ಆರ್​ಬಿಐ ಡೆಡ್​ಲೈನ್ ದಾಟಿದರೂ ಕ್ರೆಡ್, ಫೋನ್​ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಿಲ್ಲ ಅಡ್ಡಿ

|

Updated on: Jul 02, 2024 | 12:46 PM

RBI deadline on BBPS for credit card bill payments: ಕ್ರೆಡಿಟ್ ಕಾರ್ಡ್ ಪಾವತಿಗಳು ಬಿಬಿಪಿಎಸ್ ಮುಖಾಂತರ ಆಗಬೇಕು ಎಂದು ಆರ್​ಬಿಐ ಜೂನ್ 30ರವರೆಗೆ ಗಡುವು ಕೊಟ್ಟಿತ್ತು. ಕ್ರೆಡ್, ಫೋನ್​ಪೇ ಮೊದಲಾದ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಪಾವತಿಗೆ ತೊಡಕಾಗುವ ನಿರೀಕ್ಷೆ ಇತ್ತು. ಆದರೆ, ಫೋನ್ ಪೇ, ಕ್ರೆಡ್ ಇತ್ಯಾದಿ ಅಪ್ಲಿಕೇಶನ್​ಗಳು ಎಲ್ಲಾ ಕ್ರೆಡಿಟ್ ಕಾರ್ಡ್​ಗಳ ಪಾವತಿಗೆ ಅವಕಾಶ ನೀಡುವುದನ್ನು ಮುಂದುವರಿಸಿವೆ. ಪೇಟಿಎಂ ಮಾತ್ರವೇ ಬಿಬಿಪಿಎಸ್​ ಅಳವಡಿಸದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಪಾವತಿಗೆ ಅನುಮತಿಸಿಲ್ಲ.

ಆರ್​ಬಿಐ ಡೆಡ್​ಲೈನ್ ದಾಟಿದರೂ ಕ್ರೆಡ್, ಫೋನ್​ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಿಲ್ಲ ಅಡ್ಡಿ
ಕ್ರೆಡಿಟ್ ಕಾರ್ಡ್
Follow us on

ನವದೆಹಲಿ, ಜುಲೈ 2: ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳು ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (ಬಿಬಿಪಿಎಸ್) ಮುಖಾಂತರವೇ ಆಗಬೇಕು ಎಂದು ಆರ್​ಬಿಐ ಅಪ್ಪಣೆ ಮಾಡಿದೆ. ಅದಕ್ಕೆ ಜೂನ್ 30 ಡೆಡ್​ಲೈನ್ ನೀಡಿತ್ತು. ಆದರೂ ಕೂಡ ಕ್ರೆಡ್, ಫೋನ್​ಪೇ ಮೊದಲಾದ ಕೆಲ ಥರ್ಡ್ ಪಾರ್ಟಿ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸಾಧ್ಯವಾಗುತ್ತಿದೆ. ಎಚ್​ಡಿಎಫ್​ಸಿ, ಎಕ್ಸಿಸ್ ಮೊದಲಾದ ಪ್ರಮುಖ ಬ್ಯಾಂಕುಗಳು ಬಿಬಿಪಿಎಸ್ ಸಿಸ್ಟಂ ಅನ್ನು ಅಳವಡಿಸಿಕೊಂಡಿಲ್ಲವಾದರೂ ಅವುಗಳ ಕ್ರೆಡಿಟ್ ಕಾರ್ಡ್ ಪಾವತಿಗೆ ಬೇರೆ ಪಾವತಿ ವಿಧಾನಗಳಾದ ಐಎಂಪಿಎಸ್, ನೆಫ್ಟ್, ಯುಪಿಐ ಇತ್ಯಾದಿಯನ್ನು ಫೋನ್ ಪೇ, ಕ್ರೆಡ್ ಬಳಸುತ್ತಿರುವುದು ತಿಳಿದುಬಂದಿದೆ.

ಕ್ರೆಡಿಟ್ ಕಾರ್ಡ್ ಪಾವತಿಗೆ ಯಾಕೆ ಬೇಕು ಬಿಬಿಪಿಎಸ್?

