Cryptocurrency: ಕ್ರಿಪ್ಟೋಕರೆನ್ಸಿ ಮಾರುಕಟ್ಟೆ 24 ಗಂಟೆಯಲ್ಲಿ 9000 ಕೋಟಿ ಯುಎಸ್ಡಿ ಉಡೀಸ್; ಬಿಟ್ಕಾಯಿನ್ 30 ಸಾವಿರ ಯುಎಸ್ಡಿಗೂ ಕೆಳಗೆ
ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಕಲೆದ 24 ಗಂಟೆಯಲ್ಲಿ 90 ಬಿಲಿಯನ್ ಯುಎಸ್ಡಿ ಕೊಚ್ಚಿಹೋಗಿದೆ. ಬಿಟ್ಕಾಯಿನ್ 30 ಸಾವಿರ ಯುಎಸ್ಡಿಗಿಂತ ಕೆಳಗೆ ಇಳಿದಿದೆ.

ಕ್ರಿಪ್ಟೋಕರೆನ್ಸಿ ಬಿಟ್ಕಾಯಿನ್ ಮೌಲ್ಯವು ಈ ವರ್ಷದ ಜೂನ್ 22ರ ನಂತರ 30,000 ಅಮೆರಿಕನ್ ಡಾಲರ್ಗಿಂತೆ ಕೆಳಗೆ ಇಳಿಯಿತು. 24 ಗಂಟೆಯ ಅವಧಿಯಲ್ಲಿ ಸಂಪೂರ್ಣ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ 9000 ಕೋಟಿ ಅಮೆರಿಕನ್ ಡಾಲರ್ ಕೊಚ್ಚಿ ಹೋಗಿದೆ. ಇದು ಮಂಗಳವಾರ ಬೆಳಗ್ಗೆ ಭಾರತೀಯ ಕಾಲಮಾನ 8.54ಕ್ಕೆ ಅನ್ವಯ ಆಗವಂತೆ ಎಂದು ಕಾಯಿನ್ಮಾರ್ಕೆಟ್ಕ್ಯಾಪ್.ಕಾಮ್ ದತ್ತಾಂಶದಿಂದ ತಿಳಿದುಬಂದಿದೆ. ಇತರ ಪ್ರಮುಖ ಕಾಯಿನ್ಗಳು ಸಹ ಕೆಳಗೆ ಬಿದ್ದಿವೆ. ಎಥೆರಿಯಂ 1824 ಡಾಲರ್ನಿಂದ 1730 ಡಾಲರ್ಗೆ ಕುಸಿದಿದೆ. ಬಿನಾನ್ಸ್ ಕಾಯಿನ್ 299 ಡಾಲರ್ನಿಂದ 261ಕ್ಕೆ ಕುಸಿದಿದೆ. ಮತ್ತು XRP 58 ಸೆಂಟ್ಸ್ನಿಂದ 52 ಸೆಂಟ್ಸ್ಗೆ ಇಳಿಕೆ ಆಗಿದೆ. ಈ ವರದಿಯನ್ನು ಮಾಡುವ ಹೊತ್ತಿಗೆ ಬಿಟ್ಕಾಯಿನ್ 29,659.6 ಡಾಲರ್ನೊಂದಿಗೆ ವಹಿವಾಟು ನಡೆಸುತ್ತಿತ್ತು.
ಏಪ್ರಿಲ್ 14, 2021ರಂದು ಬಿಟ್ಕಾಯಿನ್ ಗರಿಷ್ಠ ಮಟ್ಟವಾದ 64,234 ಡಾಲರ್ ಇತ್ತು. ಅಲ್ಲಿಂದ ಶೇ 54ರಷ್ಟು ಕುಸಿತ ಕಂಡಿದೆ. ಮುಖ್ಯವಾಗಿ ಚೀನಾದಲ್ಲಿ ಬಿಟ್ಕಾಯಿನ್ ಬಳಕೆ, ಮೈನಿಂಗ್ ವಿರುದ್ಧ ಕಾರ್ಯಾಚರಣೆಗೆ ಇಳಿದ ಮೇಲೆ ಈ ಬೆಳವಣಿಗೆ ಆಗಿದೆ. ಇನ್ನೂ ಕಾರಣಗಳೇನು ಅಂತ ನೋಡುವುದಾದರೆ ಅಮೆರಿಕ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಮಾರಾಟ ಮಾಡಲಾಗಿದೆ. ಸಮೀಕ್ಷೆಯ ಪ್ರಕಾರ, ಬಿಟ್ಕಾಯಿನ್ ಮೌಲ್ಯವು 25,112 ಡಾಲರ್ಗೆ ಕುಸಿಯಬಹುದು ಎನ್ನಲಾಗುತ್ತಿದೆ. ಆದರೆ 2030ರ ಡಿಸೆಂಬರ್ ಹೊತ್ತಿಗೆ 4,287,591 ಡಾಲರ್ ಅನ್ನು ತಲುಪಬಹುದು ಎಂಬ ಅಂದಾಜು ಮಾಡಲಾಗಿದೆ. 2021ರ ಕೊನೆಗೆ 66,284 ಡಾಲರ್ ತಲುಪುವ ನಿರೀಕ್ಷೆ ಇದೆ.
ಡಿಜಿಟಲ್ ಕರೆನ್ಸಿ ಎಂಬುದು ದಿಢೀರನೇ ಕಾಣಿಸಿಕೊಂಡಿರುವ ಟ್ರೆಂಡ್. ಈ ಪೈಕಿ ಕೆಲವು ಕ್ರಿಪ್ಟೋಕರೆನ್ಸಿಗಳನ್ನು ಕಂಪೆನಿಗಳು ತಮ್ಮ ವಸ್ತುಗಳಿಗೆ ಬದಲಿಯಾಗಿ ಖರೀದಿ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ, ಎಲ್ ಸಲ್ವಡಾರ್ ದೇಶದಲ್ಲಿ ಬಿಟ್ಕಾಯಿನ್ಗೆ ಅಧಿಕೃತವಾಗಿ ಕಾನೂನು ಮಾನ್ಯತೆ ನೀಡಲಾಗಿದೆ. ಹಾಗೆ ನೋಡಿದರೆ ಇಂಥದ್ದೊಂದು ಮಹತ್ವದ ಹೆಜ್ಜೆ ಇಟ್ಟು ಮೊದಲ ದೇಶ ಕೂಡ ಎಲ್ ಸಲ್ವಡಾರ್ ಆಗಿದೆ. ಆದರೆ ಭಾರತದಲ್ಲಿ ಡಿಜಿಟಲ್ ಕರೆನ್ಸಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನು ತರುವುದಕ್ಕೆ ಚಿಂತನೆ ನಡೆದಿದೆ.
ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ ಬಗ್ಗೆ ಸುಳಿವು ನೀಡಿದ ಹಣಕಾಸು ಸಚಿವೆ
(Crypto Currency Market Capital 90 Billion USD Wiped Out In 24 Hours )