ವಿದೇಶಿ ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್​ಗಳಿಂದ ರಕ್ಷಣೆಗೆ ಒಪ್ಪಿಗೆ; ಜುಲೈ ವೇಳೆಗೆ ಭಾರತಕ್ಕೆ ಫೈಜರ್ ಲಸಿಕೆ ಸಾಧ್ಯತೆ

ವಿದೇಶಿ ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್​ಗಳಿಂದ ರಕ್ಷಣೆಗೆ ಒಪ್ಪಿಗೆ; ಜುಲೈ ವೇಳೆಗೆ ಭಾರತಕ್ಕೆ ಫೈಜರ್ ಲಸಿಕೆ ಸಾಧ್ಯತೆ
ಫೈಜರ್ ಸಂಸ್ಥೆಯ ಲಸಿಕೆ

ಎಲ್ಲವೂ ಅಂದುಕೊಂಡಂತೆ ನಡೆದರೇ, ಆಗಸ್ಟ್ ತಿಂಗಳಿನಿಂದ ಭಾರತಗಲ್ಲಿ ಕೊರೊನಾ ಲಸಿಕೆಯ ಕೊರತೆಯ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಮೆರಿಕಾದ ಫೈಜರ್, ಮಾಡೆರ್ನಾ ಕಂಪನಿಯ ಲಸಿಕೆಗಳು ಭಾರತಕ್ಕೆ ಎಂಟ್ರಿ ಕೊಡಲು ಇದ್ದ ಸಮಸ್ಯೆ ಪರಿಹಾರಕ್ಕೆ ಈಗ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

S Chandramohan

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 02, 2021 | 3:48 PM

ಆಮೆರಿಕಾದ ಫೈಜರ್ ಮತ್ತು ಮಾಡೆರ್ನಾ ಕಂಪನಿಗಳ ಲಸಿಕೆಯು ಭಾರತಕ್ಕೆ ಬರಲು ಈ ಕಂಪನಿಗಳ ಕೆಲವೊಂದು ಬೇಡಿಕೆ ಅಡ್ಡಿಯಾಗಿತ್ತು. ಈ ಕಂಪನಿಗಳು ತಮ್ಮ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಹಣಕಾಸಿನ ಪರಿಹಾರ ಕೋರಿ ಕೋರ್ಟ್ ಕೇಸ್ ದಾಖಲಿಸುವುದರ ವಿರುದ್ಧ ರಕ್ಷಣೆ ನೀಡಬೇಕೆಂದು ಕೇಳಿದ್ದವು. ಈ ಕಂಪನಿಗಳ ಈ ಬೇಡಿಕೆ, ಷರತ್ತಿಗೆ ಇದುವರೆಗೂ ಭಾರತ ಸರ್ಕಾರ ಒಪ್ಪಿರಲಿಲ್ಲ. ಆದರೆ, ಈಗ ಭಾರತ ಸರ್ಕಾರ ಆಮೆರಿಕದ ಫೈಜರ್, ಮಾಡೆರ್ನಾ ಕಂಪನಿಗಳಿಗೆ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧದ ಕೋರ್ಟ್ ಕೇಸ್​ನಿಂದ ರಕ್ಷಣೆ ನೀಡಲು ಸಿದ್ದವಾಗಿದೆ. ಕೋರ್ಟ್ ಕೇಸ್​ನಿಂದ ರಕ್ಷಣೆ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದು ಈಗ ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ. ವಿದೇಶಿ ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್​ನಿಂದ ಕಾನೂನು ರಕ್ಷಣೆ ಸಿಕ್ಕರೆ, ಭಾರತಕ್ಕೆ ತಮ್ಮ ಕಂಪನಿಯ ಲಸಿಕೆ ಪೂರೈಸಲು ಕಂಪನಿಗಳು ಸಿದ್ದವಾಗಿವೆ. ಕೋರ್ಟ್ ಕೇಸ್​ನಿಂದ ರಕ್ಷಣೆ ಸಿಕ್ಕರೆ, 2021ರ ಜುಲೈ ತಿಂಗಳಲ್ಲೇ 1 ಕೋಟಿ ಡೋಸ್ ಲಸಿಕೆಯನ್ನು ಭಾರತಕ್ಕೆ ಪೂರೈಸಲು ಸಿದ್ದ ಎಂದು ಫೈಜರ್ ಕಂಪನಿ ಹೇಳಿದೆ. ಜುಲೈ ನಿಂದ ಆಕ್ಟೋಬರ್ ತಿಂಗಳೊಳಗೆ 5 ಕೋಟಿ ಡೋಸ್ ಲಸಿಕೆ ಪೂರೈಸಲು ಫೈಜರ್ ಕಂಪನಿ ಸಿದ್ದವಾಗಿದೆ.

