡಿವೆ. ಮೇ 2020ರಿಂದೀಚೆಗೆ ಆಗಸ್ಟ್​ 2022ರಲ್ಲಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪ್ರತಿಷ್ಠಿತ ಸ್ಟ್ಯಾಂಡರ್ಡ್​ ಅಂಡ್ ಪೂರ್ (S&P) ಸಂಸ್ಥೆಯ ಜಾಗತಿಕ ದತ್ತಾಂಶಗಳು ಮಂಗಳವಾರ ಪ್ರಕಟಿಸಿರುವ ದತ್ತಾಂಶದಲ್ಲಿ ಈ ಅಂಶಗಳು ಪ್ರಸ್ತಾಪವಾಗಿವೆ. ಇದೇ ಹೊತ್ತಿಗೆ ಏಷ್ಯಾದಲ್ಲಿಯೂ ಚಟುವಟಿಕೆಗಳು ಕುಂಠಿತಗೊಂಡಿವೆ. ಯೂರೋಪ್​ನಲ್ಲಿಯೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಯೂರೊ ಕರೆನ್ಸಿ ಬಳಸುವ 19 ದೇಶಗಳಲ್ಲಿ ಇಂಧನ ಮತ್ತು ಆಹಾರದ ಬೆಲೆಗಳು ದಾಖಲೆ ಮಟ್ಟಕ್ಕೆ ಹೆಚ್ಚಾಗಿದೆ. ಹಲವು ವಲಯಗಳು ಕುಸಿತಕ್ಕೆ ಜಾರುವ ಮುನ್ಸೂಚನೆ ನೀಡಿವೆ. ಎಸ್​ ಅಂಡ್ ಪಿ ವರದಿಯ ಬಗ್ಗೆ ‘ಬ್ಲೂಮ್​ಬರ್ಗ್​’ ಪ್ರಕಟಿಸಿರುವ ವಿಸ್ತೃತ ವರದಿಯ ಮುಖ್ಯಾಂಶಗಳು ಹೀಗಿವೆ.

ಅಮೆರಿಕದ ಬೇಡಿಕೆ ಮತ್ತು ಪೂರೈಕೆಯ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಉತ್ಪನ್ನಗಳ ಉತ್ಪಾದನೆ ಮತ್ತು ಸೇವಾದಾತ ಕಂಪನಿಗಳು ಒದಗಿಸುವ ಸೇವೆಗಳ ಪ್ರಮಾಣವೂ ಕಡಿಮೆಯಾಗಿರುವುದು ಕಂಡುಬರುತ್ತದೆ. ಹೆಚ್ಚುತ್ತಿರುವ ಬಡ್ಡಿದರ ಮತ್ತು ಹಣದುಬ್ಬರವು ಗ್ರಾಹಕರ ಖರೀದಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಕಳೆದ 3 ತಿಂಗಳಿನಿಂದ ಹೊಸ ಆರ್ಡರ್​ಗಳ ಪ್ರಮಾಣ ಕುಸಿಯುತ್ತಲೇ ಇದೆ. ಉದ್ಯೋಗದಾತರು ನೇಮಕಾತಿಗೆ ಹಿಂಜರಿಯುತ್ತಿರುವುದರಿಂದ ನಿರುದ್ಯೋಗದ ಪ್ರಮಾಣವೂ ಹೆಚ್ಚುತ್ತಿದೆ.

ಕೊವಿಡ್ ಪಿಡುಗಿನ ನಂತರ ಯೂರೋಪ್​ನಲ್ಲಿ ಕೈಗಾರಿಕೆಗಳ ಉತ್ಪಾದನೆ ಕುಸಿದಿದೆ. ಇತ್ತೀಚೆಗೆ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಆದರೆ ಕೊವಿಡ್ ಮೊದಲಿನ ಸ್ಥಿತಿಗೆ ಮರಳಿಲ್ಲ. ವಿಶ್ವದೆಲ್ಲೆಡೆ ಕಂಡುಬರುತ್ತಿರುವ ಆರ್ಥಿಕ ಹಿಂಜರಿತದ ಆತಂಕವನ್ನು ಹೇಗೆ ಪರಿಹರಿಸಬಹುದು ಎನ್ನುವ ಬಗ್ಗೆ ಚಿಂತನೆ ನಡೆಸಲೆಂದು ವಿಶ್ವದ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್​ಗಳ ಮುಖ್ಯಸ್ಥರು ಒಂದೆಡೆ ಸೇರುತ್ತಿದ್ದಾರೆ. ಪ್ರತಿವರ್ಷ ನಡೆಯುವ ಜಾಕ್​ಸನ್ ಹೋಲ್ ಸಮಾವೇಶ ಈ ಬಾರಿ ಶುಕ್ರವಾರ (ಆಗಸ್ಟ್ 26) ನಡೆಯಲಿದ್ದು, ಅಮೆರಿಕದ ಕೇಂದ್ರೀಯ ಬ್ಯಾಂಕ್​ನ (ಫೆಡರಲ್ ರಿಸರ್ವ್​) ಅಧ್ಯಕ್ಷ ಜೆರೊಮ್ ಪೊವೆಲ್ ಮಾತನಾಡಿದ್ದಾರೆ. ಜಾಗತಿಕ ಆರ್ಥಿಕ ಮುನ್ನೋಟದ ಬಗ್ಗೆ ಈ ಸಮಾವೇಶವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ.

