ನೆಗೆಟಿವ್ ವಿಮರ್ಶೆಗಳ ನಡುವೆಯೂ 100 ಕೋಟಿ ದಾಟಿದ ಅಕ್ಷಯ್ ಕುಮಾರ್ ಸಿನಿಮಾ
Housefull 5: ಒಳ್ಳೆಯ ಸಿನಿಮಾ ವಿಮರ್ಶೆಗಳು ಬಂದ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಸೋಲು ಕಾಣುತ್ತವೆ. ಆದರೆ ಇಲ್ಲೊಂದು ಸಿನಿಮಾಕ್ಕೆ ಕೇವಲ ನೆಗಟಿವ್ ವಿಮರ್ಶೆಗಳು ಬಂದರೂ ಸಹ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ. ಬಿಡುಗಡೆ ಆದ ಕೇವಲ ನಾಲ್ಕೇ ದಿನದಲ್ಲಿ 100 ಕೋಟಿ ಕಲೆಕ್ಷನ್ ಅನ್ನು ದಾಟಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಯಾವುದು ಆ ಸಿನಿಮಾ? ಇಲ್ಲಿದೆ ಮಾಹಿತಿ...

ಕಳೆದ ಕೆಲ ವರ್ಷಗಳಿಂದ ಸಂದೇಶ ಹೊಂದಿದ, ದೇಶಪ್ರೇಮ ಬಡಿದೆಬ್ಬಿಸುವ ಸಿನಿಮಾಗಳನ್ನು ಮಾಡುತ್ತಲೇ ಬರುತ್ತಿದ್ದ ಅಕ್ಷಯ್ ಕುಮಾರ್ (Akshay Kumar) ದೊಡ್ಡ ಯಶಸ್ಸು ಕಂಡಿರಲಿಲ್ಲ. ಕೆಲವು ಸಿನಿಮಾಗಳಂತೂ ಬಾಕ್ಸ್ ಆಫೀಸ್ನಲ್ಲಿ ಅಟ್ಟರ್ ಫ್ಲಾಪ್ ಆಗಿದ್ದವು. ಆದರೆ ಇದೀಗ ಅಕ್ಷಯ್ ಕಾಮಿಡಿ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನೆಗೆಟಿವ್ ವಿಮರ್ಶೆಗಳು ಬಂದ ಹೊರತಾಗಿಯೂ ಸಿನಿಮಾ ನಾಲ್ಕೇ ದಿನಗಳಲ್ಲಿ 100 ಕೋಟಿಗೂ ಹೆಚ್ಚು ಹಣ ಗಳಿಸಿಕೊಂಡಿದೆ.
ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್, ಸಂಜಯ್ ದತ್, ಟೈಗರ್ ಶ್ರಾಫ್, ಜಾಕ್ವೆಲಿನ್ ಫರ್ನಾಂಡೀಸ್, ನಾನಾ ಪಾಟೇಕರ್, ಡಿನೊ ಮರಿಯೋ ಇನ್ನೂ ಹಲವಾರು ಮಂದಿ ಸ್ಟಾರ್ ನಟ-ನಟಿಯರು ಒಟ್ಟಿಗೆ ನಟಿಸಿರುವ ‘ಹೌಸ್ಫುಲ್ 5’ ಸಿನಿಮಾ ಜೂನ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ‘ಹೌಸ್ಫುಲ್’ ಹಾಸ್ಯ ಸಿನಿಮಾ ಸರಣಿಯ ಐದನೇ ಸಿನಿಮಾ ಇದು. ಸಿನಿಮಾಕ್ಕೆ ಅಕ್ಷಯ್ ಕುಮಾರ್ ಅವರೇ ಬಂಡವಾಳ ಸಹ ತೊಡಗಿಸಿದ್ದರು.
