Bengaluru Land Price: ದುಬಾರಿ ಬೆಂಗಳೂರು; ಸರಾಸರಿ ಬೆಲೆ ಚದರಡಿಗೆ 5,900 ರೂ; ಏಷ್ಯಾ ಪೆಸಿಫಿಕ್ ನಗರಗಳಲ್ಲಿ ಬೆಂಗಳೂರಿಗೆ 8ನೇ ಸ್ಥಾನ
Annual Housing Price Growth Index: ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿ ನೈಟ್ ಫ್ರಾಂಕ್ ಏಷ್ಯಾ ಪೆಸಿಫಿಕ್ ವಾರ್ಷಿಕ ವಸತಿ ಬೆಲೆ ಹೆಚ್ಚಳ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಏಷ್ಯಾ ಪೆಸಿಫಿಕ್ ಪ್ರದೇಶದ ಆಯ್ದ 25 ನಗರಗಳ ಪೈಕಿ ಅತಿ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಬೆಂಗಳೂರು ಒಂದು. ನೈಟ್ ಫ್ರ್ಯಾಂಕ್ನ ಈ ಸೂಚ್ಯಂಕದಲ್ಲಿ ಟಾಪ್-10ನಲ್ಲಿ ಬೆಂಗಳೂರು ಮತ್ತು ಮುಂಬೈ ಇವೆ. ದೆಹಲಿ 11ನೇ ಸ್ಥಾನದಲ್ಲಿದೆ.
ಬೆಂಗಳೂರು, ಫೆಬ್ರುವರಿ 7: ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಗಣನೀಯ ಬೆಳವಣಿಗೆ ಮುಂದುವರಿಯುತ್ತಿದೆ. ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಬೆಂಗಳೂರಿನಲ್ಲಿ ವಸತಿ ಮಾರುಕಟ್ಟೆ (residential market) ಬೆಲೆ ಶೇ. 7.1ರಷ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿಯಾದ ನೈಟ್ ಫ್ರ್ಯಾಂಕ್ (Knight frank) ತನ್ನ ವರದಿಯಲ್ಲಿ ತಿಳಿಸಿದೆ. ಇದು ಸಿದ್ಧಪಡಿಸಿದ ವಾರ್ಷಿಕ ವಸತಿ ಬೆಲೆ ಹೆಚ್ಚಳ ಸೂಚ್ಯಂಕದ (Annual Housing Price Growth Index) ಪ್ರಕಾರ ಏಷ್ಯಾ ಪೆಸಿಫಿಕ್ನ ವಸತಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆ ಹೆಚ್ಚಳ ಕಂಡ ನಗರಗಳ ಪೈಕಿ ಬೆಂಗಳೂರು ಎಂಟನೇ ಸ್ಥಾನದಲ್ಲಿದೆ.
ನೈಟ್ ಫ್ರ್ಯಾಂಕ್ನ ಈ ವರದಿಯಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ 25 ನಗರಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಈ ಪೈಕಿ 21 ನಗರಗಳಲ್ಲಿ ವಸತಿ ಬೆಲೆ ಹೆಚ್ಚಳವಾಗಿದೆ. ಸಿಂಗಾಪುರ ಶೇ. 13.7ರಷ್ಟು ಬೆಲೆ ಹೆಚ್ಚಳ ಕಂಡು ನಂಬರ್ ಒನ್ ಸ್ಥಾನ ಪಡೆದಿದೆ.
ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರಗಳು ಟಾಪ್ 15ನಲ್ಲಿವೆ. ಬೆಂಗಳೂರು ಮತ್ತು ಮುಂಬೈ ಟಾಪ್-10ನಲ್ಲಿವೆ. ಬೆಂಗಳೂರು ಎಂಟನೇ ಸ್ಥಾನ, ಮುಂಬೈ ಒಂಬತ್ತನೇ ಸ್ಥಾನ ಹಾಗೂ ದೆಹಲಿ ಎನ್ಸಿಆರ್ ಹನ್ನೊಂದನೆ ಸ್ಥಾನ ಪಡೆದಿವೆ.
