Elon Musk: ಭಾರತದಲ್ಲಿ ಟೆಸ್ಲಾ ಕಾರು ಯಾವಾಗ ಬಿಡುಗಡೆ ಎಂದಿದ್ದಕ್ಕೆ ಎಲಾನ್ ಮಸ್ಕ್ ನೀಡಿದ ಉತ್ತರ ಏನು ಗೊತ್ತಾ?
ಭಾರತದಲ್ಲಿ ಟೆಸ್ಲಾ ಕಂಪೆನಿಯ ಎಲೆಕ್ಟ್ರಿಕ್ ಕಾರು ಯಾವಾಗ ಬಿಡುಗಡೆ ಎಂಬ ಪ್ರಶ್ನೆಗೆ ಉದ್ಯಮಿ ಎಲಾನ್ ಮಸ್ಕ್ ಉತ್ತರ ನೀಡಿದ್ದಾರೆ. ಯಾವುದಕ್ಕಾಗಿ ಅವರು ತಡ ಮಾಡುತ್ತಿದ್ದಾರೆ ಎಂಬುದಕ್ಕೆ ಸಮಜಾಯಿಷಿ ನೀಡಿದ್ದಾರೆ.
“ಭಾರತದಲ್ಲಿ ಟೆಸ್ಲಾ ಕಂಪೆನಿಯ ಕಾರನ್ನು ಬಿಡುಗಡೆ ಮಾಡಿ” ಎಂಬ ಮನವಿಗೆ ಉದ್ಯಮಿ ಎಲಾನ್ ಮಸ್ಕ್ ಏನು ಉತ್ತರ ನೀಡಿದ್ದಾರೆ ಗೊತ್ತಾ? “ಕಂಪೆನಿಯು ಭಾರತದಲ್ಲಿ ಕಾರು ಮಾರಾಟ ಮಾಡಲು ಬಯಸುತ್ತದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಆಮದು ಸುಂಕ ಭಾರತದಲ್ಲಿದೆ,” ಎಂದಿದ್ದಾರೆ. ಭಾರತದಲ್ಲಿ ಟೆಸ್ಲಾ ಕಾರು ಮಾರಾಟ ಆರಂಭ ಮಾಡುವಂತೆ ಯೂಟ್ಯೂಬರ್ ಮದನ್ ಗೌರಿ ಅವರು ಟ್ವೀಟ್ನಲ್ಲಿ ಮಾಡಿದ ಮನವಿಗೆ ಈ ರೀತಿ ಉತ್ತರ ನೀಡಿದ್ದಾರೆ. “ನಾವು ಅದನ್ನು ಬಯಸುತ್ತೇವೆ, ಆದರೆ ಆಮದು ಸುಂಕಗಳು ವಿಶ್ವದಲ್ಲೇ ಯಾವುದೇ ದೊಡ್ಡ ದೇಶಕ್ಕಿಂತ ಅತಿ ಹೆಚ್ಚಿದೆ. ಇದಕ್ಕಿಂತ ಹೆಚ್ಚಾಗಿ ಶುದ್ಧ ಎನರ್ಜಿ ವಾಹನಗಳನ್ನೂ ಡೀಸೆಲ್ ಅಥವಾ ಪೆಟ್ರೋಲ್ ರೀತಿಯಲ್ಲೇ ಪರಿಗಣಿಸುತ್ತಾರೆ. ಅವು ಭಾರತದ ಹವಾಮಾನ ಗುರಿಗೆ ಸಂಪೂರ್ಣವಾಗಿ ಸರಿಹೊಂದುವುದಿಲ್ಲ,” ಎಂದು ಟ್ವೀಟ್ ಪ್ರತಿಕ್ರಿಯೆಯಲ್ಲಿ ಮಸ್ಕ್ ತಿಳಿಸಿದ್ದಾರೆ.
ನಾವು ಅದನ್ನು ಮಾಡಲು ಬಯಸುತ್ತೇವೆ. ಆದರೆ ವಿಶ್ವದ ಯಾವುದೇ ದೊಡ್ಡ ದೇಶದಲ್ಲಿ ಇರುವ ಆಮದು ಸುಂಕಕ್ಕಿಂತ ಹೆಚ್ಚಿದೆ!
