
ನವದೆಹಲಿ, ಏಪ್ರಿಲ್ 15: ಹೋಲ್ಸೇಲ್ ಹಣದುಬ್ಬರ (WPI inflation) ಮಾರ್ಚ್ ತಿಂಗಳಲ್ಲಿ ಶೇ. 2.05ಕ್ಕೆ ತಗ್ಗಿದ ಬೆನ್ನಲ್ಲೇ ರೀಟೇಲ್ ಹಣದುಬ್ಬರವೂ (Retail Inflation) ಕಡಿಮೆ ಆಗಿರುವ ಮಾಹಿತಿ ತಿಳಿದುಬಂದಿದೆ. ಸರ್ಕಾರ ಇಂದು ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2025ರ ಮಾರ್ಚ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 3.34ಕ್ಕೆ ಇಳಿದಿದೆ. ಆಹಾರ ವಸ್ತುಗಳ ಬೆಲೆ ಇಳಿಕೆಯಿಂದಾಗಿ ಹಣದುಬ್ಬರ ದರ ತುಸು ತಗ್ಗಿದೆ. ಫೆಬ್ರುವರಿ ತಿಂಗಳಲ್ಲೂ ಹಣದುಬ್ಬರ ಶೇ 3.61ರಷ್ಟಿತ್ತು. ಸತತ ಎರಡು ತಿಂಗಳು ಹಣದುಬ್ಬರ ದರವು ಆರ್ಬಿಐನ ಗುರಿಯಾದ ಶೇ. 4ರ ದರದ ಒಳಗೆ ಇದ್ದಂತಾಗಿದೆ.
ಕಳೆದ ವಾರ ನಡೆದ ವಿವಿಧ ಸಮೀಕ್ಷೆಗಳಲ್ಲಿ ಆರ್ಥಿಕ ತಜ್ಞರು ಈ ಮಾರ್ಚ್ನಲ್ಲಿ ಹಣದುಬ್ಬರವು ಶೇ. 3.60ರಷ್ಟಿರಬಹುದು ಎನ್ನುವ ಅನಿಸಿಕೆ ನೀಡಿದ್ದರು. ನಿರೀಕ್ಷೆ ಮೀರಿ ಹಣದುಬ್ಬರ ತಗ್ಗಿದೆ.
ಗ್ರಾಹಕ ಬೆಲೆ ಸೂಚಿಯ ಗುಂಪಿನಲ್ಲಿ ಆಹಾರ ಹಣದುಬ್ಬರದ ದರ ಗಣನೀಯವಾಗಿ ಕಡಿಮೆ ಆಗಿದೆ. ಫೆಬ್ರುವರಿಯಲ್ಲಿ ಶೇ. 3.75ರಷ್ಟಿದ್ದ ಆಹಾರ ಹಣದುಬ್ಬರ ಮಾರ್ಚ್ನಲ್ಲಿ ಶೇ. 2.69ಕ್ಕೆ ಇಳಿದಿದೆ. ಒಟ್ಟಾರೆ ಹಣದುಬ್ಬರ ಇಳಿಕೆಯಲ್ಲಿ ಅರ್ಧದಷ್ಟು ಪಾಲು ಆಹಾರಕ್ಕೆ ಸಲ್ಲಬೇಕು.
ಇದನ್ನೂ ಓದಿ: ಮಾರ್ಚ್ನಲ್ಲಿ ಶೇ. 2.05ಕ್ಕೆ ಇಳಿದ ಸಗಟು ಹಣದುಬ್ಬರ ದರ; ಬೆಲೆ ಏರಿಕೆ ಬಿಸಿ ಫೆಬ್ರುವರಿಗಿಂತ ಕಡಿಮೆ
ತರಕಾರಿ ಬೆಲೆ ಫೆಬ್ರುವರಿಯಲ್ಲಿ ಶೇ. 1.07ರಷ್ಟು ಇಳಿಕೆ ಆಗಿತ್ತು. ಆದರೆ, ಮಾರ್ಚ್ನಲ್ಲಿ ಅದು ಶೇ. 7.04ರಷ್ಟು ಬೆಲೆ ಇಳಿಕೆ ಕಂಡಿದೆ. ಬೇಳೆ ಕಾಳುಗಳ ಬೆಲೆ ಏರಿಕೆಯ ಪ್ರಮಾಣವೂ ಕಡಿಮೆ ಆಗಿದೆ.
ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 3.79 ಇದ್ದದ್ದು ಮಾರ್ಚ್ನಲ್ಲಿ ಶೇ. 3.25ಕ್ಕೆ ಇಳಿದಿದೆ. ನಗರ ಭಾಗದ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ. 3.32ರಷ್ಟು ಇದ್ದದ್ದು ಮಾರ್ಚ್ನಲ್ಲಿ ಶೇ. 2.48ಕ್ಕೆ ಇಳಿದಿದೆ.
ಕಳೆದ ಹಣಕಾಸು ವರ್ಷದಲ್ಲಿ (2024-25) 12 ತಿಂಗಳ ಪೈಕಿ ಒಂದು ತಿಂಗಳು ಮಾತ್ರವೇ ಹಣದುಬ್ಬರವು ಆರ್ಬಿಐನ ತಾಳಿಕೆ ಮಿತಿಗಿಂತ ಹೊರಗೆ ಹೋಗಿರುವುದು. ಆರ್ಬಿಐನ ಹಣದುಬ್ಬರ ಗುರಿ ಶೇ. 4 ಇದೆ. ಇದಕ್ಕೆ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಅನ್ನು ನಿಗದಿ ಮಾಡಲಾಗಿದೆ. ಅಂದರೆ, ಹಣದುಬ್ಬರವು ಈ ಮಿತಿಗಿಂತ ಹೊರಗೆ ಹೋಗದಂತೆ ನೋಡಿಕೊಳ್ಳಲು ಆರ್ಬಿಐ ಆದ್ಯತೆ ಕೊಡುತ್ತದೆ.
ಇದನ್ನೂ ಓದಿ: ಶ್ರೀಮಂತರ ಸಂಪತ್ತು ಮುಚ್ಚಿಟ್ಟಿದ್ದೇ ಹೆಚ್ಚು; ಬೆಚ್ಚಿಬೀಳಿಸುತ್ತದೆ ಆರ್ಬಿಐ ಎಂಪಿಸಿ ಸದಸ್ಯರ ವರದಿ
2024ರ ಅಕ್ಟೋಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ 6.21 ಇತ್ತು. ಉಳಿದೆಲ್ಲಾ ತಿಂಗಳೂ ಶೇ. 6ರ ಒಳಗೆಯೇ ಇದೆ. 2024ರ ಜುಲೈ ಮತ್ತು ಆಗಸ್ಟ್, ಹಾಗೂ 2025ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಹಣದುಬ್ಬರವು ಶೇ. 4ಕ್ಕಿಂತಲೂ ಕಡಿಮೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Tue, 15 April 25