Cryptocurrency: ಬಿಟ್​ಕಾಯಿನ್ ಮೌಲ್ಯ 24 ಗಂಟೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿ 40 ಸಾವಿರ ಯುಎಸ್​ಡಿ ಸಮೀಪ ವಹಿವಾಟು

| Updated By: Srinivas Mata

Updated on: Jul 26, 2021 | 11:24 AM

ಕಳೆದ 24 ಗಂಟೆಯಲ್ಲಿ ಕ್ರಿಪ್ಟೋಕರೆನ್ಸಿ ಬಿಟ್​ ಕಾಯಿನ್ ಶೇ 15ರಷ್ಟು ಏರಿಕೆಯನ್ನು ಕಂಡು, 40 ಸಾವಿರ ಯುಎಸ್​ಡಿ ಸಮೀಪ ವಹಿವಾಟು ನಡೆಸುತ್ತಿದೆ. ಇಳಿಯುತ್ತಾ ಸಾಗಿದ್ದ ಕ್ರಿಪ್ಟೋಕರೆನ್ಸಿಗಳು ಮತ್ತೆ ಚೇತರಿಕೆ ಹಾದಿಗೆ ಮರಳಿವೆ.

Cryptocurrency: ಬಿಟ್​ಕಾಯಿನ್ ಮೌಲ್ಯ 24 ಗಂಟೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿ 40 ಸಾವಿರ ಯುಎಸ್​ಡಿ ಸಮೀಪ ವಹಿವಾಟು
ಸಾಂದರ್ಭಿಕ ಚಿತ್ರ
Follow us on

ಆರ್ಕ್ ಇನ್ವೆಸ್ಟ್​ಮೆಂಟ್ ಮ್ಯಾನೇಜ್​ಮೆಂಟ್ ಎಲ್ಎಲ್​ಸಿಯ ಕ್ಯಾಥಿ ವುಡ್ ಮತ್ತು ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಹೇಳಿಕೆ ನಂತರ ಕ್ರಿಪ್ಟೋಕರೆನ್ಸಿಗಳು (Cryptocurrency) ಗಳಿಕೆ ಮುಂದುವರಿಸಿವೆ. ಅದರಲ್ಲೂ ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್​ ಕಾಯಿನ್ (Bitcoin) 40,000 ಯುಎಸ್​ಡಿ ಮಟ್ಟಕ್ಕೆ ಸಮೀಪದಲ್ಲಿದೆ. ಕಾಯಿನ್​ಡೆಸ್ಕ್ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಬಿಟ್​ಕಾಯಿನ್ ದರದಲ್ಲಿ ಶೇ 15ರಷ್ಟು ಹೆಚ್ಚಳವಾಗಿ 39,544 ಅಮೆರಿಕನ್ ಡಾಲರ್ ಮುಟ್ಟಿದೆ. 50 ದಿನಗಳ ಸರಾಸರಿ ದರವನ್ನು ವಾರಾಂತ್ಯದಲ್ಲಿ ಬಿಟ್​ ಕಾಯಿನ್ ಮೀರಿದೆ. ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿಯಾದ ಈಥರ್ ಕೂಡ ಶೇ 7ರಷ್ಟು ಏರಿಕೆ ಕಂಡು 2,330 ಅಮೆರಿಕನ್ ಡಾಲರ್ ಆಗಿದೆ. Dogecoin ಶೇ 9ರಷ್ಟು ಮೇಲೇರಿ 0.20 ಡಾಲರ್ ಮಟ್ಟದಲ್ಲಿದೆ. ಇತರ ಡಿಜಿಟಲ್ ಕರೆನ್ಸಿಗಳಾದ XRP, ಕಾರ್ಡಾನೋ, ಯುನಿಸ್ವಾಪ್, ಲೈಟ್​ಕಾಯಿನ್​ ಕೂಡ ಕಳೆದ 24 ಗಂಟೆಯಲ್ಲಿ ಶೇ 8ಕ್ಕಿಂತ ಹೆಚ್ಚು ಏರಿಕೆ ಆಗಿವೆ.