ಎಲ್ಲಕ್ಕಿಂತ ಹೆಚ್ಚಾಗಿ, ಕ್ಲೀನ್ ಎನರ್ಜಿ ವಾಹನಗಳನ್ನು ಡೀಸೆಲ್ ಅಥವಾ ಪೆಟ್ರೋಲ್ ರೀತಿಯಲ್ಲೇ ನೋಡುತ್ತಾರೆ. ಇದು ಸಂಪೂರ್ಣವಾಗಿ ಭಾರತದ ಹವಾಮಾನ ಗುರಿಗೆ ಸಂಪೂರ್ಣ ಹೊಂದಾಣಿಕೆ ಆಗಲ್ಲ. -ಎಲಾನ್ ಮಸ್ಕ್ (@elonmusk) ಜುಲೈ 23,2021
ಹೀಗೆ ಟ್ವೀಟ್ ಮಾಡಿದ್ದಾರೆ ಎಲಾನ್ ಮಸ್ಕ್.
ರಾಯಿಟರ್ಸ್ ವರದಿ ಪ್ರಕಾರ, ಟೆಸ್ಲಾದಿಂದ ಈ ವರ್ಷ ಭಾರತದಲ್ಲಿ ಮಾರಾಟ ಶುರು ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಇದನ್ನು ಸಚಿವಾಲಯಕ್ಕೆ ಮತ್ತು ದೇಶದ ಥಿಂಕ್ ಟ್ಯಾಂಕ್ ನೀತಿ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಪೂರ್ತಿಯಾಗಿ ಜೋಡಣೆಯಾದ ಎಲೆಕ್ಟ್ರಿಕ್ ಕಾರುಗಳ ಮೇಲಿನ ಆಮದು ತೆರಿಗೆಯನ್ನು ಶೇ 40ಕ್ಕೆ ಇಳಿಕೆ ಮಾಡಿದರೆ ಅನುಕೂಲ ಆಗುತ್ತದೆ ಎಂದು ಕೂಡ ತಿಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಮದು ಸುಂಕವನ್ನು ಏರಿಕೆ ಮಾಡಿದೆ. ಆದರೆ ಟೆಸ್ಲಾ ಸುಂಕ ಇಳಿಕೆ ಮಾಡುವಂತೆ ಪ್ರಯತ್ನ ಮಾಡುತ್ತಿದೆ. “ತಾತ್ಕಾಲಿಕವಾಗಿಯಾದರೂ ಎಲೆಕ್ಟ್ರಿಕ್ ವಾಹನಗಳ ಮೇಲಿನ ಸುಂಕಗಳಿಂದ ಪರಿಹಾರ ನೀಡಬಹುದು ಎಂಬ ಭರವಸೆ ನಮಗಿದೆ. ಹಾಗೊಂದು ವೇಳೆ ಮಾಡಿದಲ್ಲಿ ಅದಕ್ಕೆ ನಮ್ಮ ಮೆಚ್ಚುಗೆ ಇದೆ,” ಎಂದು ಮಸ್ಕ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಸದ್ಯಕ್ಕೆ ಭಾರತದಲ್ಲಿ ಪೂರ್ತಿಯಾಗಿ ಆಮದು ಮಾಡಿಕೊಂಡ ಸಿಐಎಫ್ (ವೆಚ್ಚ, ಇನ್ಷೂರೆನ್ಸ್ ಮತ್ತು ಸಾಗಣೆ) ಕಾರು 4 ಲಕ್ಷ ಯುಎಸ್ಡಿ ಮೇಲಿನ ಮೊತ್ತ ಇದ್ದಲ್ಲಿ aದರ ಮೇಲೆ ಶೇ 100ರಷ್ಟು ಆಮದು ಸುಂಕ ಇದೆ. ಮತ್ತು ಅದಕ್ಕಿಂತ ಕಡಿಮೆ ಬೆಲೆ ಇದ್ದಲ್ಲಿ ಶೇ 60ರಷ್ಟು ತೆರಿಗೆ ಇದೆ.
ಇದನ್ನೂ ಓದಿ: ಭಾರತಕ್ಕೆ ಕಾಲಿಡೋಕೆ ಸಿದ್ಧವಾಯ್ತು ಟೆಸ್ಲಾ ಕಾರು: ಇದರ ಬೆಲೆ ಎಷ್ಟು ಗೊತ್ತಾ?