ಚೀನಾದಿಂದ ಐಫೋನ್ ಉತ್ಪಾದನೆ ಭಾರತಕ್ಕೆ ಈವರೆಗೆ ವರ್ಗವಾಗಿರುವುದು ಎಷ್ಟು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
22 Billion USD worth of iPhones manufactured in India: ಭಾರತದಲ್ಲಿ ಆ್ಯಪಲ್ನ 22 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ಭಾರತದಲ್ಲಿ 2024-25ರಲ್ಲಿ ತಯಾರಾಗಿವೆ ಎನ್ನಲಾಗಿದೆ. ಐದಾರು ವರ್ಷದ ಹಿಂದಿನವರೆಗೂ ಬಹುತೇಕ ಎಲ್ಲಾ ಆ್ಯಪಲ್ ಉತ್ಪನ್ನಗಳು ಚೀನಾದಲ್ಲಿ ತಯಾರಾಗುತ್ತಿದ್ದುವು. ಕೋವಿಡ್ ಬಳಿಕ ಆ್ಯಪಲ್ ಸ್ಥಿರವಾಗಿ ತನ್ನ ಉತ್ಪಾದನೆಯನ್ನು ಭಾರತಕ್ಕೆ ಹಂತ ಹಂತವಾಗಿ ವರ್ಗಾಯಿಸುತ್ತಿದೆ.

ನವದೆಹಲಿ, ಏಪ್ರಿಲ್ 13: ಐದಾರು ವರ್ಷಗಳ ಹಿಂದಿನವರೆಗೂ ಶೇ. 95ಕ್ಕೂ ಹೆಚ್ಚು ಆ್ಯಪಲ್ ಕಂಪನಿಯ ಉತ್ಪನ್ನಗಳು ಚೀನಾದಲ್ಲೇ ತಯಾರಾಗುತ್ತಿದ್ದುವು. ಕೋವಿಡ್ ಬಂದ ಬಳಿಕ ಆ್ಯಪಲ್ ಕಂಪನಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ನಿರ್ಧರಿಸಿ, ಪರ್ಯಾಯ ಸ್ಥಳವಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಐಫೋನ್ ಮೊದಲಾದ ಆ್ಯಪಲ್ ಉತ್ಪನ್ನಗಳ ತಯಾರಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. 2024-25ರಲ್ಲಿ ಒಂದೇ ವರ್ಷದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ಗಳನ್ನು ಭಾರತದಲ್ಲಿ ತಯಾರಿಸಲಾಗಿದೆ. ಹಿಂದಿನ ವರ್ಷಕ್ಕೆ (2023-24) ಹೋಲಿಸಿದರೆ ಭಾರತದಲ್ಲಿ ತಯಾರಾದ ಐಫೋನ್ ಪ್ರಮಾಣ ಶೇ. 60ರಷ್ಟು ಏರಿದೆ.
ಚೀನಾ ನಂತರ ಭಾರತದಲ್ಲೇ ಅತಿಹೆಚ್ಚು ಐಫೋನ್ ತಯಾರಿಕೆ
ಒಂದು ಮಾಹಿತಿ ಪ್ರಕಾರ, ಜಾಗತಿಕ ಐಫೋನ್ ಉತ್ಪಾದನೆಯಲ್ಲಿ ಭಾರತದದ ಪಾಲು ಶೇ. 20ರಷ್ಟಿದೆ. ಅಂದರೆ, ಪ್ರತೀ ಐದು ಐಫೋನ್ನಲ್ಲಿ ಒಂದು ಫೋನ್ ಭಾರತದಲ್ಲಿ ತಯಾರಾಗುತ್ತಿದೆ. 2025ರಲ್ಲಿ ಭಾರತದಲ್ಲಿ ತನ್ನ ಶೇ. 20ರಷ್ಟು ಐಫೋನ್ ತಯಾರಾಗಬೇಕು ಎಂದು ಕೆಲ ವರ್ಷಗಳ ಹಿಂದೆ ಆ್ಯಪಲ್ ಗುರಿ ಇಟ್ಟುಕೊಂಡಿತ್ತು. ಒಂದು ವರ್ಷ ಬಾಕಿ ಇರುವಾಗ ಆ ಗುರಿ ಸಮೀಪಕ್ಕೆ ಹೋಗಿದೆ. ಶೇ. 20ರಷ್ಟು ಐಫೋನ್ ಅನ್ನು ಭಾರತದಲ್ಲಿ ಅದು ತಯಾರಿಸುತ್ತಿದೆ. 2025ರಲ್ಲಿ ಶೇ. 25ರಷ್ಟು ಉತ್ಪಾದನೆ ಭಾರತದಲ್ಲಿ ಆಗಬೇಕೆನ್ನುವ ಅದರ ಗುರಿ ಸಾಧನೆ ಕಷ್ಟವೇನೂ ಆಗುವುದಿಲ್ಲ.