ಕೇಂದ್ರ ಸರ್ಕಾರವು ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್​ನಿಂದ ರಕ್ಷಣೆ ನೀಡಲು ಬೇರೆ ದೇಶಗಳಲ್ಲಿ ಯಾವ ನಿಯಮ ಅನುಸರಿಸಲಾಗಿದೆ ಎಂದು ಅಧ್ಯಯನ ಮಾಡಿ, ಅದರ ಪ್ರಕಾರವೇ ಮುಂದುವರಿದಿದೆ. ನಾವೇಕೆ ವಿದೇಶಿ ಲಸಿಕಾ ತಯಾರಕ ಕಂಪನಿಗಳನ್ನು ತಡೆಯಬೇಕು. ಕೋರ್ಟ್ ಕೇಸ್​ನಿಂದ ಕಾನೂನು ರಕ್ಷಣೆ ನೀಡುವುದೇ ಅಡ್ಡಿಯಾಗುವುದಾದರೆ, ನಾವು ಅಂತಾರಾಷ್ಟ್ರೀಯ ಮಟ್ಟದ ನಿಯಮಗಳನ್ನು ಅಧ್ಯಯನ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಜುಲೈ ವೇಳೆಗೆ ಭಾರತಕ್ಕೆ ಫೈಜರ್ ಲಸಿಕೆ ಎಂಟ್ರಿ ಮುಖ್ಯವಾಗಿ ಎಲ್ಲವೂ ಅಂದುಕೊಂಡಂತೆ ನಡೆದರೇ, ಜುಲೈ ತಿಂಗಳಿಗೆ ಭಾರತಕ್ಕೆ ಆಮೆರಿಕಾದ ಫೈಜರ್ ಕಂಪನಿಯ ಲಸಿಕೆಯ ಎಂಟ್ರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಹೀಗಾಗಿ ಜುಲೈ ವೇಳೆಗೆ ನಾಲ್ಕನೇ ಕೊರೊನಾ ಲಸಿಕೆಯಾಗಿ ಫೈಜರ್ ಲಸಿಕೆಯು ಭಾರತಕ್ಕೆ ಎಂಟ್ರಿ ಕೊಡಲಿದೆ. ಫೈಜರ್ ಕಂಪನಿಯು ಈಗಾಗಲೇ 43 ಕೋಟಿ ಡೋಸ್ ಲಸಿಕೆಯನ್ನು ವಿಶ್ವದ ವಿವಿಧ ದೇಶಗಳಿಗೆ ರಫ್ತು ಮಾಡಿದೆ. 2021ರಲ್ಲೇ ಕಂಪನಿಯು 250 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.

ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ. ಹೀಗಾಗಿ ಭಾರತಕ್ಕೂ ಲಸಿಕೆ ಪೂರೈಸಲು ಫೈಜರ್ ಕಂಪನಿಯು ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ರಾಜ್ಯ ಸರ್ಕಾರಗಳಿಗೆ ನಾವು ಲಸಿಕೆ ಪೂರೈಸುವುದಿಲ್ಲ. ನೇರವಾಗಿ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಕೊರೊನಾ ಲಸಿಕೆಯನ್ನು ಪೂರೈಸುತ್ತೇವೆ ಎಂದು ಕೂಡ ಫೈಜರ್ ಕಂಪನಿ ಹೇಳುತ್ತಿದೆ. ಕೇಂದ್ರ ಹಾಗೂ ಫೈಜರ್ ಕಂಪನಿ ನಡುವಿನ ಮಾತುಕತೆಗಳು ಈಗ ಅಂತಿಮವಾಗಿ ಯಶಸ್ವಿಯಾಗುವ ಹಂತಕ್ಕೆ ಬಂದಿವೆ. ಇದರ ಪರಿಣಾಮವಾಗಿಯೇ ಈಗ ಕೇಂದ್ರ ಸರ್ಕಾರವು ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಕೋರ್ಟ್ ಕೇಸ್ ದಾಖಲಿಸುವುದರ ವಿರುದ್ಧ ಕಾನೂನು ರಕ್ಷಣೆ ನೀಡಲು ಸಿದ್ದ ಎನ್ನುತ್ತಿದೆ.

ಫೈಜರ್ ಕಂಪನಿಯ ಲಸಿಕೆಗೆ ಈಗಾಗಲೇ ಆಮೆರಿಕ, ಇಂಗ್ಲೆಂಡ್​ನಲ್ಲಿ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಆಮೆರಿಕ, ಇಂಗ್ಲೆಂಡ್​ನಲ್ಲಿ ಕೋಟ್ಯಂತರ ಜನರಿಗೆ ಫೈಜರ್ ಕಂಪನಿಯ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಇದುವರೆಗೂ ಯಾವುದೇ ಲಸಿಕಾ ಕಂಪನಿಗೂ ಸೈಡ್ ಎಫೆಕ್ಟ್ ವಿರುದ್ಧ ಹಣಕಾಸಿನ ಪರಿಹಾರ ಕೋರಿ ಕೋರ್ಟ್ ಕೇಸ್ ದಾಖಲಿಸುವುದರ ವಿರುದ್ಧ ಕಾನೂನು ರಕ್ಷಣೆ ನೀಡಿಲ್ಲ. ಭಾರತದಲ್ಲಿ ಈಗಾಗಲೇ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಹಾಗೂ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಎಸ್‌ಐಐ ಹಾಗೂ ಭಾರತ್ ಬಯೋಟೆಕ್ ಕಂಪನಿಗಳು ಕೂಡ ತಮ್ಮ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಹಣಕಾಸಿನ ಪರಿಹಾರ ಕೋರಿ ಕೋರ್ಟ್ ಕೇಸ್ ದಾಖಲಿಸುವುದರ ವಿರುದ್ಧ ಕಾನೂನು ರಕ್ಷಣೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.

ಆಗ ಕೇಂದ್ರ ಸರ್ಕಾರ ಈ ಎರಡು ಕಂಪನಿಗಳ ಮನವಿಗೆ ಒಪ್ಪಿರಲಿಲ್ಲ. ಈಗ ವಿದೇಶಿ ಕಂಪನಿಗಳ ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧ ಕೋರ್ಟ್ ಕೇಸ್ ದಾಖಲಿಸುವುದರ ವಿರುದ್ಧ ಕಾನೂನು ರಕ್ಷಣೆ ನೀಡಿದಂತೆ ನಮಗೂ ಕೋರ್ಟ್ ಕೇಸ್​ನಿಂದ ರಕ್ಷಣೆ ಕೊಡಿ ಎಂದು ಎಸ್‌ಐಐ , ಭಾರತ್ ಬಯೋಟೆಕ್ ಕೇಳಬಹುದು. ಹೀಗಾಗಿ ಈ ಎರಡು ಕಂಪನಿಗಳಿಗೂ ಕೇಂದ್ರ ಸರ್ಕಾರವು ಕೋರ್ಟ್ ಕೇಸ್ ವಿರುದ್ಧ ಕಾನೂನು ರಕ್ಷಣೆಯನ್ನು ನೀಡಬೇಕಾಗುತ್ತೆ. ವಿದೇಶಿ ಕಂಪನಿಗಳಿಗೆ ಕೊಟ್ಟ ರಕ್ಷಣೆಯನ್ನು ಸ್ವದೇಶಿ ಕಂಪನಿಗಳಿಗೆ ನಿರಾಕರಿಸಲು ಆಗುವುದಿಲ್ಲ.

