PM Mudra Scheme: ಮಹಿಳೆಯರಿಗೆ ವರದಾನವಾಗುತ್ತಿರುವ ಪಿಎಂ ಮುದ್ರಾ ಯೋಜನೆ
PM Mudra Scheme benefiting women: ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳಿಗೆ ಸರ್ಕಾರವು ಅಡಮಾನರಹಿತ ಸಾಲದ ವ್ಯವಸ್ಥೆ ಮಾಡುತ್ತದೆ. ಸಣ್ಣ ಉದ್ದಿಮೆಗಳಲ್ಲಿ ಮಹಿಳೆಯರೇ ಹೆಚ್ಚಾಗಿರುವುದರಿಂದ ಮುದ್ರಾ ಯೋಜನೆ ಮಹಿಳೆಯರಿಗೆ ವರದಾನವಾಗುತ್ತಿದೆ. ಮಹಿಳೆಗೆ ಆದಾಯ ಹೆಚ್ಚಿದರೆ ಅದರಿಂದ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ವ್ಯಯಿಸುವುದು ಹೆಚ್ಚಾಗುತ್ತದೆ. ಇದರಿಂದ ಆರ್ಥಿಕತೆಗೆ ಪ್ರಯೋಜನಗಳುಂಟು ಎನ್ನಲಾಗುತ್ತದೆ.

ದೇಶದ ಆರ್ಥಿಕತೆ ಅಗಾಧವಾಗಿ ಬೆಳೆಯಬೇಕಾದರೆ ಮಹಿಳೆಯರೂ (Women empowerment) ದುಡಿಯಬೇಕಾಗುತ್ತದೆ. ದೇಶದಲ್ಲಿ ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾದರೆ ಅರ್ಧದಷ್ಟು ಮಾನವ ಸಂಪನ್ಮೂಲವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಭಾಗಿದಾರರಾಗದೇ ಉಳಿದುಹೋಗಬೇಕಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಮಹಿಳೆಯರು ದುಡಿಮೆಗೆ ಬರಬೇಕು, ಅವರಿಗೆ ಅವಕಾಶಗಳು ಸಿಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಮಹಿಳೆಯರಿಗೆ ಎಲ್ಲಾ ಸ್ತರಗಳಲ್ಲಿ ಉತ್ತೇಜನ ನೀಡಲು ಸಿದ್ಧವಾಗಿವೆ. ಕೇಂದ್ರ ಸರ್ಕಾರ ಕೂಡ ಮಹಿಳೆಯರಿಗೆ ಉಪಯುಕ್ತವೆನಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಲಖಪತಿ ದೀದಿ ಯೋಜನೆ, ಪಿಎಂ ಉಜ್ವಲ ಯೋಜನೆ, ಡ್ರೋನ್ ದೀದಿ ಯೋಜನೆ ಹೀಗೆ ಹಲವು ಸ್ಕೀಮ್ಗಳಿವೆ. ಈ ಮಧ್ಯೆ ಪಿಎಂ ಮುದ್ರಾದಂತಹ ಯೋಜನೆಗಳೂ (PM Mudra Scheme) ಕೂಡ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿವೆ.
ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲ (collateral-free loan) ನೀಡಲಾಗುತ್ತದೆ. ಇದು ಮಹಿಳೆಯರಿಗೆ ಹೇಗೆ ಉತ್ತೇಜನ ನೀಡುತ್ತದೆ ಎಂದು ನೋಡಿದರೆ ಅಚ್ಚರಿ ಎನಿಸಬಹುದು. ಟೈಲರಿಂಗ್, ಬ್ಯೂಟಿ ಪಾರ್ಲರ್, ಕೃಷಿ ಸಂಸ್ಕರಣಾ ಘಟಕಗಳು, ರೀಟೇಲ್ ಅಂಗಡಿಗಳು ಇತ್ಯಾದಿ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಲ್ಲಿ ಶೇ. 68ರಷ್ಟು ಉದ್ದಿಮೆಗಳು ಮಹಿಳೆಯರಿಂದಲೇ ನಡೆಯುತ್ತಿರುವಂಥವು. ಮಹಿಳೆಯರು ಹೆಚ್ಚಾಗಿ ಇಂಥ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ
ಸಾಂಪ್ರದಾಯಿಕವಾಗಿ ಇಂಥ ಉದ್ದಿಮೆಗಳ ಬ್ಯುಸಿನೆಸ್ ಬೆಳೆಯಬೇಕೆಂದರೆ ಹೆಚ್ಚುವರಿ ಬಂಡವಾಳದ ಅಗತ್ಯತೆ ಇರುತ್ತದೆ. ಸುಲಭವಾಗಿ ಸಾಲ ಸಿಗದ ಕಾರಣ ಬಹಳಷ್ಟು ಉದ್ದಿಮೆಗಳು ಕುಂಠಿತಗೊಳ್ಳುತ್ತವೆ. ಆದರೆ, ಪಿಎಂ ಮುದ್ರಾ ಯೋಜನೆ ಈ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಯಾವುದೇ ಅಡಮಾನ ಇಡಬೇಕಾದ ಅಗತ್ಯ ಇಲ್ಲದೇ ಸುಲಭವಾಗಿ ಸಾಲ ಪಡೆಯಬಹುದು.
