Inspiring: ಕೇವಲ 15,000 ರೂ ಸಂಬಳ ಪಡೆಯುವ ಸಿಇಒ; ಜೀವನ ಹೇಗೆ ನಡೆಸ್ತಾರೆ ಕುನಾಲ್? ಎಂಥವರನ್ನೂ ಕರಗಿಸೀತು ಇವರ ಜೀವನ ಕಥೆ

|

Updated on: Feb 07, 2024 | 1:42 PM

Cred CEO Kunal Shah's Life Story: ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಕ್ರೆಡ್ ಸಂಸ್ಥೆಯ ಸಿಇಒ ಕುನಾಲ್ ಶಾ ತಿಂಗಳಿಗೆ ಕೇವಲ 15,000 ರೂ ಸಂಬಳ ಪಡೆಯುತ್ತಾರೆ. ಕಂಪನಿ ಲಾಭದ ಹಳಿಗೆ ಬರುವವರೆಗೂ ತಾನು ಹೆಚ್ಚು ಸಂಬಳ ಪಡೆಯುವುದಿಲ್ಲ ಎನ್ನುತ್ತಾರೆ ಸಿಇಒ ಕುನಾಲ್. ಫಿನ್​ಟೆಕ್ ಕಂಪನಿಯಾದ ಕ್ರೆಡ್ ಬಿಲಿಯನ್ ಡಾಲರ್ ಮೌಲ್ಯದ ಯೂನಿಕಾರ್ನ್ ಆಗಿ ಬೆಳೆದಿದೆ. ಆದರೆ, ಒಮ್ಮೆಯೂ ಲಾಭ ಕಂಡಿಲ್ಲ.

Inspiring: ಕೇವಲ 15,000 ರೂ ಸಂಬಳ ಪಡೆಯುವ ಸಿಇಒ; ಜೀವನ ಹೇಗೆ ನಡೆಸ್ತಾರೆ ಕುನಾಲ್? ಎಂಥವರನ್ನೂ ಕರಗಿಸೀತು ಇವರ ಜೀವನ ಕಥೆ
ಕುನಾಲ್ ಶಾ
Follow us on

ಬೆಂಗಳೂರು ಮೂಲದ ಫಿನ್​ಟೆಕ್ ಕಂಪನಿ ಕ್ರೆಡ್ (Cred) ಬಗ್ಗೆ ನೀವು ಕೇಳಿರಬಹುದು. ಬಿಲ್ ಪಾವತಿ, ರೀಚಾರ್ಜ್​ಗಳಿಗೆ ರಿವಾರ್ಡ್​ಗಳನ್ನು ನೀಡುವುದಕ್ಕೆ ಬಹಳ ಖ್ಯಾತಿ ಪಡೆದ ಪ್ಲಾಟ್​ಫಾರ್ಮ್ ಇದು. ಕುವೇರಾ (Kuvera) ಎಂಬ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಕ್ರೆಡ್ ಖರೀದಿಸುತ್ತಿರುವ ಸುದ್ದಿ ಬಂದಿತ್ತು. ಇದೇ ಕ್ರೆಡ್​ನ ಸಂಸ್ಥಾಪಕರು ಮತ್ತು ಸಿಇಒ ಕುನಾಲ್ ಶಾ (Kunal Shah). ಇವರ ಜೀವನದ ಕಥೆ ಎಂಥವರಿಗೂ ಖುಷಿ ಕೊಡುವಂಥದ್ದು, ಸ್ಫೂರ್ತಿ ನೀಡುವಂಥದ್ದು. ಜನರು ಹೀಗೂ ಇರುತ್ತಾರಾ ಎಂದು ಮೂಗಿನ ಮೇಲೆ ಬೆರಳಿಡುವಂತಾಗಬಹುದು, ಮೊಗದಲ್ಲಿ ಮುಗುಳ್ನಗೆ ಉಕ್ಕಬಹುದು. ಸಾಧಾರಣ ಮಧ್ಯಮವರ್ಗದ ಕುಟುಂಬದ ಹುಡುಗನೊಬ್ಬನಿಗೆ ಯಾವ ಕಷ್ಟ ಇರುತ್ತದೋ ಅದೆಲ್ಲವನ್ನೂ ಅನುಭವಿಸಿ ದಾಟಿ ಬಂದವರು ಕುನಾಲ್ ಶಾ.

