ಕೃಷಿ ಎಂಬುದು ಬಹಳ ಅನಿಶ್ಚಿತ ಆದಾಯ ತರುವ ಕೆಲಸ. ವರ್ಷವಿಡೀ ದುಡಿದು ಬೆಳೆಸಿದ ಬೆಳೆಗಳು ಸರಿಯಾದ ರೀತಿಯಲ್ಲಿ ಫಸಲು ಕೊಟ್ಟು, ಅದಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕರೆ ರೈತನ ಪರಮ ಅದೃಷ್ಟ. ಹೆಚ್ಚಿನ ಸಲ ಹಾಗಾಗುವುದಿಲ್ಲ. ಹವಾಮಾನ ವೈಪರೀತ್ಯ ಇತ್ಯಾದಿ ನಾನಾ ಕಾರಣಗಳಿಗೆ ಬೆಳೆಗಳು ಹಾಳಾಗಬಹುದು, ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ನೀಡದೇ ಹೋಗಬಹುದು. ಆ ಬೆಳೆ ಬೆಳೆಯಲು ರೈತ ಹಾಕಿದ ಬಂಡವಾಳ, ಶ್ರಮ ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಇಂಥ ಹೊತ್ತಿನಲ್ಲಿ ರೈತರಿಗೆ ತುಸು ಆಸರೆಯಾಗಬಹುದಾದದ್ದು ಕ್ರಾಪ್ ಇನ್ಷೂರೆನ್ಸ್ (crop insurance), ಅಥವಾ ಬೆಳೆ ವಿಮೆ. ರೈತರ ಬೆಳೆಗಳು ಕೆಲ ನಿರ್ದಿಷ್ಟ ಕಾರಣಗಳಿಗೆ ಹಾಳಾದಾಗ ಈ ಬೆಳೆ ವಿಮೆ ನೆರವಿಗೆ ಬರುತ್ತದೆ. ರೈತರ ನಷ್ಟವನ್ನು ಭರಿಸಿಕೊಡುತ್ತದೆ. ಅಂಥದ್ದೊಂದು ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಅದುವೇ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಥವಾ ಪಿಎಂಎಫ್ಬಿವೈ ಸ್ಕೀಮ್.
ಕೇಂದ್ರ ಸರ್ಕಾರ 2016ರಲ್ಲಿ ರೈತರ ಬೆಳೆಗಳಿಗೆ ವಿಮಾ ರಕ್ಷಣೆ ನೀಡಲು ಈ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿತು. ಈ ಕ್ರಾಪ್ ಇನ್ಷೂರೆನ್ಸ್ ಪಾಲಿಸಿಗೆ ಅರ್ಜಿ ಸಲ್ಲಿಸುವುದು, ಪರಿಹಾರ ಪಡೆಯುವುದು ಎಲ್ಲವೂ ಸುಲಭದ ಕೆಲಸ. ಆನ್ಲೈನ್ ಮೂಲಕ ವ್ಯವಹರಿಸಬಹುದು, ಅಥವಾ ಸಮೀಪದ ಕೃಷಿ ಕೇಂದ್ರಕ್ಕೆ ಹೋಗಿಯೂ ವಿಮಾ ಪಾಲಿಸಿ ಮಾಡಿಸಬಹುದು.
ರೈತರು ಯಾವುದಾದರೂ ಬ್ಯಾಂಕ್ನಿಂದ ಬೆಳೆ ಸಾಲ ಪಡೆದುಕೊಂಡಿದ್ದರೆ, ಆಗ ಪಿಎಂ ಫಸಲ್ ಬಿಮಾ ಯೋಜನೆ ಅಡಿ ಕ್ರಾಪ್ ಇನ್ಷೂರೆನ್ಸ್ ಅನ್ವಯ ಆಗುತ್ತದೆ. ನಿಮಗೆ ನೀಡಲಾಗುವ ಸಾಲದಲ್ಲಿ ಬೆಳೆ ವಿಮೆಯ ಪ್ರೀಮಿಯಮ್ ಅನ್ನು ಮುರಿದುಕೊಂಡಿರಲಾಗುತ್ತದೆ. ಹೀಗಾಗಿ, ಬೆಳೆ ಸಾಲ ಪಡೆದ ರೈತರು ಪ್ರತ್ಯೇಕವಾಗಿ ಬೆಳೆ ವಿಮೆ ಮಾಡಿಸುವ ಅಗತ್ಯ ಇರುವುದಿಲ್ಲ.
ಬ್ಯಾಂಕ್ಗಳಲ್ಲಿ, ಸಮೀಪದ ಸಿಎಸ್ಸಿ ಸೆಂಟರ್ ಅಥವಾ ಕೃಷಿ ಕೇಂದ್ರ, ಅಥವಾ ಅಧಿಕೃತ ವಿಮಾ ಏಜೆಂಟ್ ಭೇಟಿ ಮಾಡಿ ಬೆಳೆ ವಿಮೆಗೆ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಬಹುದು.
ಜಮೀನಿನ ಆರ್ಟಿಸಿ (ಪಹಣಿ), ನಿಮ್ಮ ಆಧಾರ್ ಆರ್ಡ್ ಅಥವಾ ಇನ್ಯಾವುದಾದರೂ ಐಡಿ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರ ಇವನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಬೆಳೆ ವಿಮಾ ಮೊತ್ತದ ಶೇ. 1.5ರಿಂದ 5ರಷ್ಟು ಹಣವನ್ನು ರೈತರು ತಮ್ಮ ಕೈಯಿಂದ ನೀಡಬೇಕಾಗುತ್ತದೆ.
ಪಿಎಂ ಫಸಲ್ ಬಿಮಾ ಯೋಜನೆಗೆ ಪ್ರತ್ಯೇಕ ವೆಬ್ಸೈಟ್ ರೂಪಿಸಲಾಗಿದೆ. ಅದರ ಲಿಂಕ್ ಇಲ್ಲಿದೆ: pmfby.gov.in/
ಇದರಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಇನ್ಷೂರೆನ್ಸ್ ಪ್ರೀಮಿಯಮ್ ಕ್ಯಾಲ್ಕುಲೇಟರ್, ಹವಾಮಾನ ಮಾಹಿತಿ, ಬೆಳೆ ಆರೋಗ್ಯ ಮೇಲ್ವಿಚಾರಣೆ ಇತ್ಯಾದಿ ಸಾಕಷ್ಟು ಸೌಲಭ್ಯಗಳಿವೆ. ಇದರಲ್ಲಿ ಎಲ್ಲಾ ಕಾರ್ಯಗಳಿಗೂ ಅಗತ್ಯವಾದ ಮಾರ್ಗಸೂಚಿಗಳನ್ನೂ ನೋಡಬಹುದು.
ರೈತರು ಬೆಳೆ ಸಾಲಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ, ವೆಬ್ಸೈಟ್ನ ಮುಖ್ಯಪುಟದಲ್ಲಿ ಸಿಗುವ ವಿವಿಧ ಟ್ಯಾಬ್ಗಳಲ್ಲಿ ಮೊದಲ ಟ್ಯಾಬ್ ಆದ ಫಾರ್ಮರ್ ಕಾರ್ನರ್ ಅನ್ನು ಕ್ಲಿಕ್ ಮಾಡಬೇಕು.
ಅಲ್ಲಿ ಲಾಗಿನ್ ಫಾರ್ ಫಾರ್ಮರ್ ಅನ್ನು ಕ್ಲಿಕ್ ಮಾಡಿ ನೊಂದಣಿ ಪ್ರಕ್ರಿಯೆಗೆ ಮುಂದಾಗಬೇಕು. ನೊಂದಣಿ ಆಗಿದ್ದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ, ಒಟಿಪಿ ಪಡೆದು ಲಾಗಿನ್ ಆಗಬೇಕು. ನೊಂದಣಿ ಆಗಿರದೇ ಇದ್ದರೆ ನೊಂದಾಯಿಸಿಕೊಳ್ಳಬಹುದು. ಆದರೆ, ಕರ್ನಾಟಕ ಮತ್ತು ಗುಜರಾತ್ ರೈತರು ಈ ವೆಬ್ಸೈಟ್ ಮೂಲಕ ಬೆಳೆ ವಿಮೆ ಮಾಡಿಸಲು ಅವಕಾಶ ಇಲ್ಲ. ಈ ರಾಜ್ಯಗಳು ಬೆಳೆ ವಿಮೆಗೆ ಪ್ರತ್ಯೇಕ ಪೋರ್ಟಲ್ ಮಾಡಿವೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಒಂದೇ ಕ್ಲೇಮ್ಗೆ ಬಳಸಬಹುದಾ? ಇಲ್ಲಿದೆ ಮಾಹಿತಿ
ಕರ್ನಾಟಕ ಸರ್ಕಾರವು ಆನ್ಲೈನ್ನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಪೋರ್ಟಲ್ ರೂಪಿಸಿದೆ. ಅದರ ಲಿಂಕ್ ಇಲ್ಲಿದೆ: www.samrakshane.karnataka.gov.in/CropHome.aspx
ಇಲ್ಲಿ ವರ್ಷ ಮತ್ತು ಯಾವ ಋತುವಿನ ಬೆಳೆಗೆ ವಿಮೆ ಎಂಬುದನ್ನು ಆಯ್ದುಕೊಂಡು ಮುಂದುವರಿಯಬೇಕು.