ಇದನ್ನೂ ಓದಿ: ಭಾರತದಲ್ಲಿ ಸ್ವಂತವಾಗಿ 25 ಚಿಪ್ಸೆಟ್ಗಳ ತಯಾರಿಕೆ; ಸರ್ವಿಸ್ನಿಂದ ಪ್ರಾಡಕ್ಟ್ ದೇಶವಾಗಿ ಬದಲಾಗುತ್ತಿರುವ ಭಾರತ
ಚೀನಾದಿಂದ ಭಾರತಕ್ಕೆ ಉತ್ಪಾದನೆ ಬೇಗ ವರ್ಗವಾಗುವುದು ಯಾಕೆ ಕಷ್ಟ?
ಆ್ಯಪಲ್ ಕಂಪನಿ ಒಮ್ಮೆಗೇ (ಒಂದೆರಡು ವರ್ಷದಲ್ಲಿ) ಎಲ್ಲಾ ಉತ್ಪಾದನೆಯನ್ನು ಭಾರತಕ್ಕೆ ವರ್ಗಾವಣೆ ಮಾಡಿಕೊಳ್ಳಬಹುದಲ್ಲ ಎನ್ನುವ ಪ್ರಶ್ನೆ ಬರಬಹುದು. ಆದರೆ, ಆ್ಯಪಲ್ ಉತ್ಪನ್ನಗಳಿಗೆ ಬೇಕಾದ ಬಿಡಿಭಾಗಗಳನ್ನು ತಯಾರಿಸುವ ಎಲ್ಲಾ ಕಂಪನಿಗಳು ಚೀನಾದಲ್ಲೇ ಇರುವುದು. ಆ್ಯಪಲ್ನ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಪೂರ್ಣವಾಗಿ ಚೀನಾದಲ್ಲಿತ್ತು. ಅವೆಲ್ಲವನ್ನೂ ಒಮ್ಮೆಗೇ ಭಾರತಕ್ಕೆ ವರ್ಗಾವಣೆ ಮಾಡಲು ಅಸಾಧ್ಯದ ಮಾತು. ಹೀಗಾಗಿ, ಹಂತ ಹಂತವಾಗಿ ಆ್ಯಪಲ್ ಉತ್ಪನ್ನಗಳ ತಯಾರಿಕೆ ಭಾರತಕ್ಕೆ ಶಿಫ್ಟ್ ಆಗುತ್ತಿದೆ.
ಭಾರತದಲ್ಲಿ ತಯಾರಾದ ಐಫೋನ್ಗಳು ಅಮೆರಿಕಕ್ಕೆ ಸರಬರಾಜು
ಡೊನಾಲ್ಡ್ ಟ್ರಂಪ್ ಅವರು ಪ್ರತಿಸುಂಕ ಕ್ರಮಗಳನ್ನು ಹಾಕಬಹುದು ಎನ್ನುವ ಸುಳಿವು ಸಿಕ್ಕ ಕೂಡಲೇ ಆ್ಯಪಲ್ ಕಂಪನಿ ಭಾರತದಲ್ಲಿರುವ ತನ್ನ ಐಫೋನ್ ದಾಸ್ತಾನನ್ನು ಕ್ಷಿಪ್ರ ವೇಗದಲ್ಲಿ ಅಮೆರಿಕಕ್ಕೆ ಸಾಗಿಸಿತ್ತು. ಏಪ್ರಿಲ್ 2ರಂದು ಟ್ರಂಪ್ ಭಾರತಕ್ಕೆ ಶೇ 26ರಷ್ಟು ಪ್ರತಿಸುಂಕ ಹಾಕಿದರಾದರೂ ಸದ್ಯ ಈ ಕ್ರಮಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದಾರೆ.
ಇದನ್ನೂ ಓದಿ: 5 ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಸೆಮಿಕಂಡಕ್ಟರ್ ಉದ್ಯಮ; ಭಾರತಕ್ಕಿರುವ ಅನುಕೂಲಕರ ಅಂಶಗಳಿವು…
ಅದೇನೇ ಇರಲಿ, ಅಮೆರಿಕದ ಗ್ರಾಹಕರಿಗೆ ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾ ಐಫೋನ್ಗಳನ್ನು ಸರಬರಾಜು ಮಾಡಲು ಆ್ಯಪಲ್ ನಿರ್ಧರಿಸಿಯಾಗಿದೆ. ಹಾಗೆಯೇ, ಭಾರತದಿಂದ ಐಫೋನ್ಗಳು ಅಮೆರಿಕಕ್ಕೆ ಹೋಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