ಕಳೆದ ವಾರ ಬಿಟ್ ಕಾಯಿನ್ 30,000 ಯುಎಸ್​ಡಿಗಿಂತ ಕೆಳಗೆ ಬಿದ್ದಾಗ ಇನ್ನಷ್ಟು ಕುಸಿಯುವ ಆತಂಕ ಇತ್ತು. ಆ ಮಟ್ಟದಿಂದ ಕೆಳಗೆ ಜಾರಿದಲ್ಲಿ ಇನ್ನಷ್ಟು ಕುಸಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆದರೆ ಕಳೆದ ವಾರ “ದ ಬಿ ವರ್ಡ್” ಸಮಾವೇಶದಲ್ಲಿ ಎಲಾನ್ ಮಸ್ಕ್ ಮಾತನಾಡಿ, ಬಿಟ್​ ಕಾಯಿನ್ ಯಶಸ್ವಿ ಆಗಬೇಕು ಮತ್ತು ತಮ್ಮ ಒಡೆತನದ ಸ್ಪೇಸ್ ಎಕ್ಸ್​ ಕಂಪೆನಿ ಕೆಲವನ್ನು ಹೊಂದಿದೆ ಎಂದಿದ್ದರು. ಕ್ಯಾಥಿ ವುಡ್ ಮಾತನಾಡಿ, ಕಾರ್ಪೊರೇಷನ್​ಗಳು ತಮ್ಮ ಬ್ಯಾಲೆನ್ಸ್​ಶೀಟ್​ಗಳಿಗೆ ಬಿಟ್​ಕಾಯಿನ್ ಸೇರ್ಪಡೆ ಮಾಡಿಕೊಳ್ಳಬೇಕು ಎಂದಿದ್ದರು. ಇನ್ನು ಸ್ಕ್ವೇರ್ ಇಂಕ್. ಸಿಇಒ ಜಾಕ್ ಡೋರ್ಸೆ ಮಾತನಾಡಿ, ಕಾಯಿನ್​ಗೆ ಎಂಥ ಕ್ಲಿಷ್ಟ ಸನ್ನಿವೇಶದಲ್ಲೂ ತಡೆದುಕೊಳ್ಳುವ ಸಾಮರ್ಥ್ಯ ಇದೆ ಎಂದಿದ್ದರು.

ಬಿಟ್​ಕಾಯಿನ್ ಬಳಸಿ ಖರೀದಿ ಮಾಡುವುದನ್ನು ಟೆಸ್ಲಾದಿಂದ ಮೇ ತಿಂಗಳಲ್ಲಿ ಅಮಾನತು ಮಾಡಿದೆ. ಮೈನಿಂಗ್​ನಲ್ಲಿ ಫಾಸಿಲ್ ಫ್ಯೂಯೆಲ್ ಬಳಕೆ ಮಾಡುವ ಆತಂಕದಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಇದರಿಂದಾಗಿ ಡಿಜಿಟಲ್ ಕರೆನ್ಸಿ ಇಳಿಕೆಗೆ ಕಾರಣವಾಗಿದೆ. ಮೇ ತಿಂಗಳ ಮಧ್ಯಭಾಗದಿಂದ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ 1.3 ಲಕ್ಷ ಕೋಟಿ ಅಮೆರಿಕನ್ ಡಾಲರ್ ಕೊಚ್ಚಿ ಹೋಗಿತ್ತು. ಚೀನಾ, ಯುರೋಪ್ ಮತ್ತು ಯು.ಎಸ್​.ನಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ನಿಯಂತ್ರಕ ಸಂಸ್ಥೆಗಳಿಂದ ಕೆಲವು ನಿರ್ಬಂಧಗಳನ್ನು ಹೆಚ್ಚು ಮಾಡಿರುವುದು ಮತ್ತಿತರ ಕಾರಣಗಳು ಪರಿಣಾಮ ಬೀರಿವೆ.

ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿ ಮಾರುಕಟ್ಟೆ 24 ಗಂಟೆಯಲ್ಲಿ 9000 ಕೋಟಿ ಯುಎಸ್​ಡಿ ಉಡೀಸ್; ಬಿಟ್​ಕಾಯಿನ್ 30 ಸಾವಿರ ಯುಎಸ್​ಡಿಗೂ ಕೆಳಗೆ

(Cryptocurrency Bitcoin Increased By 15 Percent In 24 Hours And Trading Near 40000 USD)

Published On - 11:23 am, Mon, 26 July 21