ಭಾರತದಲ್ಲಿ ಕೋವಿಡ್- 19 ಚುಚ್ಚುಮದ್ದಿಗೆ ಸಂಬಂಧಿಸಿದಂತೆ ವಿದೇಶಿ ಲಸಿಕೆ ಉತ್ಪಾದಕರಾದ ಫೈಜರ್, ಮಾಡೆರ್ನಾಗೆ ಭದ್ರತೆ ಒದಗಿಸಬೇಕು ಎಂದು ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕೂಡ ಈ ಜವಾಬ್ದಾರಿಯಿಂದ ರಕ್ಷಣೆ ಕೇಳಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ. “ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಮಾತ್ರವಲ್ಲ, ವಿದೇಶೀ ಕಂಪೆನಿಗಳಿಗೆ ನೀಡುವಂತೆ ಎಲ್ಲ ಲಸಿಕೆ ಕಂಪೆನಿಗಳಿಗೆ ಭದ್ರತೆಯ ಸುರಕ್ಷತೆ ಸಿಗಬೇಕು,” ಮೂಲಗಳು ತಿಳಿಸಿವೆ. ಕಳೆದ ವರ್ಷದ ಆರಂಭದಲ್ಲಿ SII ಸಿಇಒ ಆದಾರ್ ಪೂನಾವಾಲಾ ಅವರು ಎಲ್ಲ ಲಸಿಕೆ ಉತ್ಪಾದಕರಿಗೆ ಭದ್ರತೆ ಒದಗಿಸಬೇಕು ಎಂದು ಅವುಗಳೆಲ್ಲದರ ಪರವಾಗಿ ಮಾತನಾಡಿದ್ದರು. ಉತ್ಪಾದಕರಾಗಿ ನಮಗೆ ಸರ್ಕಾರದ ಭದ್ರತೆ ಬೇಕು, ಅದರಲ್ಲೂ ಎಲ್ಲ ಉತ್ಪಾದಕರಿಗೆ ಎಲ್ಲ ಕಾನೂನು ವ್ಯಾಜ್ಯಗಳ ವಿರುದ್ಧ ಸುರಕ್ಷತೆ ಇರಬೇಕು. ಗಂಭೀರವಲ್ಲದ ವಾದಗಳು ಬರುತ್ತಲೇ ಇರುತ್ತವೆ ಮತ್ತು ಮಾಧ್ಯಮಗಳಲ್ಲಿ ಅಳತೆಗೆ ಮೀರಿ ಬರುತ್ತದೆ. ಸರಿಯಾದ ಸಂದೇಶದೊಂದಿಗೆ ಸರ್ಕಾರವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪೂನಾವಾಲಾ ಹೇಳಿದ್ದರು.
ದೇಶದಾದ್ಯಂತ ಕೋವಿಡ್- 19 ಲಸಿಕೆಗೆ ಕೊರತೆ ಇದೆ. ಒಂದು ವೇಳೆ ಏನಾದರೂ ಅಡ್ಡಪರಿಣಾಮಗಳು ಉಂಟಾದಲ್ಲಿ ಅದರಿಂದ ಇಂಡೆಮ್ನಿಟಿ ಬಾಂಡ್ ದೊರಕಿಸಿಕೊಡಬೇಕು ಎಂದು ಅಮೆರಿಕದ ದೈತ್ಯ ಫಾರ್ಮಾ ಕಂಪೆನಿ ಫೈಜರ್ ಕೇಳಿದೆ. ಹೀಗೆ ಮಾಡುವುದರಿಂದ ಒಂದು ವೇಳೆ ಲಸಿಕೆಯಿಂದ ಅಡ್ಡ ಪರಿಣಾಮ ಎದುರಾದರೂ ಆ ಕಂಪೆನಿಗೆ ಕಾನೂನು ಬಾಧ್ಯತೆಗಳಿಂದ ಭದ್ರತೆ- ಸುರಕ್ಷತೆಯನ್ನು ಒದಗಿಸುತ್ತದೆ. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಮಾತನಾಡಿ, ಸರ್ಕಾರವು ಅಮೆರಿಕ ಫಾರ್ಮಾ ಕಂಪೆನಿಯ ಮನವಿಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ತೀವಿ ಎಂದಿದ್ದಾರೆ.
ಭಾರತದ ಲಸಿಕೆ ಇತಿಹಾಸದಲ್ಲೇ ಯಾವಾಗಲೂ ಇಂಡೆಮ್ನಿಟಿ (ಸುರಕ್ಷತೆ) ನೀಡಿಲ್ಲ ಮತ್ತು ಸರ್ಕಾರವೇ ಲಸಿಕೆಯ ಅತಿ ದೊಡ್ಡ ಬಳಕೆದಾರ, ಅದು ಕೂಡ ಹಾಗೆ ಮಾಡಿಲ್ಲ ಎಂದು ಐಸಿಎಂಆರ್ ಮಾಜಿ ಅಧ್ಯಕ್ಷ ಡಾ ಕೆ. ನಿರ್ಮಲ್ ಗಂಗೂಲಿ ಹೇಳಿದ್ದಾರೆ. ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತಿಳಿಸಿರುವ ಪ್ರಕಾರ, ಇತರ ಅಂತರರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳು ಮಂಜೂರು ಮಾಡಿರುವ ಕೋವಿಡ್- 19 ಲಸಿಕೆಗಳಿಗೆ ನಿರ್ದಿಷ್ಟ ಪರೀಕ್ಷೆಗಳಿಂದ ವಿನಾಯಿತಿ ನೀಡಿತ್ತು. ಇಂಥದ್ದು ವಿದೇಶಿ ಕೋವಿಡ್- 19 ಲಸಿಕೆಗಳಾದ ಫೈಜರ್ ಮತ್ತು ಮಾಡೆರ್ನಾಗೆ ಹಾದಿ ಸುಲಭ ಮಾಡುತ್ತದೆ.
ಡಿಸಿಜಿಐ ಮುಖ್ಯಸ್ಥ ವಿ.ಜಿ.ಸೋಮಾನಿ ತಿಳಿಸಿರುವಂತೆ, ಈ ನಿರ್ಧಾರವು ಯುಎಸ್ಎಫ್ಡಿಎ, ಇಎಂಎ, ಯುಕೆಎಂಎಚ್ಆರ್ಎ, ಪಿಎಂಡಿಎ ಜಪಾನ್ ಅಥವಾ ವಿಶ್ವ ಆರೊಗ್ಯ ಸಂಸ್ಥೆಯಿಂದ ತುರ್ತು ಬಳಕೆಗಾಗಿ ಅನುಮೋದನೆಗೊಂಡ ಯಾವುದೇ ಲಸಿಕೆಗೆ ಅನ್ವಯ ಆಗುತ್ತದೆ. ಫೈಜರ್ ಹೇಳಿಕೆ ನೀಡಿ, ಭಾರತದ ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಸರ್ಕಾರದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಬಳಸುವುದಕ್ಕೆ ಕೊರೊನಾ ಲಸಿಕೆ ದೊರೆಯುವಂತೆ ಮಾಡುವ ಕಡೆಗೆ ನಮ್ಮ ಪ್ರಯತ್ನ ನಡೆದಿದೆ ಎಂದು ಹೇಳಿದೆ.
ಇದನ್ನೂ ಓದಿ: ವಿದೇಶಿ ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್ಗಳಿಂದ ರಕ್ಷಣೆಗೆ ಒಪ್ಪಿಗೆ; ಜುಲೈ ವೇಳೆಗೆ ಭಾರತಕ್ಕೆ ಫೈಜರ್ ಲಸಿಕೆ ಸಾಧ್ಯತೆ
(After Moderna and Pfizer now corona vaccine manufacturer company Serum Institute Of India (SII) seeking protection in India)
Published On - 8:52 pm, Thu, 3 June 21