ಡಿಸಿಜಿಐನಿಂದ ಇನ್ನೂ ಕೆಲ ಬೇಡಿಕೆ ಈಡೇರಿಕೆ ವಿದೇಶಿ ಲಸಿಕಾ ಕಂಪನಿಗಳು ಭಾರತ ಸರ್ಕಾರದ ಮುಂದೆ ಇನ್ನೂ ಕೆಲ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆಗಳನ್ನು ಈಡೇರಿಸಲು ಡಿಸಿಜಿಐ ಆದೇಶ ಹೊರಡಿಸಿದೆ. ವಿದೇಶದಲ್ಲಿ ಅನುಮೋದನೆಗೊಂಡ ಲಸಿಕೆಯನ್ನು ಭಾರತದಲ್ಲಿ ಬ್ರಿಡ್ಜ್ ಪ್ರಯೋಗ ನಡೆಸುವ ಅಗತ್ಯವಿಲ್ಲ ಎಂದು ಡಿಸಿಜಿಐ ಆದೇಶ ಹೊರಡಿಸಿದೆ. ಜೊತೆಗೆ ವಿದೇಶಿ ಲಸಿಕೆಯ ಪ್ರತಿಯೊಂದು ಬ್ಯಾಚ್ ಅನ್ನು ಭಾರತದಲ್ಲಿ ಟೆಸ್ಟಿಂಗ್ ನಡೆಸುವ ಅಗತ್ಯವಿಲ್ಲ ಎಂದು ಡಿಸಿಜಿಐ ಹೇಳಿದೆ. ಆದರೇ, ವಿದೇಶದಿಂದ ಕಳಿಸಿದ ಲಸಿಕೆಯನ್ನು ಆ ದೇಶದ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ನಡೆಸಿ ಸರ್ಟಿಫೈ ಮಾಡಿರಬೇಕು. ಹಿಮಾಚಲ ಪ್ರದೇಶದ ಕಸೂಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯಲ್ಲಿ ಲಸಿಕೆಯ ಬ್ಯಾಚ್​ಗಳ ಪರಿಶೀಲನೆ ನಡೆಯುತ್ತೆ. ವಿದೇಶಿ ಲಸಿಕೆ ಪಡೆದ ಮೊದಲ ನೂರು ಮಂದಿಯ ಸುರಕ್ಷತೆ ಬಗ್ಗೆ ಏಳು ದಿನಗಳ ಕಾಲ ನಿಗಾ ವಹಿಸಲಾಗುತ್ತೆ. ಏಪ್ರಿಲ್ 15 ರಂದು ಡಿಸಿಜಿಐ ಹೊರಡಿಸಿರುವ ಆದೇಶ ಈಗಲೂ ಜಾರಿಯಲ್ಲಿದೆ ಎಂದು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಮುಖ್ಯಸ್ಥ ಡಾಕ್ಟರ್ ವಿ.ಜಿ.ಸೋಮಾನಿ ಆದೇಶ ಹೊರಡಿಸಿದ್ದಾರೆ.