ಮಹಿಳೆ ಬೆಳೆದರೆ ಕುಟುಂಬ ಬೆಳೆದಂತೆ, ಊರು ಬೆಳೆದಂತೆ…
ಮಹಿಳೆ ಸಾಕ್ಷರಳಾದರೆ ಆಕೆಯಿಂದ ಮಕ್ಕಳೂ ಉತ್ತಮ ವಿದ್ಯಾಭ್ಯಾಸ ಪಡೆಯುತ್ತಾರೆ. ಆ ಮೂಲಕ ಕುಟುಂಬದ ಭವಿಷ್ಯ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇದು ಮಹಿಳೆಯಿಂದ ಆಗುವ ಮಲ್ಟಿಪ್ಲಯರ್ ಎಫೆಕ್ಟ್. ಇದೇ ಮಹಿಳೆ ಸಾಕ್ಷರಳು ಮಾತ್ರವಲ್ಲ, ಹಣಕಾಸು ಸಂಪಾದನೆಗೆ ಶಕ್ತಳಾದರೂ ಅದರಿಂದ ಬಹುರೀತಿಯ ಪರಿಣಾಮಗಳನ್ನು ಕಾಣಬಹುದು.
ಪ್ರಧಾನಿಗಳ ಆರ್ಥಿಕ ಸಲಹೆಗಾರ ಮಂಡಳಿಯ ಸದಸ್ಯ ಆದಿತ್ಯ ಸಿನ್ಹಾ ಪ್ರಕಾರ, ಮಹಿಳೆಗೆ ಹಣದ ಬಲ ಸಿಕ್ಕರೆ ಆಕೆ ಅದನ್ನು ಮಕ್ಕಳ ಆರೋಗ್ಯ, ಪೌಷ್ಟಿಕತೆ, ಶಿಕ್ಷಣಕ್ಕೆ ಹೆಚ್ಚು ವ್ಯಯಿಸುತ್ತಾಳೆ. ಇದರಿಂದ ಆರೋಗ್ಯಯುತ ಮತ್ತು ಶಿಕ್ಷಣವಂತ ಹೊಸ ತಲೆಮಾರಿನ ಯುವಕರು ಮತ್ತು ಯುವತಿಯರ ನಿರ್ಮಾಣಕ್ಕೆ ಸಹಾಯವಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಸ್ವಂತವಾಗಿ 25 ಚಿಪ್ಸೆಟ್ಗಳ ತಯಾರಿಕೆ; ಸರ್ವಿಸ್ನಿಂದ ಪ್ರಾಡಕ್ಟ್ ದೇಶವಾಗಿ ಬದಲಾಗುತ್ತಿರುವ ಭಾರತ
ಪಿಎಂ ಮುದ್ರಾ ಯೋಜನೆ ಅಡಿ ಸಾಲ ಪಡೆದ ಫಲಾನುಭವಿಗಳಲ್ಲಿ ಮಹಿಳೆಯರ ಸಂಖ್ಯೆ ಶೇ. 68ರಷ್ಟಿದೆ. ಈ ಸ್ಕೀಮ್ ಅಡಿ ಸಾಲ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ವರ್ಷಕ್ಕೆ ಶೇ. 13ರಷ್ಟು ಹೆಚ್ಚಾಗುತ್ತಿದೆ. ಇದೇ ವೇಳೆ, ಮಹಿಳೆಯರಿಂದ ಉಳಿತಾಯವೂ ಶೇ. 14ರಷ್ಟು ಹೆಚ್ಚುತ್ತಿದೆ. ಮಹಿಳೆಯರು ಭವಿಷ್ಯಕ್ಕಾಗಿ ಹಣ ಉಳಿಸುತ್ತಿರುವ ಪ್ರವೃತ್ತಿಯನ್ನು ಗುರುತಿಸಬಹುದು ಎನ್ನುತ್ತಾರೆ ಆದಿತ್ಯ ಸಿನ್ಹಾ.
ಒಬ್ಬ ಮಹಿಳೆಯು ಉದ್ಯಮಿಯಾದರೆ ಆಕೆ ಗಳಿಸುವುದಷ್ಟೇ ಅಲ್ಲ, ಉದ್ಯೋಗ ನೀಡುತ್ತಾರೆ, ಹಣ ಉಳಿಸುತ್ತಾಳೆ, ಶಿಕ್ಷಣ ಕೊಡಿಸುತ್ತಾಳೆ. ಇದು ಭಾರತದ ನಾರಿ ಶಕ್ತಿ. ಒಂದು ಮುದ್ರಾ ಸಾಲ ಹೇಗೆಲ್ಲಾ ಪರಿಣಾಮ ಬೀರುತ್ತದೆ ನೋಡಿ…
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Mon, 14 April 25