ಮನೆಯಲ್ಲಿ ಹಣಕಾಸು ಸಂಕಷ್ಟ. ಬೇಕಾದ್ದನ್ನು ಓದಲು ಇಲ್ಲದ ದುಡ್ಡು. ಸೀಟು ಸಿಕ್ಕ ಸಬ್ಜೆಟ್ ಅನ್ನೇ ಓದುವುದು. ಕುಟುಂಬ ನಿರ್ವಹಣೆಗೆ ಶಾಲಾ ದಿನದಿಂದಲೇ ದುಡಿಮೆ. ಇಂಥ ಪರಿಸ್ಥಿತಿ ದಾಟಿ ಇವತ್ತು ಒಂದು ಸ್ಟಾರ್ಟಪ್ ಕಟ್ಟಿ ಅದನ್ನು ಯೂನಿಕಾರ್ನ್ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಕ್ರೆಡ್ ಸಿಇಒ ಕುನಾಲ್ ಶಾ. ಹೀಗಿದ್ದರೂ ಅವರು ತಿಂಗಳಿಗೆ 15,000 ರೂ ಮಾತ್ರವೇ ಸಂಬಳ ಪಡೆಯುತ್ತಾರೆ. ಅದಕ್ಕೂ ಅವರ ಬಳಿ ಅಭಿಮಾನ ಉಕ್ಕಿಸುವಂತಹ ಉತ್ತರ ಇದೆ. ಆ ಬಗ್ಗೆ ಮುಂದೆ ಇದೆ ವಿವರ.

ಇವರ ವಿಚಾರ ಈಗ ಟ್ರೆಂಡ್​ಗೆ ಬರಲು ಕಾರಣ ಮತ್ತೊಬ್ಬ ಉದ್ಯಮಿ ಸಂಜೀವ್ ಬಿಖಚಂದಾನಿ ಅವರು. ದೆಹಲಿಯ ಕಾಫಿ ಶಾಪ್​ವೊಂದರಲ್ಲಿ ಈ ಇಬ್ಬರು ಉದ್ಯಮಿಗಳ ಭೇಟಿಯಾಗಿದೆ. ಆ ಬಗ್ಗೆ ಸಂಜೀವ್ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಟಾರ್ಟಪ್ ಸಂಸ್ಥಾಪಕರಲ್ಲಿ ಐಐಟಿ, ಐಐಎಂನವರೇ ಇದ್ದಾರೆ. ಅವರ ಪೈಕಿ ಮುಂಬೈನ ವಿಲ್ಸನ್ ಕಾಲೇಜಿನಲ್ಲಿ ತತ್ವಶಾಸ್ತ್ರ ಓದಿದ ವ್ಯಕ್ತಿ ಎದ್ದುಕಾಣುತ್ತಾರೆ ಎಂದು ಇನ್ಫೋ ಎಡ್ಜ್ ಸಂಸ್ಥೆಯ ಮುಖ್ಯಸ್ಥ ಸಂಜೀವ್ ಬಿಖಚಂದಾನಿ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ಈ ವೇಳೆ ಕುನಾಲ್ ಜೀವನದ ಒಂದಷ್ಟು ಕುತೂಹಲದ ವಿವರಗಳು ಇಲ್ಲಿವೆ.