ಕ್ರೆಡಿಟ್ ಕಾರ್ಡ್ ಪಾವತಿಗೆ ಒಂದು ಕೇಂದ್ರೀಕೃತ ಪಾವತಿ ವ್ಯವಸ್ಥೆ ತರುವ ಮೂಲಕ ಅಕ್ರಮ ವಹಿವಾಟುಗಳನ್ನು ನಿಯಂತ್ರಿಸುವುದು ಮತ್ತು ಅಂಥ ವಹಿವಾಟುಗಳ ಮೇಲೆ ಹೆಚ್ಚು ಸಮರ್ಥವಾಗಿ ನಿಗಾ ಇಡಲು ಸಾಧ್ಯವಾಗುತ್ತದೆ. ಹೀಗಾಗಿ, ಆರ್​ಬಿಐ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ ಅನ್ನು ಜಾರಿಗೊಳಿಸಲು ಮುಂದಾಗಿದೆ.

ಆರ್​ಬಿಐ ನಿರ್ದೇಶನಕ್ಕೆ ಪೇಟಿಎಂ ಬದ್ಧ..!

ಭಾರತ್ ಬಿಲ್ ಪೇ ಸರ್ವಿಸ್ ಅನ್ನು ಅಳವಡಿಸಿಕೊಂಡ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಬೇಕು ಎನ್ನುವ ಆರ್​ಬಿಐ ನಿರ್ದೇಶನವನ್ನು ಚಾಚೂತಪ್ಪದೇ ಪಾಲಿಸುತ್ತಿರುವ ಥರ್ಡ್ ಪಾರ್ಟಿ ಆ್ಯಪ್ ಎಂದರೆ ಪೇಟಿಎಂ ಮಾತ್ರವೇ. ಎಚ್​ಡಿಎಫ್​ಸಿ, ಎಕ್ಸಿಸ್ ಇತ್ಯಾದಿ ಕ್ರೆಡಿಟ್ ಕಾರ್ಡ್​ಗಳ ಪಾವತಿಗೆ ಪೇಟಿಎಂ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಅನುಮತಿಸಿಲ್ಲ. ಆದರೆ, ಕ್ರೆಡ್, ಫೋನ್ ಪೇ ಇತ್ಯಾದಿ ಬೇರೆ ಪ್ಲಾಟ್​ಫಾರ್ಮ್​ಗಳು ಪರ್ಯಾಯ ವಿಧಾನಗಳ ಮೂಲಕ ಪಾವತಿಗೆ ಅವಕಾಶ ಕೊಡುತ್ತಿವೆ.

ಇದನ್ನೂ ಓದಿ: ಜುಲೈ 1ರಿಂದ ಫೋನ್ ಪೆ, ಕ್ರೆಡ್​ನಲ್ಲಿ ಕೆಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಗಲ್ಲ; ಕಾರಣ ಇದು…

ಒಂದೊಂದಾಗಿ ಬಿಬಿಪಿಎಸ್ ಅಳವಡಿಸುತ್ತಿರುವ ಬ್ಯಾಂಕುಗಳು…

ನಿನ್ನೆ ಸೋಮವಾರ ಐಸಿಐಸಿಐ ಬ್ಯಾಂಕ್ ಬಿಬಿಪಿಎಸ್ ಅನ್ನು ಆ್ಯಕ್ಟಿವೇಟ್ ಮಾಡಿದೆ. ಇದರೊಂದಿಗೆ ಈ ಸಿಸ್ಟಂ ಅನ್ನು ಅಳವಡಿಸಿಕೊಂಡ ಬ್ಯಾಂಕುಗಳ ಸಂಖ್ಯೆ 12ಕ್ಕೆ ಏರಿದೆ. ಎಸ್​ಬಿಐ ಕಾರ್ಡ್, ಬ್ಯಾಂಕ್ ಆಫ್ ಬರೋಡಾ, ಇಂಡಸ್ ಇಂಡ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮೊದಲಾದ ಬ್ಯಾಂಕುಗಳು ಈ ಪಟ್ಟಿಯಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