ಸಿನಿಮಾ ಬಿಡುಗಡೆ ಆದ ದಿನ ಬಹುತೇಕ ಮಾಧ್ಯಮಗಳು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಬರೆದಿದ್ದವು. ಸಿನಿಮಾದ ಮೈಂಡ್ಲೆಸ್ ಕಾಮಿಡಿ, ಅಶ್ಲೀಲ ಸಂಭಾಷಣೆ, ಅರ್ಥವೇ ಇಲ್ಲದ ಸನ್ನಿವೇಶಗಳು, ಲಾಜಿಕ್ ಇರದ ದೃಶ್ಯಗಳ ಬಗ್ಗೆ ಆಡಿಕೊಂಡಿದ್ದವು. ಆದರೆ ಸಿನಿಮಾ ಹೇಗೆಯೇ ಇರಲಿ ಪ್ರೇಕ್ಷಕನನ್ನು ನಗಿಸಲು ಯಶಸ್ವಿಯಾಗಿದೆ. ಇದೇ ಕಾರಣಕ್ಕೆ ಸಿನಿಮಾ ಕೇವಲ ನಾಲ್ಕು ದಿನದಲ್ಲಿ 100 ಕೋಟಿ ಕಲೆಕ್ಷನ್ ದಾಟಿದೆ.
ಇದನ್ನೂ ಓದಿ:ಒಂದೇ ವರ್ಷ, ಮೂರು ಖ್ಯಾತ ನಿರ್ದೇಶಕರು ಮತ್ತು ನಾಲ್ಕು ಡಿಸಾಸ್ಟರ್ ಸಿನಿಮಾಗಳು
ಸಿನಿಮಾ ಕೇವಲ ನಾಲ್ಕು ದಿನಕ್ಕೆ 140 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಆದರೆ ಸಿನಿಮಾಕ್ಕೆ ಹಾಕಲಾಗಿರುವ ಬಜೆಟ್ ಮರಳಿ ಬರಬೇಕೆಂದರೆ ಇದರ ದುಪ್ಪಟ್ಟು ಹಣ ಗಳಿಕೆ ಆಗಬೇಕಿದೆ. ಸಿನಿಮಾದ ನಿರ್ಮಾಪರಾದ ಸಾಜಿದ್ ನಾಡಿಯಾವಾಲ ಮತ್ತು ಅಕ್ಷಯ್ ಕುಮಾರ್ ಅವರುಗಳು ಈ ಸಿನಿಮಾಕ್ಕೆ 225 ಕೋಟಿ ಬಜೆಟ್ ಹಾಕಿದ್ದಾರಂತೆ. ಸಿನಿಮಾದಲ್ಲಿ ಹಲವಾರು ಮಂದಿ ಸ್ಟಾರ್ಗಳಿದ್ದು, ಎಲ್ಲರಿಗೂ ಭರ್ಜರಿ ಸಂಭಾವನೆ, ಅದ್ಧೂರಿ ಚಿತ್ರೀಕರಣವನ್ನು ಮಾಡಲಾಗಿದೆ.
ಒಂದು ದೊಡ್ಡ ಕ್ರೂಸ್ ಶಿಪ್ನಲ್ಲಿ ನಡೆಯುವ ಪಾರ್ಟಿ, ಆ ಕ್ರೂಸ್ ಶಿಫ್ನಲ್ಲಿ ನಡೆಯುವ ಭಾರಿ ಶ್ರೀಮಂತನ ಕೊಲೆ ಹಾಗೂ ಆ ಕೊಲೆ ಮಾಡಿದ ವ್ಯಕ್ತಿಗಾಗಿ ಹುಡುಕಾಟ ಇದು ‘ಹೌಸ್ಫುಲ್ 5’ ಸಿನಿಮಾದ ಕತೆ. ವಿಶೇಷವೆಂದರೆ ಈ ಸಿನಿಮಾಕ್ಕೆ ಎರಡು ಕ್ಲೈಮ್ಯಾಕ್ಸ್ ನೀಡಲಾಗಿದೆ. ಪ್ರೇಕ್ಷಕರು ಯಾವ ಕ್ಲೈಮ್ಯಾಕ್ಸ್ ಅನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