ಇದನ್ನೂ ಓದಿ: ನಷ್ಟ ಹೆಚ್ಚುತ್ತಿದ್ದರೂ ಲೆಕ್ಕಿಸಿದೆ ಕಂಪನಿಗಳ ಮೇಲೆ ಕಂಪನಿ ಖರೀದಿಸುತ್ತಿರುವ ಕ್ರೆಡ್; ಈಗ ಕುವೇರಾ ಸರದಿ

ಉದ್ಯಮಿ ಕುನಾಲ್ ಫಿಲಾಸಫಿ ಓದಿದ ಕಥೆ…

ಕುನಾಲ್ ಶಾ ಅವರ ಕುಟುಂಬದವರು ಹಣಕಾಸು ಸಂಕಷ್ಟಕ್ಕೆ ಒಳಗಾಗಿ ಬೀದಿಗೆ ಬೀಳಬೇಕಾದಂತಹ ಪರಿಸ್ಥಿತಿಗೆ ಬಂದಿದ್ದರು. ಆಗಿನ್ನೂ ಕುನಾಲ್ ಶಾಲೆಯಲ್ಲಿ ಓದುತ್ತಿದ್ದರು. ಹದಿಹರೆಯದಲ್ಲೇ ಓದುವುದರ ಜೊತೆಗೆ ದುಡಿಮೆ ಅನಿವಾರ್ಯವಾಗಿತ್ತು ಅವರಿಗೆ. ನಕಲಿ ಸಿಡಿಗಳನ್ನು ಇಟ್ಟುಕೊಂಡು, ತಮ್ಮ ಮನೆಯಲ್ಲಿ ಸೈಬರ್ ಕೆಫೆ ನಡೆಸುತ್ತಿದ್ದರು. ಈ ಮೂಲಕ ಒಂದಷ್ಟು ಹಣ ಸಂಪಾದನೆ ಮಾಡಿದ್ದರು. 16ನೇ ವಯಸ್ಸಿಗೆ ಬರುತ್ತಿದ್ದಂತೆಯೇ ತನ್ನ ಖರ್ಚಿಗೆ ಆಗುವಷ್ಟು ಸಂಪಾದನೆ ಮಾಡಬಲ್ಲವರಾಗಿದ್ದರು.

12ನೇ ತರಗತಿ ಬಳಿಕ ಎಲ್ಲರೂ ಎಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ಕಡೆ ಓಡುತ್ತಿದ್ದರೆ ಕುನಾಲ್ ಫಿಲಾಸಫಿ ಆಯ್ಕೆ ಮಾಡಿಕೊಂಡಿದ್ದರು. ಕಾರಣ? ಆ ಸಂದರ್ಭದಲ್ಲಿ ಕುನಾಲ್ ಡೆಲಿವರಿ ಬಾಯ್, ಡಾಟಾ ಎಂಟ್ರಿ ಆಪರೇಟರ್ ಇತ್ಯಾದಿ ಕೆಲಸ ಮಾಡುತ್ತಿದ್ದರು. ಅದಕ್ಕೆ ಹೊಂದುವಂತಹ ಅವಧಿಯಲ್ಲಿ ಕಾಲೇಜಿಗೆ ಹೋಗಬಯಸಿದ್ದರು. ಬೆಳಗ್ಗೆ 8ರಿಂದ 10ಗಂಟೆಯವರೆಗೆ ಕ್ಲಾಸ್​ಗಳು ಇದ್ದದ್ದು ಫಿಲಾಸಫಿ ಸಬ್ಜೆಕ್ಟ್​ಗೆ ಮಾತ್ರ. ಹೀಗಾಗಿ, ಅದೇ ಸಬ್ಜೆಕ್ಟ್ ಆಯ್ದುಕೊಳ್ಳುತ್ತಾರೆ ಕುನಾಲ್.

ಯೂನಿಕಾರ್ನ್ ಕಂಪನಿಯ ಒಡೆಯನಾಗಿ 15,000 ರೂ ಸಂಬಳ ಮಾತ್ರವೇ ಪಡೆಯುವುದು ಯಾಕೆ?