ಏಷ್ಯಾದಲ್ಲಿ ಜಪಾನ್​ನ ಆರ್ಥಿಕತೆ ವೇಗವಾಗಿ ಕುಸಿತದತ್ತ ಜಾರುತ್ತಿದೆ. ಜನಸಂಖ್ಯೆ ಕಡಿಮೆಯಾಗುತ್ತಿರುವುದೂ ಸೇರಿದಂತೆ ಹಲವು ರೀತಿಯ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿರುವ ಜಪಾನ್​ನಲ್ಲಿ ಹಣದುಬ್ಬರ ದೊಡ್ಡ ಸಮಸ್ಯೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಸೇವಾ ವಲಯಗಳು ಕಳೆದ 7 ತಿಂಗಳಲ್ಲಿ ಇದೇ ಮೊದಲು ಬಾರಿಗೆ ಕುಸಿತ ಕಂಡಿವೆ. ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮ ತಕ್ಕಮಟ್ಟಿಗೆ ಆಸ್ಟ್ರೇಲಿಯಾದ ಆರ್ಥಿಕತೆಗೆ ಸ್ಥಿರತೆ ತಂದುಕೊಟ್ಟಿದೆ. ಚೀನಾದಲ್ಲಿ ಅಲ್ಲಿನ ಸರ್ಕಾರದ ‘ಶೂನ್ಯ ಕೊವಿಡ್’ ನೀತಿ ಮತ್ತು ಕೊವಿಡ್​ ಹತ್ತಿಕ್ಕಲು ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳು ರಿಯಲ್​ ಎಸ್ಟೇಟ್ ವಲಯದ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಇದರ ಜೊತೆಗೆ ಅಲ್ಲಿನ ಜನರು ಮನೆ ಖರೀದಿಗಾಗಿ ಮಾಡಿರುವ ಸಾಲದ ಮೇಲಿನ ಕಂತು ಪಾವತಿಸಲು ಸಾಮೂಹಿಕವಾಗಿ ನಿರಾಕರಿಸುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶ್ವ ಆರ್ಥಿಕತೆಯ ಬಗ್ಗೆ ಸ್ಟ್ಯಾಂಡರ್ಡ್​ ಅಂಡ್ ಪೂರ್ ಪ್ರಕಟಿಸಿರುವ ಈ ಸಂಶೋಧನಾ ವರದಿಯಲ್ಲಿರುವ ದತ್ತಾಂಶಗಳು ಜಾಗತಿಕ ಆರ್ಥಿಕತೆಯ ಬಗ್ಗೆ ಆತಂಕಕಾರಿ ಚಿತ್ರಣವನ್ನೇ ನೀಡಿವೆ. ಭಾರತವೂ ಸೇರಿದಂತೆ ವಿಶ್ವದ ಬಹುತೇಕ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿದರ ಹೆಚ್ಚಳದ ಮೂಲಕ ಹಣದುಬ್ಬರ ನಿಯಂತ್ರಿಸಲು ಮುಂದಾಗಿರುವುದರಿಂದ ಖರೀದಿ ಗ್ರಾಹಕರ ಖರೀದಿ ಸಾಮರ್ಥ್ಯ ಕುಂಠಿತಗೊಂಡು ಆರ್ಥಿಕತೆ ಮತ್ತಷ್ಟು ನಿಸ್ತೇಜಗೊಳ್ಳಬಹುದು. ಬೆಲೆಯೇರಿಕೆಯ ಲಾಭವು ಉದ್ಯಮಗಳಿಗೆ ಸಿಗುವುದೂ ಅನುಮಾನ ಎಂದು ಪೆಸಿಫಿಕ್ ಇನ್​ವೆಸ್ಟ್​ಮೆಂಟ್​ ಮ್ಯಾನೇಜ್​ಮೆಂಟ್ ಕಂಪನಿ ಹೇಳಿದೆ.

ಯೂರೋಪ್ ವಲಯದಲ್ಲಿ ಜರ್ಮನಿಯ ಆರ್ಥಿಕತೆಯ ತೀವ್ರವಾಗಿ ಕುಸಿಯುತ್ತಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ವಿರೋಧಿಸಿ ಅಲ್ಲಿಂದ ಬರುತ್ತಿದ್ದ ತೈಲೋತ್ಪನ್ನಗಳನ್ನು ಜರ್ಮನಿ ನಿಷೇಧಿಸಿತು. ಇದು ಅಲ್ಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಜೂನ್ 2020ರಿಂದೀಚೆಗಿನ ಅಂಕಿಅಂಶಗಳನ್ನು ವಿಶ್ಲೇಷಿಸಿದರೆ ಜರ್ಮನಿಯಲ್ಲಿ ದಾಖಲಾಗಿರುವ ಇದು ಅತ್ಯಂತ ದೊಡ್ಡ ಕುಸಿತವಾಗಿದೆ. ಫ್ರಾನ್ಸ್​ನಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಚಟುವಟಿಕೆ ಕುಸಿತ ದಾಖಲಿಸಿದೆ.

Published On - 9:06 am, Wed, 24 August 22