ಏಪ್ರಿಲ್ 15 ರಂದೇ ಆಮೆರಿಕಾದ ಎಫ್​ಡಿಎ, ಇಂಗ್ಲೆಂಡ್​ನ ಎಂಎಚ್‌ಆರ್‌ಎ, ಪಿಎಂಡಿಎ ಜಪಾನ್ ದೇಶಗಳಲ್ಲಿ ಅನುಮೋದನೆಗೊಂಡ ಲಸಿಕೆಗಳು ಭಾರತದಲ್ಲಿ ಜನರ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿದರೆ, ಮೂರು ಕಾರ್ಯನಿರ್ವಹಿಸುವ ದಿನಗಳಲ್ಲೇ ಒಪ್ಪಿಗೆ ನೀಡಲಾಗುತ್ತೆ ಎಂದು ಆದೇಶ ಹೊರಡಿಸಲಾಗಿದೆ. ವಿದೇಶಿ ಲಸಿಕೆಗಳ ಅನುಮೋದನೆ ಪ್ರಕ್ರಿಯೆ ನಿಧಾನವಾಗದಂತೆ, ತ್ವರಿತಗೊಳಿಸಲು ಕೇಂದ್ರ ಸರ್ಕಾರ, ಡಿಸಿಜಿಐ ಸಿದ್ದವಾಗಿವೆ. ಆದರೆ, ಇಷ್ಟು ದಿನಗಳ ಕಾಲ, ಸೈಡ್ ಎಫೆಕ್ಟ್ ವಿರುದ್ಧದ ಕೋರ್ಟ್ ಕೇಸ್​ನಿಂದ ರಕ್ಷಣೆ ಸಿಗದಿದ್ದರಿಂದ ವಿದೇಶದ ಯಾವುದೇ ಲಸಿಕಾ ಕಂಪನಿಗಳು ಡಿಸಿಜಿಐ ಬಳಿ ತಮ್ಮ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿಯನ್ನೇ ಸಲ್ಲಿಸಿಲ್ಲ.

ಆಮೆರಿಕಾದ ಮಾಡೆರ್ನಾ ಕಂಪನಿಯು ಈಗಾಗಲೇ ಅನೇಕ ದೇಶಗಳೊಂದಿಗೆ ಲಸಿಕೆ ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಆಸ್ಟ್ರೇಲಿಯಾ ದೇಶಕ್ಕೆ ಈ ವರ್ಷ ಲಸಿಕೆ ಪೂರೈಸಲು ಆಗಲ್ಲ ಎಂದಿದೆ. ಹೀಗಾಗಿ ಮಾಡೆರ್ನಾ ಕಂಪನಿಯ ಲಸಿಕೆಯು ಈ ವರ್ಷ ಭಾರತಕ್ಕೆ ಬರುವ ಸಾಧ್ಯತೆ ಇಲ್ಲ. ಆದರೇ ಮಾಡೆರ್ನಾ ಕಂಪನಿಯು ಮುಂದಿನ ವರ್ಷ ಭಾರತಕ್ಕೆ ಸಿಂಗಲ್ ಡೋಸ್ ಲಸಿಕೆಯನ್ನು ಪೂರೈಸಲು ಸಿದ್ದತೆ ನಡೆಸುತ್ತಿದೆ. ಆದರೆ, ಮಾಡೆರ್ನಾ ಕಂಪನಿಯ ಜೊತೆಗೆ ಲಸಿಕೆ ಪೂರೈಕೆಗೆ ಸಿಪ್ಲಾ ಕಂಪನಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಸಿಪ್ಲಾ ಕಂಪನಿಯು ಭಾರತಕ್ಕೆ ಮಾಡೆರ್ನಾ ಕಂಪನಿಯ ಕೊರೊನಾ ಲಸಿಕೆಯನ್ನು ತರಲಿದೆ.

