India’s Chipsets: ಭಾರತದಲ್ಲಿ ಸ್ವಂತವಾಗಿ 25 ಚಿಪ್ಸೆಟ್ಗಳ ತಯಾರಿಕೆ; ಸರ್ವಿಸ್ನಿಂದ ಪ್ರಾಡಕ್ಟ್ ದೇಶವಾಗಿ ಬದಲಾಗುತ್ತಿರುವ ಭಾರತ
India developing 25 chipsets with indigenous IP: ಭಾರತದಲ್ಲಿ ದೇಶೀಯವಾಗಿ ರೂಪಿಸಲಾದ ಇಂಟೆಲೆಕ್ಚುವಲ್ ಪ್ರಾಪರ್ಟಿ ಹೊಂದಿರುವ ಚಿಪ್ಸೆಟ್ಗಳ ಅಭಿವೃದ್ಧಿ ನಡೆಯುತ್ತಿದೆ. ಇಂಥ 25 ಚಿಪ್ಸೆಟ್ಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದೆ. ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಲ್ಲಿ ಈ ಚಿಪ್ಸೆಟ್ಗಳನ್ನು ಸದ್ಯದಲ್ಲೇ ತಯಾರಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದ್ದಾರೆ.

ನವದೆಹಲಿ, ಏಪ್ರಿಲ್ 13: ಭಾರತ ಸೆಮಿಕಂಡಕ್ಟರ್ ಚಿಪ್ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆಯತ್ತ (Atma Nirbhar Bharat) ಬಲವಾದ ಪುಟ್ಟ ಹೆಜ್ಜೆಗಳನ್ನು ಇರಿಸುತ್ತಿದೆ. ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಯಾದ ತಂತ್ರಜ್ಞಾನಗಳ (Indigenous Intellectual Property) ಸಹಾಯದಿಂದ 25 ಚಿಪ್ಸೆಟ್ಗಳನ್ನು (Chipsets) ಅಭಿವೃದ್ಧಿಪಡಿಸಲಾಗುತ್ತಿದೆ. ಕೇಂದ್ರ ಎಲೆಕ್ಟ್ರಾನಿಕ್ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿಎಲ್ಐ) ಸ್ಕೀಮ್ ಅಡಿಯಲ್ಲಿ ಸ್ವಂತವಾಗಿ ಚಿಪ್ಸೆಟ್ಗಳ ತಯಾರಿಕೆ ಮಾಡಲಾಗುತ್ತಿರುವುದನ್ನು ತಿಳಿಸಿದ್ದಾರೆ.
ಇಲ್ಲಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಎಂದರೆ ಬೌದ್ಧಿಕ ಆಸ್ತಿಯನ್ನು ಉಲ್ಲೇಖಿಸುತ್ತದೆ. ಅಂದರೆ, ಚಿಪ್ಗಳ ತಯಾರಿಕೆಗೆ ಅಗತ್ಯವಾದ ಡಿಸೈನ್, ಆರ್ಕಿಟೆಕ್ಚರ್ ಮತ್ತು ಕೋರ್ ಲಾಜಿಕ್ ಅನ್ನು ಭಾರತೀಯ ಸಂಸ್ಥೆಗಳೇ ಮಾಡಿರುತ್ತವೆ. ಅಂದರೆ, ವಿದೇಶಗಳಲ್ಲಿ ತಯಾರಾಗುವ ಚಿಪ್ಗಳಿಗೆ ಬಳಕೆಯಾಗುವ ಅಲ್ಗಾರಿದಂಗಿಂತ ಭಿನ್ನವಾದ ಅಲ್ಗಾರಿದಂ, ಲಾಜಿಕ್ ಬ್ಲಾಕ್ ಮತ್ತು ಸಾಫ್ಟ್ವೇರ್ ಅನ್ನು ದೇಶೀವಾಗಿ ತಯಾರಿಸಲಾಗುತ್ತದೆ. ಇವು ವಿದೇಶಗಳ ಪೇಟೆಂಟ್ ಮತ್ತು ಲೈಸೆನ್ಸ್ ವ್ಯಾಪ್ತಿಯಿಂದ ಹೊರಗಿರುತ್ತವೆ. ಇಂಥ ಚಿಪ್ಸೆಟ್ಗಳಿಗೆ ಭಾರತೀಯ ಸಂಸ್ಥೆಗಳು ಪೇಟೆಂಟ್ ಹೊಂದಿರುತ್ತವೆ. ಇಂಥ 25 ಚಿಪ್ಸೆಟ್ಗಳ ಅಭಿವೃದ್ಧಿಯನ್ನು ಭಾರತದಲ್ಲಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಡಿಜಿಟಲ್ ಸೌಕರ್ಯ; ಭಾರತದ ಮುಂದೆ ಸಿಲಿಕಾನ್ ವ್ಯಾಲಿ ಏನೂ ಇಲ್ಲ: ವಿವೇಕ್ ವಾಧವಾ
ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್ ಅವರು, ಬೆಂಗಳೂರಿನ ಸಿಡಾಕ್ನಿಂದ 13 ಪ್ರಾಜೆಕ್ಟ್ಗಳು ನಡೆಯುತ್ತಿರುವುದನ್ನು ತಿಳಿಸಿದ್ದಾರೆ ಹಾಗೆಯೇ, ಚಿಪ್ಸೆಟ್ಗಳ ತಯಾರಿಕೆಯಲ್ಲಿ ಬೌದ್ಧಿಕ ಆಸ್ತಿಯ ಮಹತ್ವದ ಬಗ್ಗೆ ತಿಳಿಸಿದ ಅವರು, ಇವು ಭಾರತವನ್ನು ಸರ್ವಿಸ್ ದೇಶದಿಂದ ಪ್ರಾಡಕ್ಟ್ ದೇಶವಾಗಿ ಪರಿವರ್ತಿಸಬಲ್ಲುದು ಎಂದಿದ್ದಾರೆ.
ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳಿಂದ ದೇಶೀಯ ಚಿಪ್ಗಳ ತಯಾರಿಕೆ
ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳು ನಿರ್ಮಾಣ ಆಗುತ್ತಿವೆ. ಈ ದೇಶೀಯ ಇಂಟೆಲೆಕ್ಚುವಲ್ ಪ್ರಾಪರ್ಟಿಯಾದ ಚಿಪ್ಸೆಟ್ಗಳನ್ನು ಈ ಫ್ಯಾಬ್ ಯೂನಿಟ್ಗಳಲ್ಲಿ ತಯಾರಿಸಲಾಗುತ್ತದಂತೆ. ದೇಶದ 240 ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವು ವಿಶ್ವದರ್ಜೆ ಚಿಪ್ ಡಿಸೈನ್ ಟೂಲ್ಗಳನ್ನು ಒದಗಿಸಿದೆ. ಇದರಿಂದ ಪ್ರತಿಭೆಗಳನ್ನು ಹೊರತರುವುದು ಸುಲಭವಾಗುತ್ತದೆ. ವಿದ್ಯಾರ್ಥಿಗಳಿಂದ ಅಭಿವೃದ್ಧಿಯಾದ 20 ಚಿಪ್ಗಳನ್ನು ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಲ್ಯಾಬ್ನಲ್ಲಿ ಸದ್ಯದಲ್ಲೇ ತಯಾರಿಸಲಾಗುವುದು.
ಇದನ್ನೂ ಓದಿ: ಭಾರತದಲ್ಲಿ 3ನೇ ಅತಿದೊಡ್ಡ ಹೋಟೆಲ್ ಜಾಲ ನಿರ್ಮಿಸಲಿರುವ ಅಕ್ಕೋರ್, ಇಂಟರ್ಗ್ಲೋಬ್, ಟ್ರೀಬೋ
ಇದೇ ವೇಳೆ, ಅಶ್ವಿನಿ ವೈಷ್ಣವ್ ಅವರು ಎಲೆಕ್ಟ್ರಾನಿಕ್ ಕಾಂಪೊನೆಂಟ್ಗಳಿಗೆ ರೂಪಿಸಲಾದ ಪಿಎಲ್ಐ ಸ್ಕೀಮ್ ನಿರೀಕ್ಷಿತ ಪರಿಣಾಮ ಬೀರಿರುವುದನ್ನು ಎತ್ತಿ ತೋರಿಸಿದ್ಧಾರೆ. ಕಳೆದ ಒಂದು ದಶಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಐದು ಪಟ್ಟು ಹೆಚ್ಚಾಗಿದೆ. ರಫ್ತು ಆರು ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಆಮದು ಮಾಡಿಕೊಳ್ಳುತ್ತಿದ್ದ ಕಾಲದಿಂದ ಈಗ ರಫ್ತು ಮಾಡುವ ಮಟ್ಟಕ್ಕೆ ಬೆಳವಣಿಗೆ ಹೊಂದಿದ್ದೇವೆ ಎನ್ನುವ ಅಂಶವನ್ನು ಸಚಿವರು ಹೈಲೈಟ್ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