ಆನ್ಲೈನ್ಗಿಂತ ಆಫ್ಲೈನ್ನಲ್ಲಿ ಬೆಳೆ ವಿಮೆ ಪಡೆಯುವುದು ಹೆಚ್ಚು ಸೂಕ್ತ. ಸಮೀಪದ ಬ್ಯಾಂಕ್ ಅಥವಾ ಕೃಷಿ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸುವುದು ಉತ್ತಮ.
ರಾಜ್ಯ ಸರ್ಕಾರವು ಬೆಳೆ ವಿಮೆಗಾಗಿ ವಿವಿಧ ಇನ್ಷೂರೆನ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಸರ್ಕಾರಿ ಇನ್ಷೂರೆನ್ಸ್ ಕಂಪನಿಗಳು, ಖಾಸಗಿ ಇನ್ಷೂರೆನ್ಸ್ ಕಂಪನಿಗಳೂ ಸೇರಿವೆ. ಅಗ್ರಿಕಲ್ಚರ್ ಇನ್ಷೂರೆನ್ಸ್ ಕಂಪನಿಯಿಂದ ಹಿಡಿದು ಟಾಟಾ ಎಐಜಿವರೆಗೆ ವಿವಿಧ ಕಂಪನಿಗಳಿವೆ. ಒಂದೊಂದು ಜಿಲ್ಲೆಗೂ ಒಂದು ನಿಗದಿತ ಇನ್ಷೂರೆನ್ಸ್ ಕಂಪನಿ ಇರುತ್ತದೆ.
ಇದನ್ನೂ ಓದಿ: ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?
ಉದಾಹರಣೆಗೆ, ಬೆಳಗಾವಿ ಜಿಲ್ಲೆ ತೆಗೆದುಕೊಂಡರೆ, ಅಲ್ಲಿನ ರೈತರಿಗೆ ಪಿಎಂ ಫಸಲ್ ವಿಮಾ ಯೋಜನೆ ಅಡಿ ಬೆಳೆ ವಿಮೆಯನ್ನು ಒದಗಿಸುವುದು ಯೂನಿವರ್ಸಲ್ ಸೋಂಪೋ ಜಿಐಸಿ ಎನ್ನುವ ವಿಮಾ ಕಂಪನಿ. ಹಾಗೆಯೇ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಾದ ಡಬ್ಲ್ಯುಬಿಸಿಐಎಸ್ ವಿಮೆಯನ್ನು ಬೆಳಗಾವಿಯಲ್ಲಿ ಟಾಟಾ ಎಐಜಿಯವರು ನೀಡುತ್ತಾರೆ.
ರಾಜ್ಯ ಸರ್ಕಾರವು ಬಿಡ್ ಮೂಲಕ ಪ್ರತಿಯೊಂದು ಜಿಲ್ಲೆಗೂ ಇನ್ಷೂರೆನ್ಸ್ ಕಂಪನಿಯನ್ನು ಆಯ್ದುಕೊಳ್ಳುತ್ತದೆ. ಅತಿ ಕಡಿಮೆ ಪ್ರೀಮಿಯಮ್ ಕೋಟ್ ಮಾಡುವ ವಿಮಾ ಕಂಪನಿಗೆ ಅವಕಾಶ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Fri, 4 April 25