ಸಿಪ್ಲಾ ಕಂಪನಿಯಿಂದ ಭಾರತ ಸರ್ಕಾರಕ್ಕೆ ನಾಲ್ಕು ವಿಷಯಗಳ ಬಗ್ಗೆ ಬೇಡಿಕೆ ಆದರೇ, ಸಿಪ್ಲಾ ಕಂಪನಿಯು ಭಾರತ ಸರ್ಕಾರದಿಂದ ನಾಲ್ಕು ವಿಷಯಗಳ ಬಗ್ಗೆ ಭರವಸೆ ಕೇಳುತ್ತಿದೆ. ಲಸಿಕೆಯ ಸೈಡ್ ಎಫೆಕ್ಟ್ ವಿರುದ್ಧದ ಕೋರ್ಟ್ ಕೇಸ್​ನಿಂದ ರಕ್ಷಣೆ ನೀಡಬೇಕು. ಲಸಿಕೆಯ ಅಮದು ಶುಲ್ಕದಿಂದ ರಕ್ಷಣೆ ನೀಡಬೇಕು. ಲಸಿಕೆಯನ್ನು ಭಾರತದಲ್ಲಿ ಬ್ರಿಡ್ಜ್ ಪ್ರಯೋಗವನ್ನು ಬೇಗ ನಡೆಸಬೇಕು ಇಲ್ಲವೇ ಬ್ರಿಡ್ಜ್ ಪ್ರಯೋಗದಿಂದ ವಿನಾಯಿತಿ ನೀಡಬೇಕು. ಲಸಿಕೆಯ ಬೆಲೆ ನಿಗದಿ ಮೇಲೆ ಸರ್ಕಾರ ನಿರ್ಬಂಧ ವಿಧಿಸಬಾರದು. ಈ ನಾಲ್ಕು ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಭರವಸೆ, ಸ್ಪಷ್ಟನೆ ನೀಡಬೇಕೆಂದು ಸಿಪ್ಲಾ ಕಂಪನಿ ಕೇಳಿದೆ. ಸಿಪ್ಲಾ ಕಂಪನಿಯು ಮಾಡೆರ್ನಾ ಕಂಪನಿಗೆ 1 ಬಿಲಿಯನ್ ಡಾಲರ್ ಅಂದರೇ, 7,250 ಕೋಟಿ ರೂಪಾಯಿ ಹಣವನ್ನು ಲಸಿಕೆ ಪೂರೈಕೆಗೆ ಅಡ್ವಾನ್ಸ್ ಆಗಿ ನೀಡಲು ಸಿದ್ದವಾಗಿದೆ . ಮಾಡೆರ್ನಾ ಕಂಪನಿಯು ಕೂಡ ಲಸಿಕೆ ಪೂರೈಕೆಗೆ ಅಡ್ವಾನ್ಸ್ ಆಗಿ ಹಣ ನೀಡಬೇಕೆಂದು ಕೇಳುತ್ತಿದೆ.

ಒಟ್ಟಿನಲ್ಲಿ ಭಾರತದಲ್ಲಿ ಈಗ ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಕೊರತೆಗೆ ಯಾವಾಗ ಪರಿಹಾರ ಸಿಗುತ್ತೆ ಎಂಬ ಚರ್ಚೆ ನಡೆಯುತ್ತಿದೆ. ಕೊರೊನಾ ಲಸಿಕೆ ಸಿಗದೇ, ಜನರು ಮುಂಜಾನೆ 2 ಗಂಟೆಯಿಂದ ಲಸಿಕಾ ಕೇಂದ್ರಗಳ ಬಳಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಜುಲೈ-ಆಗಸ್ಟ್ ತಿಂಗಳಿನಿಂದ ಭಾರತದ ಲಸಿಕೆಯ ಕೊರತೆಯ ಸಮಸ್ಯೆಗೆ ಪರಿಹಾರ ಸಿಗಲಿದೆ.

(ಬರಹ: ಎಸ್.ಚಂದ್ರಮೋಹನ್)

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ DCGI ಒಪ್ಪಿಗೆ; ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada