ಬೆಂಗಳೂರು: ಭಾರತೀಯ ಆರ್ಥಿಕತೆಯು (Indian economy) ರಚನಾತ್ಮಕವಾಗಿ ರೂಪಾಂತರ ಹೊಂದುತ್ತಿದೆ. ದೀಪಾವಳಿ ಹಬ್ಬದ ವಾರದಲ್ಲಿ ಇದೇ ಮೊದಲ ಬಾರಿಗೆ ನಗದು ಚಲಾವಣೆ 20 ವರ್ಷಗಳ ಕನಿಷ್ಠಕ್ಕೆ ಕುಸಿದಿತ್ತು ಎಂದು ಎಸ್ಬಿಐ (SBI) ಸಂಶೋಧನಾ ವರದಿ ತಿಳಿಸಿದೆ. ಭಾರತದ ನಗದು ಆಧಾರಿತ ಅರ್ಥವ್ಯವಸ್ಥೆ ಈಗ ಸ್ಮಾರ್ಟ್ಫೋನ್ ಆಧಾರಿತ ಪಾವತಿ ಆರ್ಥಿಕತೆಯಾಗಿ ರೂಪಾಂತರ ಹೊಂದುತ್ತಿದೆ. ಸಂಪರ್ಕರಹಿತ ಡಿಜಿಟಲ್ ವಹಿವಾಟು ಹೆಚ್ಚಾಗಲು ಕೋವಿಡ್-19 ಸಾಂಕ್ರಾಮಿಕವೂ ಕಾರಣ. ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜನ ಒಪ್ಪಿಕೊಳ್ಳುತ್ತಿದ್ದು, ನಗದಿನ ಮೇಲಿನ ಅತಿಯಾದ ಅವಲಂಬನೆ ನಿಧಾನವಾಗಿ ಮರೆಯಾಗುತ್ತಿದೆ ಎಂದು ವರದಿ ಹೇಳಿದೆ.
ಸರ್ಕಾರದ ಪ್ರೋತ್ಸಾಹ ಮುಖ್ಯ ಕಾರಣ
ಆರ್ಥಿಕತೆಯನ್ನು ಅನೌಪಚಾರಿಕಗೊಳಿಸಲು ಮತ್ತು ಡಿಜಿಟಲೀಕರಣಗೊಳಿಸಲು ಸರ್ಕಾರ ಪಟ್ಟುಬಿಡದೆ ಶ್ರಮ ವಹಿಸಿದೆ. ಸರ್ಕಾರವು ರೂಪಿಸಿದ ಯುಪಿಐ, ವಾಲೆಟ್ಗಳು ಮತ್ತು ಪಿಪಿಐಗಳಂಥ (Prepaid Payment Instruments) ವ್ಯವಸ್ಥೆಗಳು ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿವುದನ್ನು ಸರಳಗೊಳಿಸಿದವು. ಕ್ಯುಆರ್ ಕೋಡ್, ಎನ್ಎಫ್ಸಿ ಇತ್ಯಾದಿಗಳಿಂದಾಗಿ ವ್ಯವಸ್ಥೆ ಮತ್ತಷ್ಟು ಸರಳವಾಯಿತು. ದೊಡ್ಡ ತಂತ್ರಜ್ಞಾನ ಸಂಸ್ಥೆಗಳೂ ಡಿಜಿಟಲ್ ಉದ್ದಿಮೆಯಲ್ಲಿ ತೊಡಗಿಸಿಕೊಂಡವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರ್ಷದಿಂದ ವರ್ಷಕ್ಕೆ ಕಡಿಮೆಯಾದ ನಗದು ಚಲಾವಣೆ
ಎಸ್ಬಿಐ ಸಂಶೋಧನೆ ವರದಿಯಲ್ಲಿ ಐಎಂಪಿಎಸ್, ಯುಪಿಐ, ಪಿಪಿಐ ಹಾಗೂ ಸಿಐಸಿ (ಕ್ಯಾಶ್ ಇನ್ ಸರ್ಕ್ಯುಲೇಷನ್) ನಗದು ವಹಿವಾಟಿನ ಬಗ್ಗೆ ಉಲ್ಲೇಖಿಸಲಾಗಿದೆ. 16ನೇ ಹಣಕಾಸು ವರ್ಷದಲ್ಲಿ ಶೇಕಡಾ 88ರಷ್ಟಿದ್ದ ನಗದು ಚಲಾವಣೆ 22ನೇ ಹಣಕಾಸು ವರ್ಷದಲ್ಲಿ ಶೇಕಡಾ 20ಕ್ಕೆ ಇಳಿಕೆಯಾಗಿದೆ. ಇದು 27ನೇ ಹಣಕಾಸು ವರ್ಷದ ವೇಳೆಗೆ ಶೇಕಡಾ 11.15ಕ್ಕೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 16ನೇ ಹಣಕಾಸು ವರ್ಷದಲ್ಲಿ ಶೇಕಡಾ 11.26ರಷ್ಟಿದ್ದ ಡಿಜಿಟಲ್ ಹಣ ಚಲಾವಣೆ ಪ್ರಮಾಣ 22ನೇ ಹಣಕಾಸು ವರ್ಷದಲ್ಲಿ ಶೇಕಡಾ 80.4ಕ್ಕೆ ತಲುಪಿದೆ. ಇದು 2027ರ ವೇಳೆಗೆ ಶೇಕಡಾ 88ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಎಸ್ಬಿಐ ಸಂಶೋಧನಾ ವರದಿ ತಿಳಿಸಿದೆ.
ದಿಢೀರ್ ಹೆಚ್ಚಳ ಕಂಡ ಯುಪಿಐ ಪಾವತಿ
2016ರಲ್ಲಿ ಶೇಕಡಾ 0 ಇದ್ದ ಯುಪಿಐ ಪಾವತಿ ಪ್ರಮಾಣ 2022ರಲ್ಲಿ ಶೇಕಡಾ 16ಕ್ಕೆ ತಲುಪಿದೆ. ಚೆಕ್ ಸೇರಿದಂತೆ ಕಾಗದಸಹಿತ ಹಣಕಾಸು ವಹಿವಾಟು ಶೇಕಡಾ 46ರಿಂದ 12.7ಕ್ಕೆ ಇಳಿಕೆಯಾಗಿದೆ. 2022ರ ಅಕ್ಟೋಬರ್ ವೇಳೆಗೆ ಯುಪಿಐ ಪಾವತಿ 12 ಲಕ್ಷ ಕೋಟಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ನೋಟು ಅಮಾನ್ಯೀಕರಣದ 6 ವರ್ಷಗಳ ನಂತರವೂ ಜನರಲ್ಲಿರುವ ನಗದು ₹ 30.88 ಲಕ್ಷ ಕೋಟಿ
ನಗದು ಚಲಾವಣೆ ಕಡಿಮೆಯಾಗಿರುವುದು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ನಗದು ಮೀಸಲು ಅನುಪಾತ (CRR) ಕಡಿತದ ಮಧ್ಯೆ ಹೋಲಿಕೆ ಕಂಡುಬಂದಿದೆ. ಇದು ಠೇವಣಿಗಳ ಕಡಿಮೆ ಸೋರಿಕೆಗೆ ಕಾರಣವಾಗುತ್ತದೆ ಮತ್ತು ವಿತ್ತೀಯ ಪ್ರಸರಣದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