ಇದನ್ನೂ ಓದಿ: ಮುಂದಿನ 5-6 ವರ್ಷಗಳಲ್ಲಿ ಇಂಧನ ವಲಯದಲ್ಲಿ ಭಾರತ ₹ 5.5 ಲಕ್ಷ ಕೋಟಿ ಹೂಡಿಕೆ ಮಾಡಲಿದೆ: ಮೋದಿ
2023ರ ವರ್ಷದಲ್ಲಿ ಭಾರತದಲ್ಲಿ ಆಗಿರುವ ಒಟ್ಟಾರೆ ವಸತಿ ಮಾರಾಟದಲ್ಲಿ ಈ ಮೂರು ನಗರಗಳ ಪಾಲು ಶೇ. 60ರಷ್ಟು ಇದೆ ಎಂದು ನೈಟ್ ಫ್ರ್ಯಾಂಕ್ ವರದಿ ಹೆಳುತ್ತಿದೆ.
ಬೆಂಗಳೂರಿನಲ್ಲಿ ಹೊರವಲಯದಲ್ಲಿ ಹೆಚ್ಚು ಪ್ರಾಪರ್ಟಿ ಸೇಲ್
ಬೆಂಗಳೂರಿನಲ್ಲಿ ನಗರದ ಹೊರವಲಯದ ಪ್ರದೇಶಗಳಲ್ಲಿ ಹೆಚ್ಚು ಪ್ರಾಪರ್ಟಿ ಯೋಜನೆಗಳಾಗುತ್ತಿವೆ. 2023ರ ಜುಲೈನಿಂದ ಡಿಸೆಂಬರ್ವರೆಗಿನ ದ್ವಿತೀಯಾರ್ಧ ಭಾಗದಲ್ಲಿ 27,799 ಯೂನಿಟ್ಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 24ರಷ್ಟು ಹೆಚ್ಚಾಗಿದೆ. ಹೊರವಲಯದಲ್ಲಿ ವಸತಿ ಯೋಜನೆಯತ್ತ ಪ್ರಾಪರ್ಟಿ ಡೆವಲಪರ್ಗಳು ಗಮನ ಹರಿಸುತ್ತಿದ್ದಾರೆ. ಅಲ್ಲಿಯೇ ಹೆಚ್ಚು ಮಾರಾಟ ಆಗುತ್ತಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮಾರಾಟವಾಗಿರುವ ಅಷ್ಟೂ ಯೂನಿಟ್ಗಳಲ್ಲಿ ಸರಾಸರಿ ಬೆಲೆ ಚದರಡಿಗೆ ಬರೋಬ್ಬರಿ 5,900 ರೂ ಆಗಿದೆ. ಅಂದರೆ ಒಂದು ಫ್ಲಾಟ್ನ ಸರಾಸರಿ ಬೆಲೆ 70 ಲಕ್ಷ ರೂನಷ್ಟಿದೆ.
ಇದನ್ನೂ ಓದಿ: ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆಯಾ? ತೆರಿಗೆ ಹಂಚಿಕೆ ವಿಧಾನ ಹೇಗಿದೆ? ಇಲ್ಲಿದೆ ವಿವರ
ಮುಂಬೈನಲ್ಲಿ ಈ ಬೆಲೆ ಇನ್ನೂ ದುಬಾರಿ. ಅಲ್ಲಿ ಮಾರಾಟವಾದ ಫ್ಲ್ಯಾಟ್ಗಳ ಸರಾಸರಿ ಬೆಲೆ ಚದರಡಿಗೆ 7,883 ರೂ ಇದೆ. ಆದರೆ, ಬೆಂಗಳೂರು ಮತ್ತು ಮುಂಬೈಗೆ ಹೋಲಿಸಿದರೆ ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ವಸತಿ ಬೆಲೆ ಚದರಡಿಗೆ ಸರಾಸರಿ 4,579 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