ಕ್ರೆಡ್ ಸಂಸ್ಥೆ ಈಗ ಯೂನಿಕಾರ್ನ್ ಆಗಿದೆ. ಅಂದರೆ ಕಂಪನಿಯ ಮೌಲ್ಯ ಒಂದು ಬಿಲಿಯನ್ ಡಾಲರ್ ದಾಟಿದೆ. ಇಷ್ಟಾದರೂ ಸಿಇಒ ಆಗಿ ಕುನಾಲ್ ಶಾ ತಿಂಗಳಿಗೆ ಕೇವಲ 15,000 ರೂ ಸಂಬಳ ಪಡೆಯುತ್ತಾರಂತೆ. ಮುಕೇಶ್ ಅಂಬಾನಿ ಯಾವುದೇ ಸಂಬಳ ಪಡೆಯುವುದಿಲ್ಲ. ಆದರೆ, ಅವರ ಬಳಿ ಇರುವ ಷೇರುಗಳ ಡಿವಿಡೆಂಡ್​ಗಳಿಂದಲೇ ಸಾವಿರಾರು ಕೋಟಿ ರೂ ಬರುತ್ತದೆ. ಕುನಾಲ್ ಶಾ ಯಾಕೆ ಅಷ್ಟು ಕಡಿಮೆ ಸಂಬಳ ಪಡೆಯುವುದು? ಅದಕ್ಕೆ ಒಂದು ಪ್ರಮುಖ ಕಾರಣ ಇದೆ.

ಇದನ್ನೂ ಓದಿ: ‘ನಾವೇನು ಮಾಡಲು ಸಾಧ್ಯವಿಲ್ಲ’- ಪೇಟಿಎಂ ಸಿಇಒಗೆ ಖಚಿತ ಉತ್ತರ ಕೊಟ್ಟ ಆರ್​ಬಿಐ ಮತ್ತು ಸರ್ಕಾರ

ಕ್ರೆಡ್ 2018ರಲ್ಲಿ ಆರಂಭವಾಗಿರುವ ಫಿನ್​ಟೆಕ್ ಕಂಪನಿ. ಇದಕ್ಕೆ ದೊಡ್ಡ ದೊಡ್ಡ ಹೂಡಿಕೆದಾರರ ನೆರವು ಸಿಕ್ಕು ಯೂನಿಕಾರ್ನ್ ಆಗಿ ಬೆಳೆದಿದೆಯಾದರೂ ಲಾಭ ಮಾತ್ರ ಸಿಗುತ್ತಿಲ್ಲ. ಆದಾಯ ಹೆಚ್ಚುತ್ತಿದೆ, ಜೊತೆಗೆ ನಷ್ಟವೂ ಹೆಚ್ಚುತ್ತಿದೆ. ಇದನ್ನು ಲಾಭದ ಹಳಿಗೆ ತರುವವರೆಗೂ ಹೆಚ್ಚು ಸಂಬಳ ಪಡೆಯುವುದು ನ್ಯಾಯುಯುತ ಅಲ್ಲ ಎಂಬುದು ಇವರ ಭಾವನೆ. ಅಂತೆಯೇ ಇವರು ತಿಂಗಳಿಗೆ ಕೇವಲ 15,000 ರೂ ಸಂಬಳ ಪಡೆಯುತ್ತಾರೆ.

ಹಾಗಾದರೆ, ಇವರು ಜೀವನ ನಿರ್ವಹಣೆಗೆ ಏನು ಮಾಡುತ್ತಾರೆ? ಕುನಾಲ್ ಶಾ ಕ್ರೆಡ್ ಸ್ಥಾಪನೆಗೆ ಮುನ್ನ ಫ್ರೀಚಾರ್ಜ್ ಎಂಬ ಕಂಪನಿ ಸ್ಥಾಪಿಸಿದ್ದರು. ಮೊಬೈಲ್ ಚಾರ್ಜ್ ಮಾಡಿದರೆ ಕ್ಯಾಷ್​ಬ್ಯಾಕ್ ಇತ್ಯಾದಿ ನೀಡುವ ಪ್ಲಾಟ್​ಫಾರ್ಮ್ ಇದು. ಕ್ರೆಡ್ ಹುಟ್ಟುಹಾಕುವ ಮುನ್ನ ಫ್ರೀಚಾರ್ಜ್ ಅನ್ನು ಇವರು ಮಾರಿದ್ದರು. ಅದರಿಂದ ಬಂದ ಹಣದಲ್ಲಿ ತಾನು ಜೀವನ ನಡೆಸುತ್ತೇನೆ ಎನ್ನುತ್ತಾರೆ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