ಅಶ್ಲೀಲ ಸಂಭಾಷಣೆ, ಹದ್ದು ಮೀರಿದ ಗ್ಲಾಮರ್ ಆದರೂ ‘ಯು/ಎ’
Housefull 5: ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್ ನಟನೆಯ ‘ಹೌಸ್ಫುಲ್ 5’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಮಂದಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿನಿಮಾನಲ್ಲಿ ಸಾಕಷ್ಟು ಅಶ್ಲೀಲತೆ, ಅನವಶ್ಯಕ ಗ್ಲಾಮರ್ ಎಲ್ಲವೂ ಇದೆ. ಹಾಗಿದ್ದರೂ ಸಹ ಸಿನಿಮಾಕ್ಕೆ 'ಯು/ಎ' ಪ್ರಮಾಣ ಪತ್ರ ನೀಡಲಾಗಿದೆ.

ಸಿನಿಮಾಗಳು ಸಾರ್ವಜನಿಕ ವೀಕ್ಷಣೆ ಕಂಟೆಂಟ್, ಯೂಟ್ಯೂಬ್ ಅಥವಾ ವೆಬ್ಸೈಟ್ಗಳ ರೀತಿ ಖಾಸಗಿ ವೀಕ್ಷಣೆಗಾಗಿ ನಿರ್ಮಾಣವಾಗಿಲ್ಲ. ಹಾಗಾಗಿ ಸಿನಿಮಾಗಳಿಗೆ ಪ್ರಮಾಣ ಪತ್ರ ಅಥವಾ ರೇಟಿಂಗ್ ನೀಡಲಾಗುತ್ತದೆ. ಯಾವ ವಯೋಮಾನದವರು ಯಾವ ರೀತಿಯ ಸಿನಿಮಾಗಳನ್ನು ನೋಡಬಹುದು, ಯಾವ ರೀತಿಯ ಸಿನಿಮಾಗಳನ್ನು ನೋಡಬಾರದು ಎಂದು ನಿಯಮಗಳನ್ನು ರೂಪಿಸಿ ಅದಕ್ಕೆ ಅನುಸಾರವಾಗಿ ‘ಯು’, ‘ಎ’, ‘ಯು/ಎ’ ಇನ್ನೂ ಕೆಲವು ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಆದರೆ ಕೆಲವು ನಿರ್ಮಾಪಕರು, ನಟರು ತಮ್ಮ ಪ್ರಭಾವ ಬಳಸಿ ಈ ರೇಟಿಂಗ್ಗಳನ್ನು ಬದಲಾಯಿಸಿರುವ ಉದಾಹರಣೆ ಸಾಕಷ್ಟಿದೆ. ಇದೀಗ ಹೊಸ ಸಿನಿಮಾ ಒಂದರ ಮೇಲೆ ಇದೇ ಆರೋಪ ಬಂದಿದೆ.
ಕಳೆದ ವಾರವಷ್ಟೆ (ಜೂನ್ 06) ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಅಭಿಷೇಕ್ ಬಚ್ಚನ್ ಇನ್ನೂ ಹಲವಾರು ಸ್ಟಾರ್ ನಟ, ನಟಿಯರು ನಟಿಸಿರುವ ‘ಹೌಸ್ಫುಲ್ 5’ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಅಂದರೆ 18 ವರ್ಷದ ಒಳಗಿರುವವರು ತಮ್ಮ ಪೋಷಕರ ನಿಗಾವಣೆಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಹೆಚ್ಚು ಅಶ್ಲೀಲತೆ ಇಲ್ಲದ ಸಿನಿಮಾಗಳಿಗೆ, ಅತಿಯಾದ ಹಿಂಸೆ ಇಲ್ಲದ ಸಿನಿಮಾಗಳಿಗೆ ಈ ಪ್ರಮಾಣ ಪತ್ರ ನೀಡಲಾಗುತ್ತದೆ. ಆದರೆ ‘ಹೌಸ್ಫುಲ್ 5’ ಸಿನಿಮಾ ನೋಡಿದವರು ಈ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
‘ಹೌಸ್ಫುಲ್ 5’ ಸಿನಿಮಾನಲ್ಲಿ ವಿಪರೀತ ಡಬಲ್ ಮೀನಿಂಗ್ ಡೈಲಾಗ್ಗಳು, ಲೈಂಗಿಕತೆಗೆ ಸಂಬಂಧಿಸಿದ ಸಂಭಾಷಣೆಗಳು, ಅತಿಯಾದ ಗ್ಲಾಮರ್, ಬಿಕಿನಿ ಡ್ಯಾನ್ಸ್ ಎಲ್ಲವೂ ಇದೆಯಂತೆ. ಆದರೂ ಸಹ ಈ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ. ಈ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಬೇಕಿತ್ತು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾದ ಟ್ರೈಲರ್ನಲ್ಲಿಯೂ ಸಹ ಡಬಲ್ ಮೀನಿಂಗ್ ಡೈಲಾಗ್, ಗ್ಲಾಮರ್ನ ಝಲಕ್ ಅನ್ನು ತೋರಿಸಲಾಗಿದೆ.
ಇದನ್ನೂ ಓದಿ:ನೆಗೆಟಿವ್ ವಿಮರ್ಶೆಗಳ ನಡುವೆಯೂ 100 ಕೋಟಿ ದಾಟಿದ ಅಕ್ಷಯ್ ಕುಮಾರ್ ಸಿನಿಮಾ
‘ಹೌಸ್ಫುಲ್ 5’ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಲ್ಲಿ ನಿರ್ಮಾಪಕ ಅಥವಾ ನಟರ ಪ್ರಭಾವ ಬಳಕೆ ಆಗಿರಬಹುದು ಎಂದು ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಯರು ಅಥವಾ ಸಹ ಡ್ಯಾನ್ಸರ್ಗಳು ಬಿಕಿನಿ ಧರಿಸಿದರೆ ಸಹ ‘ಯು/ಎ’ ಕೆಲವೊಮ್ಮೆ ‘ಎ’ ಪ್ರಮಾಣ ಕೊಟ್ಟ ಉದಾಹರಣೆಯೂ ಇದೆ. ಆದರೆ ಇಷ್ಟೆಲ್ಲ ಅಶ್ಲೀಲತೆ, ಡಬಲ್ ಮೀನಿಂಗ್ ಡೈಲಾಗ್ಗಳ ಹೊರತಾಗಿಯೂ ಸಿನಿಮಾಕ್ಕೆ ಕೇವಲ ‘ಯು/ಎ’ ಕೊಟ್ಟಿರುವುದು ಆಶ್ಚರ್ಯವೇ ಸರಿ.
ಏನೇ ಆಗಲಿ, ‘ಹೌಸ್ಫುಲ್ 5’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆದ ಕೇವಲ ನಾಲ್ಕು ದಿನಕ್ಕೆ 140 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಸಿನಿಮಾಕ್ಕೆ ಅಕ್ಷಯ್ ಕುಮಾರ್ ಅವರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ತೊಡಗಿಸಿದ್ದಾರೆ. ಕತೆ, ಚಿತ್ರಕತೆಯೂ ಅವರದ್ದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